ಭವಿಷ್ಯ ನುಡಿಯುವ ವಿಸ್ಮಯಕಾರಿಯಾದ ದೇವತೆ ವಿಗ್ರಹ

0
23
loading...

ರವಿ ಮೇಗಳಮನಿ

ಹಿರೇಕೆರೂರ: ಭವಿಷ್ಯಗಳನ್ನು ನುಡಿಯುತ್ತಿರುವ ವಿಚಿತ್ರ ವಿಗ್ರಹ, ನೂರಾರು ಸಮಸ್ಯೆಗಳಿಗೆ ಪರಿಹಾರ ಸೂಚಿಸುತ್ತಿರುವ ದೇವತೆ, ಚುನಾಚಣೆಗೂ ಮೊದಲೇ ರಾಜಕೀಯ ಸ್ತಿತ್ಯಂತರದ ಬಗ್ಗೆ ಭವಿಷ್ಯ ನುಡಿದ ದೇವತೆ !
ಪ್ರಕೃತಿಯು ವಿಸ್ಮಯಗಳ ಆಗರ. ಇಲ್ಲಿ ಬಗೆದಷ್ಟು ಕುತೂಹಲಗಳ ಸಾಗರ ನಮ್ಮ ಕಣ್ಣ ಮುಂದೆ ದೊರೆಯುತ್ತವೆ. ಇಲ್ಲಿ ನಡೆಯುವುದು ನಂಬಿಕೆ ಆಧಾರದ ಮೇಲೆ. ಕಲ್ಲು, ಮಣ್ಣು, ಗಿಡ ಮರ, ಪ್ರಾಣಿ ಪಕ್ಷಿ ಸಂಕುಲಗಳಲ್ಲಿ ದೇವರನ್ನು ಕಾಣುವುದು ಮತ್ತು ಅವುಗಳನ್ನು ಪೂಜಿಸುವುದು ನಮ್ಮ ಸಂಪ್ರದಾಯ ಮತ್ತು ಈ ಮಣ್ಣಿನ ಗುಣ. ಪ್ರಪಂಚದಲ್ಲಿ ಎಲ್ಲಿಯೂ ಕಾಣದ ವಿಚಿತ್ರ ಪದ್ಧತಿ, ಆಚರಣೆ ನಮ್ಮಲ್ಲಿ ಕಂಡು ಬರುತ್ತದೆ. ಎಲ್ಲರಲ್ಲೂ, ಎಲ್ಲದರಲ್ಲೂ ದೇವರು ಕಂಡ ಉದಾಹರಣೆಗಳು ನಮ್ಮಲ್ಲಿವೆ. ನಮ್ಮ ಅನುಭವಕ್ಕೆ ಬಂದವುಗಳನ್ನು ಮಾತ್ರ ನಾವು ನಂಬುತ್ತೇವೆ. ಉಳಿದವುಗಳನ್ನು ಮೂಢ ನಂಬಿಕೆ ಎಂದು ದೂರ ಮಾಡುತ್ತೇವೆ. ಇದು ಅವರವರ ಭಾವ ಪ್ರಪಂಚಕ್ಕೆ ಬಿಟ್ಟಿದ್ದು.

