ಮಳೆಗಾಗಿ ಗುರ್ಜಿ ಪೂಜೆ

0
15
loading...

ಕನ್ನಡಮ್ಮ ಸುದ್ದಿ-ನರೇಗಲ್ಲ: ಬಿತ್ತನೆಯಾಗಿ ಬೆಳೆಗಳು ಬೆಳೆಯುವ ಹಂತದಲ್ಲಿದ್ದು, ಮಳೆ ಬಾರದೆ ಬೆಳೆಗಳು ಒಣಗುತ್ತಿದ್ದು, ರೈತರು ಕಂಗಾಲಾಗಿದ್ದಾರೆ. ಮಳೆರಾಯನನ್ನು ವರಿಸಿಕೊಳ್ಳಲು ರೈತರು ಗುರ್ಜಿ ಪೂಜೆಗೆ ಮೊರೆ ಹೋಗುತ್ತಿದ್ದಾರೆ. ಸ್ಥಳೀಯ ಹಿರೇಮಠ ಓಣಿಯ ರೈತ ಮಹಿಳೆಯರು, ಮಕ್ಕಳು ಮಳೆರಾಯನ ಕೃಪೆಗಾಗಿ ಬುಧವಾರ ಗುರ್ಜಿ ಪೂಜೆ ಕೈಗೊಂಡರು.
ಗುರ್ಜಿ ಗುರ್ಜಿ ಅಲ್ಲಾಡಿ ಬಂದೆ ಹಳ್ಳಕೊಳ್ಳ ತಿರಿಗ್ಯಾಡಿ ಬಂದೆ ಕಾರ ಮಳೆಯು ಕಪ್ಪತ ಮಳೆಯು ಸುರಿ ಸುರಿಯೋ ಮಳೆರಾಯ ಎಂದು ಗುರ್ಜಿಯನ್ನು ಹೊತ್ತು ಮಳೆರಾಯನನ್ನು ನೆನೆಯಲಾಯಿತು.
ಗ್ರಾಮೀಣ ಪ್ರದೇಶದಲ್ಲಿ ಶತಶತಮಾನದಿಂದಲೂ ಆಚರಣೆಯಲ್ಲಿರುವ ಗುರ್ಜಿ ಪೂಜೆ ಬಹಳಷ್ಟು ವಿಶಿಷ್ಟವಾದ ಸಂಪ್ರದಾಯ ಎನ್ನಬಹುದು. ಮಕ್ಕಳ ತಲೆ ಮೇಲೆ ಹಂಚು ಇಟ್ಟು ಅದರ ಮೇಲೆ ಆಕಳ ಸೆಗಣೆಯಿಂದ ತಯಾರಿಸಿದ ಗುರ್ಜಿ ಹೊರಿಸಲಾಯಿತು. ಗುರ್ಜಿ ಹೊತ್ತವನ ಹಿಂದೆ ರೈತ ಮಹಿಳೆಯರು, ಮಕ್ಕಳು ಹಾಡು ಹೇಳುತ್ತ ಮೂರು ದಿನಗಳ ಕಾಲ ಗ್ರಾಮದ ಎಲ್ಲ ಕಡೆಗಳಲ್ಲಿ ಸಂಚರಿಸುತ್ತಾರೆ. ಗುರ್ಜಿ ಹೊತ್ತ ರೈತನ ತೆಲೆಯ ಮೇಲೆ ನೀರು ಸುರಿದು ಪ್ರತಿಯೊಬ್ಬರು ಗುರ್ಜಿ ಪೂಜೆ ಮಾಡುವುದರೊಂದಿಗೆ ಮನೆಯಿಂದ ಜೋಳ, ರೊಟ್ಟಿ, ದವಸಧಾನ್ಯ ಹಾಗೂ ಹಣವನ್ನು ಸಂಗ್ರಹಿಸುವುದರ ಮೂಲಕ ಕೊನೆಯ ದಿನ ಹಿರೇಮಠದಲ್ಲಿ ಅನ್ನ ಸಂತರ್ಪಣೆ ಮಾಡುವ ಮೂಲಕ ಮಳೆರಾಯನ ಕೃಪೆಗೆ ವಿಶೇಷ ಪೂಜೆ ಸಲ್ಲಿಸಲಾಗುತ್ತದೆ. ರೇಣುಕಾ ಹಡಪದ, ಅನ್ನಕ್ಕ ಹಡಪದ, ಶಾಂತವ್ವ ಹಡಪದ, ಸುವರ್ಣ ಹಡಪದ, ದ್ರಾಕ್ಷಾಯಿಣಿ ಹಡಪದ, ಲಕ್ಷ್ಮೀ ಹಡಪದ, ಕಳಕಪ್ಪ ಹಡಪದ, ಆನಂದ ಹಡಪದ, ಶಿವು ಹಡಪದ, ನಾಗರಾಜ ಮಡಿವಾಳರ ಸೇರಿದಂತೆ ಇತರರಿದ್ದರು.

loading...