ಭಾರತ ದೇಶ ಕಲೆ, ಸಾಹಿತ್ಯ, ಸಂಸ್ಕೃತಿಯ ತವರು ಮನೆ: ಶಾಸಕ ವೀರಣ್ಣ

0
12
loading...

ಬಾಗಲಕೋಟೆ: ಭಾರತ ದೇಶ ತನ್ನದೇಯಾದ ವಿಶಿಷ್ಟ ಸಾಂಸ್ಕೃತಿಕ ಪರಂಪರೆಯನ್ನು ಬೆಳೆಸಿಕೊಂಡು ಬಂದಿದ್ದು, ಕಲೆ, ಸಾಹಿತ್ಯ ಹಾಗೂ ಸಂಸ್ಕೃತಿಯ ತವರು ಮನೆಯಾಗಿದೆ ಎಂದು ಶಾಸಕ ವೀರಣ್ಣ ಚರಂತಿಮಠ ಹೇಳಿದರು.
ನವನಗರದ ಡಾ.ಬಿ.ಆರ್‌.ಅಂಬೇಡ್ಕರ್‌ ಭವನದಲ್ಲಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಯೋಗದಲ್ಲಿ ಭಾನುವಾರ ಹಮ್ಮಿಕೊಂಡಿದ್ದ ನಾದವಾಹಿನಿ ಸಂಗೀತ ಸಾಂಸ್ಕೃತಿಕ ಕಲಾವಿದರ ಕ್ಷೇಮಾಭಿವೃದ್ಧಿ ಸಂಘದ ಉದ್ಘಾಟನೆ, ಗದಗಿನ ವೀರೇಶ್ವರ ಪುಣ್ಯಾಶ್ರಮದ ಕಲ್ಲಯ್ಯ ಅಜ್ಜನವರಿಗೆ ತುಲಾಭಾರ ಹಾಗೂ ಹಿರಿಯ ಕಲಾವಿದರಿಗೆ ಸನ್ಮಾನ ಸಮಾಂಭದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.
ನಾದವಾಹಿನಿ ಸಂಗೀತ ಸಾಂಸ್ಕೃತಿಕ ಕಲಾವಿದರ ಕ್ಷೇಮಾಭಿವೃದ್ಧಿ ಸಂಘದ ವತಿಯಿಂದ ಕಲ್ಲಯ್ಯ ಅಜ್ಜನವರಿಗೆ ಹಮ್ಮಿಕೊಂಡಿರುವ ತುಲಾಭಾರ ಕಾರ್ಯಕ್ರಮ ಶ್ಲಾಘನೀಯವಾಗಿದ್ದು, ಅಂಧ ಮಕ್ಕಳ ಏಳಿಗೆಗಾಗಿ ಶ್ರಮಿಸುತ್ತಿರುವ ವೀರೇಶ್ವರ ಪುಣ್ಯಾಶ್ರಮಕ್ಕೆ ಇದರಿಂದ ಸಹಾಯಕವಾಗಲಿದೆ. ಹಿರಿಯ ಕಲಾವಿದರನ್ನು ಸತ್ಕರಿಸುವ ಮೂಲಕ ಅವರ ಕಲೆಯನ್ನು ಪ್ರೋತ್ಸಾಹಿಸುತ್ತಿರುವುದು ಉತ್ತಮವಾದ ಕಾರ್ಯವಾಗಿದೆ. ಸಂಸ್ಥೆಯು ಉತ್ತರೋತ್ತರವಾಗಿ ಬೆಳೆಯಲಿ ಎಂದು ಹಾರೈಸಿದರು.