ಪ್ರಸ್ತುತ ನಾವು ಹೇಳ ಹೊರಟಿರುವುದು ಎಲ್ಲಿಯೋ ನದಿಯಲ್ಲಿ ಸಿಕ್ಕ ವಿಗ್ರಹವೊಂದು ಪವಾಡಗಳನ್ನು ಸೃಷ್ಠಿ ಮಾಡುತ್ತಿರುವ ವಿಷಯ. ಹಾವೇರಿ ಜಿಲ್ಲೆ ಹಿರೇಕೆರೂರ ತಾಲೂಕಿನ ಗಡಿ ಹಳ್ಳಿಯಾದ ಮತ್ತು ರಟ್ಟೀಹಳ್ಳಿ ಮಾಸೂರ ತಿಪ್ಪಾಯಿಕೊಪ್ಪ ಮಾರ್ಗದ ಮೂಲಕ ಸಂಚರಿಸಿದರೆ ಸಿಗುವ ಗ್ರಾಮವೊಂದರಲ್ಲಿ ವಿಗ್ರಹವೊಂದು ಪವಾಡಗಳನ್ನು ಸೃಷ್ಠಿಸುತ್ತ ಎಲ್ಲರನ್ನು ವಿಸ್ಮಯಗೊಳಿಸುತ್ತಿರುವ ಆ ಗ್ರಾಮವೇ ನಿಡನೇಗಿಲ ಗ್ರಾಮ.
ವಿಗ್ರಹದ ಹಿಂದೆ ಇರುವ ರೋಚಕ ಕಹಾನಿ :ನಾಲ್ಕಾರು ವರ್ಷಗಳ ಹಿಂದೆ ಗ್ರಾಮದ ದೇವಸ್ಥಾನ ಮತ್ತು ಶಾಲಾ ಆವರಣ ಗೋಡೆ ನಿರ್ಮಿಸಲು ಮರಳನ್ನು ತರುವ ಕಾಮಗಾರಿ ನಡೆದಿತ್ತು. ವಾಲ್ಮೀಕಿ ಸಮಾಜದ ಬಾಂಧವರು ಮರಳನ್ನು ದಾವಣಗೆರೆ ಜಿಲ್ಲೆ ಹರಿಹರ ತಾಲೂಕಿನ ಫತ್ತೇಪೂರ ಗ್ರಾಮದಿಂದ ಪೂರೈಸುತ್ತಿದ್ದರು. ಹೀಗೆ ಟ್ರಾಕ್ಟರ್ ಮೂಲಕ ಯಾರಿಗೂ ಗೊತ್ತಾಗದಂತೆ ವಿಗ್ರಹವೊಂದು ಮರಳ ರಾಶಿಯಲ್ಲಿ ಹುದುಗಿ ಗ್ರಾಮಕ್ಕೆ ಆಗಮಿಸಿದೆ. ಆದರೆ ಎಲ್ಲರೂ ವಿಗ್ರಹವನ್ನು ನಿರ್ಲಕ್ಷಿಸಿ ದೇವಸ್ಥಾನದ ಬದಿಯಲ್ಲಿಯೇ ಬಿಟ್ಟಿದ್ದಾರೆ. ಹೀಗೆ ಗ್ರಾಮಕ್ಕೆ ಆಗಮಿಸಿದ ವಿಗ್ರಹ ಅನಾಥವಾಗಿ ನಿಂತಿದೆ.

