ಮಲೀನ ನೀರು ರಸ್ತೆಗೆ ಸಾರ್ವಜನಿಕರ ಆತಂಕ

0
8
loading...

ಕನ್ನಡಮ್ಮ ಸುದ್ದಿ-ಕುಮಟಾ: ಪಟ್ಟಣದ ರಾಜ ಕಾಲುವೆಗಳಲ್ಲಿ ಹೂಳೆತ್ತದ ಪರಿಣಾಮ ತ್ಯಾಜ್ಯಗಳ ಮಲೀನ ನೀರು ರಸ್ತೆಗಳಲ್ಲಿ ಹರಿಯುತ್ತಿರುವುದರಿಂದ ಅನಾರೋಗ್ಯಕರ ವಾತಾವರಣ ಸೃಷ್ಟಿಯಾಗುವ ಆತಂಕ ಸಾರ್ವಜನಿಕರಿಗೆ ಎದುರಾಗಿದೆ.
ಪುರಸಭೆ ವ್ಯಾಪ್ತಿಯ ಗುಡಾಳ, ಕಲಶಂಕ, ಗುಜರಗಲ್ಲಿ ಮತ್ತು ಗುಂದಾದಲ್ಲಿ ರಾಜ ಕಾಲುವೆ ಇದೆ. ಸುಮಾರು ಆರೇಳು ಅಡಿ ಆಳವಿರಬೇಕಾದ ಈ ರಾಜ ಕಾಲುವೆಗಳಲ್ಲಿ ಹೂಳು ತುಂಬಿಕೊಂಡು, ಕಾಲುವೆಗಳ ಆಳ ಕಡಿಮೆಯಾಗಿದೆ. ಅಲ್ಲದೆ ಹಳೇ ಬಸ್‌ ಡಿಪೋ ಸಮೀಪದ ರಾಜಕಾಲುವೆಯಲ್ಲಿ ತ್ಯಾಜ್ಯ ತುಂಬಿಕೊಂಡು ಮಳೆ ನೀರು ಬ್ಲಾಕ್‌ ಆಗಿ ಸಮಸ್ಯೆಯಾಗಿದೆ. ಇದರಿಂದ ಮಳೆ ಜೋರಾಗಿ ಸುರಿದರೆ ಕಾಲುವೆಗಳಲ್ಲಿ ತ್ಯಾಜ್ಯಗಳ ಮಲೀನ ನೀರು ಬೇಗನೆ ತುಂಬಿಕೊಂಡು, ರಸ್ತೆಗಳಲ್ಲಿ ಹರಿಯುತ್ತದೆ. ಇದರಿಂದ ಪಾದಾಚಾರಿಗಳು ಕಲುಷಿತ ನೀರಿನಲ್ಲಿ ಸಾಗುವುದು ಕಿರಿಕಿರಿ ಉಂಟಾಗುತ್ತದೆ. ಕಲುಷಿತ ನೀರಿನ ದುರ್ವಾಸನೆ ಅಸಹನೀಯವಾಗಿದೆ. ಅಲ್ಲದೆ ಮಳೆ ಜೋರಾಗಿ ಬಿಳುವುದರಿಂದ ಕಲುಷಿತ ನೀರು ಸ್ಥಳೀಯರ ಮನೆಗಳ ಆವರಣಗಳಿಗೆ ನುಗ್ಗಿ, ಅನಾರೋಗ್ಯಕರ ವಾತಾವರಣ ನಿರ್ಮಿಸುತ್ತಿದೆ. ಇದರಿಂದ ವಿವಿಧ ಸಾಂಕ್ರಾಮಿಕ ರೋಗಗಳು ಹರಡುವ ಆತಂಕವನ್ನು ಸಾರ್ವಜನಿಕರು ಎದುರಿಸುವಂತಾಗಿದೆ. ಹಾಗಾಗಿ ರಾಜ ಕಾಲುವೆಗಳಲ್ಲಿ ಹೂಳೆತ್ತುವ ಕಾರ್ಯಕ್ಕೆ ಪುರಸಭೆ ಮುಂದಾಗಬೇಕು. ಇಲ್ಲವಾದರೆ ಪ್ರತಿಭಟನೆ ಅನಿವಾರ್ಯ ಎಂದು ಸ್ಥಳೀಯರಾದ ನಾಗಪ್ಪ ರಾಮನಾಥ ಶಾನಭಾಗ ಹಾಗೂ ಮೊದಲಾದವರು ಎಚ್ಚರಿಸಿದ್ದಾರೆ.

ಈ ಕುರಿತು “ಕನ್ನಡಮ್ಮಕ್ಕೆ” ಪ್ರತಿಕ್ರಿಯಿಸಿದ ಪುರಸಭೆ ಅಧ್ಯಕ್ಷ ಮಧುಸೂಧನ ಶೇಟ್‌ ಅವರು, ಪುರಸಭೆಯಲ್ಲಿ ಸಂಪನ್ಮೂಲದ ಕೊರತೆ ಇರುವುದರಿಂದ ರಾಜ ಕಾಲುವೆಗಳ ಹೂಳೆತ್ತುವ ಕಾಮಗಾರಿ ಕೈಗೊಳ್ಳಲು ಸಾಧ್ಯವಾಗುತ್ತಿಲ್ಲ. ಈಗಾಗಲೇ ಗಟಾರಗಳಲ್ಲಿ ಹೂಳೆತ್ತುವ ಕಾರ್ಯ ಮಾಡಿದ್ದೇವೆ. ಪಿಡಬ್ಲುಡಿಗೆ ಸೇರಿದ ಕೆಲ ರಸ್ತೆಗಳು ಕೂಡ ಪುರಸಭೆಗೆ ಹಸ್ತಾಂತರವಾಗಿದ್ದರಿಂದ ಅನುದಾನದ ಕೊರತೆ ಎದುರಾಗುವಂತಾಗಿದೆ. ಕಲಶಂಕದ ಜನರ ಒತ್ತಾಯದ ಮೇರೆಗೆ ಕೆಲ ತಿಂಗಳ ಹಿಂದೆ ಅಲ್ಲಿನ ರಾಜ ಕಾಲುವೆಯಲ್ಲಿ ಹೂಳೆತ್ತುವ ಕಾರ್ಯವನ್ನು ಸಣ್ಣ ನೀರಾವರಿ ಇಲಾಖೆ ಕೈಗೊಂಡಿತ್ತು. ಇನ್ನುಳಿದ ಕಾಲವೆಗಳಲ್ಲೂ ಹೂಳೆತ್ತುವ ಬಗ್ಗೆ ಸಣ್ಣ ನೀರಾವರಿ ಇಲಾಖೆಯ ಅಧಿಕಾರಿಗಳ ಜತೆಗೆ ಚರ್ಚಿಸಿ, ಒತ್ತಾಯಿಸುತ್ತೇನೆ.

loading...