ಮಕ್ಕಳಿಗೆ ಉತ್ತಮ ಸಂಸ್ಕಾರ ನೀಡಿ: ಶ್ರೀಗಳು

0
29
loading...

ಕನ್ನಡಮ್ಮ ಸುದ್ದಿ-ಗದಗ: ಮಕ್ಕಳಿಗೆ ಉತ್ತಮ ಸಂಸ್ಕಾರ, ಸಂಸ್ಕೃತಿ ನೀಡಲು ಪೋಷಕರು ಮುಂದಾಗಬೇಕೆಂದು ಕಾಶಿ ಡಾ.ಚಂದ್ರಶೇಖರ ಶಿವಾಚಾರ್ಯರು ಹೇಳಿದರು.
ಮಂಗಳವಾರ ಬೆಟಗೇರಿಯ ಅಮೂಲ್ಯ ವಿಶೇಷ ದತ್ತು ಸ್ವೀಕಾರ ಸಂಸ್ಥೆಯಲ್ಲಿ ಪೋಷಣೆಯಾದ 25ನೇ ಗಂಡು ಮಕ್ಕಳನ್ನು ದತ್ತುಪೂರ್ವ ಪೋಷಣೆಗೆ ಮಕ್ಕಳಿಲ್ಲದ ದಂಪತಿಗಳಿಗೆ ಹಸ್ತಾಂತರಿಸಿ ಮಾತನಾಡಿದರು. ದಂಪತಿಗಳು ಮಕ್ಕಳನ್ನು ಪಡೆಯುವುದೇ ಭಾಗ್ಯ. ಧೀರ್ಘಸುಮಂಗಲಿ ಭವ, ಅಷ್ಟ ಪುತ್ರ ಸೌಭಾಗ್ಯವತಿ ಭವ ಎಂದು ಭಾರತೀಯ ಸಂಸ್ಕೃತಿಯಲ್ಲಿ ಹಾರೈಸಿದ ಉದಾಹರಣೆಗಳಿವೆ. ಮಕ್ಕಳಿಗೆ ಉತ್ತಮ ಶಿಕ್ಷಣ ನೀಡುವ ಮೂಲಕ ಅವರಿಗೆ ಭವ್ಯ ಭವಷ್ಯವನ್ನೂ ರೂಪಿಸಬೇಕಿದೆ ಎಂದರು.
ಗ್ರಹಸ್ಥಾಶ್ರಮ ಉಳಿದ ಆಶ್ರಮಗಳಿಗಿಂತಲೂ ಜವಾಬ್ದಾರಿಯುತವಾದ ಆಶ್ರಮವಾಗಿದೆ. ದೇವರನ್ನು ಸಾಕ್ಷಾತ್ಕರಿಸಿಕೊಳ್ಳಲು ಸಾಕಷ್ಟು ಕಠಿಣ ಪರಿಶ್ರಮ ಪಡಬೇಕಿದೆ. ಮಕ್ಕಳನ್ನು ದೇವರಿಗೆ ಹೊಲಿಕೆ ಮಾಡಲಾಗುತ್ತಿದೆ. ಮಕ್ಕಳಲ್ಲಿ ದೇವರ ಸ್ವರೂಪ ಕಾಣಬೇಕೆಂದರು.
ಆದರ್ಶ ಮಕ್ಕಳನ್ನು ಪಡೆಯಲು ಹಿಂದಿನ ಜನ್ಮದ ಪುಣ್ಯ, ಋಣಾನುಬಂಧ ಇದ್ದರೆ ಸಾಧ್ಯಗೊಳ್ಳುವುದು. ಇಂದಿಲ್ಲಿ ಮಕ್ಕಳಿಲ್ಲದ ದಂಪತಿಗಳಿಗೆ ಕಾನೂನುಬದ್ಧವಾಗಿ ಹಸ್ತಾಂತರಿಸಿದ ಗಂಡು ಮಗುವಿಗೆ ವಿಶ್ವನಾಥ ಎಂದು ನಾಮಕರಣ ಮಾಡುವ ಮೂಲಕ ದಂಪತಿಗಳ ಮಡಿಲಿಗೆ ನೀಡಲಾಗಿದೆ. ಈ ಮಗುವಿನ ಭವಿಷ್ಯ ಉಜ್ವಲವಾಗಲಿ. ಪೋಷಕರು ಮಗುವಿಗೆ ಉತ್ತಮ ಸಂಸ್ಕಾರ, ಸಂಸ್ಕೃತಿ, ಶಿಕ್ಷಣ ನೀಡಿ ಮಗುವಿನ ಭವಿಷ್ಯವನ್ನು ರೂಪಿಸಲಿ ಎಂದರು.
ದತ್ತು ಸ್ವೀಕಾರ ಕೇಂದ್ರದ ಅಧ್ಯಕ್ಷ ಮಲ್ಲಿಕಾರ್ಜುನ ಬೆಲ್ಲದ ಮಾತನಾಡಿ, ಸೇವಾ ಭಾರತಿ ಟ್ರಸ್ಟ (ರಿ) ಅಮೂಲ್ಯ ವಿಶೇಷ ದತ್ತು ಸ್ವೀಕಾರ ಸಂಸ್ಥೆ ಸಮಾಜಮುಖಿಯಾಗಿ ಕಾರ್ಯ ಮಾಡುತ್ತಿದ್ದು ಮಕ್ಕಳಿಲ್ಲದ ದಂಪತಿಗಳಿಗೆ ಕಾನೂನುಬದ್ಧವಾಗಿ ಮಕ್ಕಳನ್ನು ನೀಡುವ ಮೂಲಕ ಪುಣ್ಯ ಕಾರ್ಯಕ್ಕೆ ಕೈಜೋಡಿಸಿದೆ ಎಂದರು. ಸೇವಾ ಭಾರತಿ ಟ್ರಸ್ಟನ ಶಂಕರ ಗುಮಾಸ್ತೆ ಅವರು ಸೇವಾ ಭಾರತಿ ಟ್ರಸ್ಟ (ರಿ) ಅಮೂಲ್ಯ ವಿಶೇಷ ದತ್ತು ಸ್ವೀಕಾರ ಸಂಸ್ಥೆ ನಡೆದು ಬಂದ ದಾರಿ ಹಾಗೂ ಕಾರ್ಯವೈಖರಿಯನ್ನು ವಿವರಿಸಿದರು.
ಭಾರತಿ ಶೆಟ್ಟರ ಮಾತನಾಡಿದರು. ಸುಭಾಸ ಬಬಲಾದಿ, ಬಸವರಾಜ ನಾಗಲಾಪೂರ, ಗಾಣಿಗೇರ, ಬೊಮ್ಮನಕಟ್ಟಿ ಉಪಸ್ಥಿತರಿದ್ದರು. ಈಶ್ವರ ನಾಗಲಾಪೂರ ಪ್ರಾರ್ಥಿಸಿದರು, ಸುಭಾಸ ಬಬಲಾದಿ ಸ್ವಾಗತಿಸಿದರು, ಕೆ.ಬಿ.ನಾಗಲಾಪೂರ ನಿರೂಪಿಸಿದರು, ರಾಜೇಶ ಖಟವಟೆ ವಂದಿಸಿದರು.

loading...