ವಿಗ್ರಹದ ವಿಶೇಷತೆ : ವಿಗ್ರಹ ಎರಡೂವರೆ ಅಡಿ ಎತ್ತರವಿದ್ದು ನಕ್ಷತ್ರಾಕಾರದ ಪೀಠ ಹೊಂದಿದೆ. ಪೀಠದ ಮೇಲೆ ಏಳು ಕುದುರೆಗಳಿದ್ದು, ಅವುಗಳನ್ನು ನಿಯಂತ್ರಿಸುವ ದೇವರೊಬ್ಬ ಇದ್ದಾರೆ. ಈ ದೇವರು ಯಾವುದು ಎಂದು ಯಾರಿಗೂ ಹೊಳೆದಿಲ್ಲ. ಸಾಮಾನ್ಯವಾಗಿ ನೋಡಿದರೆ ಸೂರ್ಯ ದೇವರಂತೆ ಕಂಗೊಳಿಸುತ್ತಿದೆ. ಆದರೆ ದೇವರ ಮೂರ್ತಿ ನೋಡಿದರೆ ಹೆಣ್ಣು ದೇವರಂತೆ ಗೋಚರಿಸುತ್ತದೆ. ಸೂಕ್ಷ್ಮ ಕೆತ್ತನೆ ಇರುವುದರಿಂದ ವಿಗ್ರಹ ಎಲ್ಲರ ಮನಸೂರೆಗೊಳ್ಳುತ್ತಿದೆ.
ವಿಗ್ರಹ ನಿರ್ಲಕ್ಷಿಸಿದರ ಪರಿಣಾಮವಾಗಿ ಕಾಮಗಾರಿಯ ಹೊಣೆ ಹೊತ್ತಿದ್ದ ಗ್ರಾಮದ ಮುಖಂಡರಾದ ಬಸಪ್ಪ ಕೆಂಚಪ್ಪ ಕುರಿಯವರ (ಬಣಕಾರ) ವಿಚಿತ್ರ ಸಮಸ್ಯೆಗಳಿಗೆ ಸಿಲುಕಿದ್ದಾರೆ. ಕಟ್ಟಡ ಉಸ್ತುವಾರಿ ನೋಡಿಕೊಳ್ಳುತ್ತಿದ್ದವನ ಅಭಿಪ್ರಾಯದ ಮೇರೆಗೆ ವಿಗ್ರಹದ ರಕ್ಷಣೆಗೆ ಮುಂದಾದಾಗ ಸಮಸ್ಯೆಗಳೆಲ್ಲ ತಾವೇ ದೂರಾಗಿವೆ. ಯಾವ ದೇವರನ್ನು ಪೂಜಿಸದ ಬಣಕಾರ ಈ ವಿಗ್ರಹವನ್ನು ಪೂಜಿಸಲು ಆರಂಭಿಸಿದ್ದಾರೆ. ಇಷ್ಟೆಲ್ಲ ವಿಚಿತ್ರ ನಡೆದರೂ ವಿಗ್ರಹ ಯಾವುದೆಂದು ಗುರುತಿಸಲು ಯಾರಿಂದಲೂ ಆಗಿಲ್ಲ.