ಸಾನ್ನಿಧ್ಯ ವಹಿಸಿದ್ದ ಗಿರಿಸಾಗರ ಹಿರೇಮಠದ ರುದ್ರಮುನಿ ಸ್ವಾಮೀಜಿ ಮಾತನಾಡಿ, ನಮ್ಮ ಭರತ ಭೂಮಿಯಲ್ಲಿ ಮಾತ್ರ ವಿವಿಧತೆಯಲ್ಲಿ ಏಕತೆಯನ್ನು ಕಾಣಲು ಸಾಧ್ಯ. ಈ ಪುಣ್ಯಭೂಮಿಯಲ್ಲಿ ಪರಸ್ಪರ ಪ್ರೀತಿ, ಪ್ರೇಮವನ್ನು ಹಂಚಿಕೊಂಡು ಬದುಕುವ ಪರಂಪರೆಯನ್ನು ಕಾಣುತ್ತಿದ್ದೇವೆ. ಇಲ್ಲಿ ಕಲಾವಿದರು ಹಾಗೂ ಸಾಹಿತಿಗಳು ದೇಶದ ಸಂಸ್ಕೃತಿಯನ್ನು ಎತ್ತಿಹಿಡಿಯುವ ಕೆಲಸ ಮಾಡುತ್ತಿದ್ದಾರೆ ಎಂದು ಅಭಿಪ್ರಾಯ ಪಟ್ಟರು.
ನಾದವಾಹಿನಿ ಸಂಗೀತ ಸಾಂಸ್ಕೃತಿಕ ಸಂಸ್ಥೆಯು ಕಲೆ ಹಾಗೂ ಕಲಾವಿದರನ್ನು ಪೋಷಿಸುವ ವೇದಿಕೆಯನ್ನು ರೂಪಿಸುವಂತಾಗಬೇಕು ಎಂದು ಸಲಹೆ ನೀಡಿದರು.
ಈ ಸಂದರ್ಭದಲ್ಲಿ ಸಿದ್ಧನಕೊಳ್ಳದ ಶಿವಕುಮಾರ ಸ್ವಾಮೀಜಿ, ಅಮೀನಗಡದ ಭೀಮಣ್ಣೆಮ್ಮ ತಾಯಿ, ಹುಲ್ಯಾಳ ಸದಾಶಿವ ಶಾಖಾ ಮಠದ ಕೃಷ್ಣಯ್ಯ ಸ್ವಾಮೀಜಿ, ಬಿಟಿಡಿಎ ಮಾಜಿ ಅಧ್ಯಕ್ಷ ಜಿ.ಎನ್‌.ಪಾಟೀಲ, ಬಿಟಿಡಿಎ ಸದಸ್ಯ ಸಂತೋಷ ಹೊಕ್ರಾಣಿ, ಎಲ್‌.ಬಿ.ಶೇಖ್‌, ಎಚ್‌.ಎನ್‌.ಶೇಬನ್ನವರ, ಆರ್‌.ಪಿ.ರಾಠೋಡ, ಬಂಗಾರ ಶೆಟ್ರು, ಮಲ್ಲಿಕಾರ್ಜುನ ಮುತ್ತಲಗೇರಿ, ಆರ್‌.ಡಿ.ಬಾಬು, ಮಹಾದೇವ ಹೊಸೂರ ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.
ಸನ್ಮಾನ: ನಾದವಾಹಿನಿ ಸಂಗೀತ ಸಾಂಸ್ಕೃತಿಕ ಕಲಾವಿದರ ಕ್ಷೇಮಾಭಿವೃದ್ಧಿ ಸಂಘದಿಂದ ಗದಗಿನ ವೀರೇಶ್ವರ ಪುಣ್ಯಾಶ್ರಮದ ಕಲ್ಲಯ್ಯ ಅಜ್ಜನವರಿಗೆ ತುಲಾಭಾರ ಹಾಗೂ ಹಿರಿಯ ಕಲಾವಿದರಿಗೆ ಸನ್ಮಾನ ಕಾರ್ಯಕ್ರಮ ಜರುಗಿತು. ಈ ವೇಳೆ ಅನೇಕ ಕಲಾವಿದರು ಹಾಗೂ ಸಾಹಿತ್ಯಾಸಕ್ತರು ಪಾಲ್ಗೊಂಡಿದ್ದರು.

loading...