ಬೆಳೆ ವಿಮೆಗೆ ನೋಂದಾಯಿಸಲು ರೈತರಿಗೆ ಜಾಗೃತಿ ಮೂಡಿಸಲು ಸೂಚನೆ

0
14
loading...

ವಿಜಯಪುರ: ಬೆಳೆ ನಷ್ಟ ಅನುಭವಿಸುವ ರೈತರ ಅನುಕೂಲಕ್ಕಾಗಿ ಇರುವ ಫಸಲ ಬಿಮಾ ಯೋಜನೆಯಡಿ ಹೆಚ್ಚೆಚ್ಚು ರೈತರು ನೋಂದಾಯಿಸುವಂತೆ ನೋಡಿಕೊಳ್ಳಲು ಪ್ರಾದೇಶಿಕ ಆಯುಕ್ತರಾದ ಪಿ.ಎ.ಮೇಘಣ್ಣವರ ಅವರು ಸಂಬಂಧಿಸಿ ಅಧಿಕಾರಿಗಳಿಗೆ ಸೂಚಿಸಿದರು.
ನಗರದ ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿಂದು ಕಂದಾಯ ಇಲಾಖೆ ಹಾಗೂ ವಿವಿಧ ಜಿಲ್ಲಾ ಮಟ್ಟದ ಅಧಿಕಾರಿಗಳೊಂದಿಗೆ ಪ್ರಗತಿ ಪರಿಶೀಲನಾ ಸಭೆ ನಡೆಸಿದ ಅವರು, ಬೆಳೆ ನಷ್ಟ ಅನುಭವಿಸುವ ರೈತರಿಗೆ ಬೆಳೆ ವಿಮಾ ಯೋಜನೆ ಅತ್ಯಂತ ಉಪಯುಕ್ತವಾಗಿದ್ದು, ಈ ಕುರಿತಂತೆ ರೈತ ಸಮುದಾಯದಲ್ಲಿ ತಿಳಿ ಹೇಳಿ ವಿಶ್ವಾಸ ಮೂಡಿಸುವಂತೆ ಅವರು ಸೂಚನೆ ನೀಡಿದರು.
ಬೆಳೆ ವಿಮೆಗೆ ಸಂಬಂಧಪಟ್ಟಂತೆ ರೈತ ಸಂಪರ್ಕ ಕೇಂದ್ರ, ಬ್ಯಾಂಕ್‌ಗಳು ಹಾಗೂ ಹೋಬಳಿ ವ್ಯಾಪ್ತಿಯಲ್ಲಿ ಜಾಗೃತಿ ಮೂಡಿಸಿ ನಿಗದಿತ ಅವಧಿಯೊಳಗೆ ನಿಗದಿತ ಅರ್ಜಿ ನಮೂನೆಯೊಂದಿಗೆ ನೋಂದಾಯಿಸಿಕೊಳ್ಳಲು ಕ್ರಮ ಕೈಗೊಳ್ಳಬೇಕು. ಸಂಬಂಧಪಟ್ಟ ಬ್ಯಾಂಕ್‌ಗಳಿಗೂ ಬೆಳೆ ವಿಮೆ ಕುರಿತಂತೆ ರೈತರಿಗೆ ಅವಶ್ಯಕ ನೆರವು ದೊರಕಿಸುವ ಕುರಿತು ಜಿಲ್ಲಾಧಿಕಾರಿಗಳು ಮತ್ತು ಜಿಲ್ಲಾ ಪಂಚಾಯತ್‌ ಮುಖ್ಯ ಕಾರ್ಯನಿರ್ವಹಣಾಧಿಕಾರಿಗಳು ವಿಶೇಷ ಗಮನ ನೀಡುವಂತೆಯೂ ಸಲಹೆ ನೀಡಿದರು.
ಸಭೆಯಲ್ಲಿ ಜಿಲ್ಲಾ ಪಂಚಾಯತ್‌ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಎಂ.ಸುಂದರೇಶಬಾಬು, ಅಪರ ಜಿಲ್ಲಾಧಿಕಾರಿ ಎಚ್‌.ಪ್ರಸನ್ನ ಸೇರಿದಂತೆ ಜಿಲ್ಲಾ ಮಟ್ಟದ ಅಧಿಕಾರಿಗಳು ಉಪಸ್ಥಿತರಿದ್ದರು.

loading...