ವಿಗ್ರಹ ಉತ್ತರಿಸುವ ಪರಿ : ವಿಗ್ರಹ ಯಾವುದೆಂದು ಅರಿಯದಾದಾಗ ಗ್ರಾಮದ ಗುರುಗಳಲ್ಲಿ ವಿಚಾರಿಸಿದಾಗ ಮೇಲ್ನೋಟಕ್ಕೆ ಸೂರ್ಯ ದೇವರಂತೆ ಕಂಡು ಬಂದರೂ ದೇವಿ ವಿಗ್ರಹದಂತೆ ಕಾಣುತ್ತಿರುವುದರಿಂದ ದೇವಿಯನ್ನೇ ಪ್ರಶ್ನೆ ಕೇಳುವ ನಿರ್ಧಾರ ಮಾಡಿ ವಿಗ್ರಹ ಗಂಡು ದೇವರಾಗಿದ್ದರೆ, ಸಹಜವಾಗಿ ವಿಗ್ರಹ ಮೇಲಕ್ಕೆ ಬರಲಿ ಎಂದು ಪ್ರಶ್ನೆ ಕೇಳಿ ವಿಗ್ರಹವನ್ನು ಅರ್ಚಕ ಸಿದ್ದಪ್ಪ ಪ್ರಜಾರ ಮೇಲಕ್ಕೆ ಎತ್ತಿದ್ದಾರೆ. ಆದರೆ ವಿಗ್ರಹ ಕದಲದೇ ಹಾಗೇ ಕುಳಿತಿದೆ. ಹೆಣ್ಣು ದೇವರಾಗಿದ್ದರೆ ಮೇಲಕ್ಕೆ ಬರಲಿ ಎಂದು ಪ್ರಶ್ನೆ ಕೇಳಿ ಎತ್ತಿದಾಗ ಅಲ್ಲರೂ ಅಚ್ಚರಿಗೆ ಒಳಗಾಗಿದ್ದಾರೆ ಏಕೆಂದರೆ ವಿಗ್ರಹ ಸಹಜವಾಗಿ ಮೇಲಕ್ಕೆ ಬಂದಿದೆ. ಈ ಮೂಲಕ ವಿಗ್ರಹ ಹೆಣ್ಣು ದೇವರೆಂದು ನಿರ್ಧಾರ ಮಾಡಿ ದೇವಸ್ಥಾನ ಕಟ್ಟಿಸಬೇಕೆ ಬೇಡವೇ ಎಂದು ಪ್ರಶ್ನಿಸಿದಾಗ ಬೇಡ ಎಂಬ ಉತ್ತರ ಬಂದಿದೆ. ಮತ್ತೆ ಎಲ್ಲಿ ಪ್ರತಿಷ್ಠಾಪನೆ ಮಾಡಬೇಕು ಎಂಬ ಸಂದಿಗ್ಧ ಪರಿಸ್ಥಿತಿ ಎದುರಾದಾಗ ಮತ್ತೆ ದೇವಿಯನ್ನೆ ಕೇಳಿದ್ದಾರೆ. ಆಗ ದೇವಿ ಬೀರದೇವರ ದೇವಸ್ಥಾನದ ಮುಂಭಾಗದಲ್ಲಿ ಪೂರ್ವಕ್ಕೆ ಮುಖ ಮಾಡಿ ಗದ್ದುಗೆ ಮಾಡಿ ಪ್ರತಿಷ್ಠಾಪನೆ ಮಾಡಿ ಎಂದು ಉತ್ತರ ಸಿಕ್ಕ ಕಾರಣ ಪ್ರಸ್ತುತ ಅಲ್ಲಿ ಪ್ರತಿಷ್ಠಾಪನೆ ಮಾಡಲಾಗಿದೆ. ಹೀಗೆ ಎಲ್ಲದಕ್ಕೂ ಉತ್ತರ ದೊರೆಯಲಾರಂಭಿಸಿದಾಗ ದೇವಿಗೆ ನಾಮಕರಣ ಮಾಡಲು ಯಾವ ನಾಮವನ್ನು ಇಡಬೇಕು ಎಂದು ದೇವಿಯನ್ನೇ ವಿವಿಧ ಹೆಸರುಗಳ ಮುಖಾಂತೆ ಪ್ರಶ್ನಿಸಿದ್ದಾರೆ ಕೊನೆಗೆ ದೇವಿ ಕರಿಕಾಳಮ್ಮ ಎಂಬ ಪ್ರಶ್ನೆಗೆ ಸಮ್ಮತಿ ಸ್ರಚಿಸಿದ ಕಾರಣ ಅಂದಿನಿಂದ ಕರಿಕಾಳಮ್ಮ ಎಂಬ ಹೆಸರಿನಿಂದ ಪ್ರಸಿದ್ಧಿಯನ್ನು ಪಡೆದಿದೆ.
ಪ್ರಸ್ತುತ ಸಮಸ್ಯೆಗಳಿಗೆ ಉತ್ತರ : ಹೀಗೆ ದೇವಿ ಎಲ್ಲ ಪ್ರಶ್ನೆಗಳಿಗೆ ಉತ್ತರ ನೀಡಲಾರಂಭಿಸಿದಾಗ ರಾಜ್ಯ ವಿಧಾನಸಭೆ ಚುನಾವಣೆ ಎದುರಾದಾಗ ಅನೇಕ ಪ್ರಶ್ನೆಗಳನ್ನು ಕೇಳಲಾಗಿದೆ. ದೇವಿ ನ್ಮಡಿದಂತೆ ಪ್ರಸ್ತುತ ಚುನಾವಣಾ ಫಲಿತಾಂಶ ಸರ್ಕಾರ ರಚನೆಯಾಗಿದೆ ಎಂದು ದೇವಿಯ ಅರ್ಚಕ ಬಸಪ್ಪ ಕೆಂಚಪ್ಪ ಕುರಿಯವರ (ಬಣಕಾರ) ತಿಳಿಸಿದ್ದಾರೆ. ರಾಜ್ಯದಲ್ಲಿ ಸಮ್ಮಿಶ್ರ ಸರ್ಕಾರ ಬರುತ್ತದೆ ಅದೂ ಕೂಡಾ ಕಾಂಗ್ರೇಸ್ ಮತ್ತು ಜೆಡಿಎಸ್ ಎಂದು ದೇವಿ ಸೂಚಿಸಿತ್ತು ಎನ್ನಲಾಗಿದೆ. ಆದರೆ ಒಂದು ವರ್ಷದ ನಂತರ ರಾಜಕೀಯದಲ್ಲಿ ಬದಲಾವಣೆ ಆಗಲಿದೆ ಎಂದು ದೇವಿ ಸೂಚಿಸಿದ್ದು, ಕಾದು ನೋಡಬೇಕಾಗಿದೆ ಎಂದು ಬಸಪ್ಪ ಕುರಿಯವರ (ಬಣಕಾರ) ತಿಳಿಸಿದ್ದಾರೆ.

ಪ್ರಸ್ತುತ ಜನರು ತಮ್ಮ ಕುಟುಂಬ ಸಮಸ್ಯೆಗಳಿಗೆ ದೇವಿಯ ಮೂಲಕ ಉತ್ತರ ಕಂಡು ಕೊಳ್ಳುತ್ತಿದ್ದು, ವಾಸಿಯಾಗದ ಕಾಯಿಲೆಗಳು ನಿವಾರಣೆ ಆಗುತ್ತಿರುವ ಉದಾಹರಣೆಗಳು ಗೋಚರಿಸುತ್ತಿವೆ. ಜನಿಸುವ ಮಗೂ ಕೂಡಾ ಗಂಡೆ ಅಥವಾ ಹೆಣ್ಣೆ ಎಂಬುದೂ ಕೂಡಾ ದೇವಿ ನಿಖರವಾಗಿ ಸೂಚಿಸಿದೆ. ಹೀಗೆ ನೂರಾರು ಜನರ ಬಾಳಿನಲ್ಲಿ ಬೆಳಕು ನೀಡುತ್ತಿರುವ ಕರಿಕಾಳಮ್ಮ ದೇವತೆ ಇಂದು ಎಲ್ಲರ ಮನಮೆಚ್ಚಿದ ದೇವತೆಯಾಗಿರುವುದು ಹರ್ಷವಾಗಿದೆ ಎನ್ನುತ್ತಾರೆ ಗ್ರಾಮಸ್ಥರು.
ಪ್ರಸ್ತುತ ದೇವಿಯು ದೇವಸ್ಥಾನ ನಿರ್ಮಾಣಕ್ಕೆ ಅನುಮತಿ ನೀಡಿದ್ದು, ಗ್ರಾಮಸ್ಥರಲ್ಲಿ ಹರ್ಷ ಮನೆಮಾಡಿದೆ. ದೇವಸ್ಥಾನ ನಿರ್ಮಾಣಕ್ಕೆ ನೆರವು ನೀಡುವವರು ಮುಖಂಡ ಬಸಪ್ಪ ಕುರಿಯವರ (ಬಣಕಾರ) ಇವರನ್ನು ಸಂಪರ್ಕಿಸಬಹುದಾಗಿದೆ.

ರಸ್ತೆ ಮಾರ್ಗ:ನಿಡನೇಗಿಲ ಗ್ರಾಮಕ್ಕೆ ಹಿರೇಕೆರೂರ ಪಟ್ಟಣದಿಂದ ಚನ್ನಳ್ಳಿ, ವರಹ ಗ್ರಾಮಗಳ ಮೂಲಕ ಮತ್ತು ರಟ್ಟೀಹಳ್ಳಿ ಪಟ್ಟಣದಿಂದ ಮಾಸೂರ ತಿಪ್ಪಾಯಿಕೊಪ್ಪ ವೀರಾಪುರ ಗ್ರಾಮಗಳ ಮೂಲಕ ಬರಲು ಬಸ್ಸಿನ ಸೌಕರ್ಯಗಳಿವೆ.

loading...