ಮಹಾದೇವ ಸಾಹುಕಾರ ಭೈರಗೊಂಡ ಬಂಧನ

0
15
loading...

ಕನ್ನಡಮ್ಮ ಸುದ್ದಿ-ವಿಜಯಪುರ: ಗಂಗಾಧರ ಚಡಚಣ ನಿಗೂಢ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಪ್ರಮುಖ ಆರೋಪಿಯಾಗಿರುವ ಮಹಾದೇವ ಸಾಹುಕಾರ ಭೈರಗೊಂಡ ಕೊನೆಗೂ ಸಿಐಡಿ ಅಧಿಕಾರಿಗಳು ಬಂಧಿಸಿದ್ದಾರೆ.
ಗುರುವಾರ ನಸುಕಿನ ಜಾವ ಇಂಡಿ ತಾಲೂಕಿನ ಕೆರೂರ ಬಳಿಯ ನಿವಾಸದಲ್ಲಿ ಸಿಐಡಿ ಪೊಲೀಸರು ಮಹಾದೇವ ಸಾಹುಕಾರ ಭೈರಗೊಂಡನನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಕೆರೂರ ನಿವಾಸದಲ್ಲಿ ಮಹಾದೇವ ಸಾಹುಕಾರ ಇರುವುದನ್ನು ಖಚಿತಪಡಿಸಿಕೊಂಡ ಸಿಐಡಿ ಅಧಿಕಾರಿಗಳು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಜಾಮೀನಿಗಾಗಿ ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಲು ಸಿದ್ಧತೆ ಮಾಡಿಕೊಳ್ಳುತ್ತಿದ್ದ ಮಹಾದೇವ ಸಾಹುಕಾರ ಮನೆಗೆ ಭೇಟಿ ನೀಡಲಿದ್ದಾನೆ ಎಂಬ ಖಚಿತ ಮಾಹಿತಿ ಆಧರಿಸಿ ಸಿಐಡಿ ಅಧಿಕಾರಿಗಳು ದಾಳಿ ನಡೆಸಿ ಆರೋಪಿಯನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಮಹಾರಾಷ್ಟ್ರ, ಆಂಧ್ರಪ್ರದೇಶ ಮುಂತಾದ ಭಾಗಗಳಲ್ಲಿ ಮಹಾದೇವ ಸಾಹುಕಾರ ಪತ್ತೆಗೆ ಸಿಐಡಿ ಅಧಿಕಾರಿಗಳು ತೀವ್ರ ಶೋಧ ನಡೆಸಿದ್ದರು.

ಮಹಾದೇವ ಸಾಹುಕಾರ ಭೈರಗೊಂಡನನ್ನು ವಶಕ್ಕೆ ಪಡೆದುಕೊಂಡಿರುವ ಸಿಐಡಿ ಅಧಿಕಾರಿಗಳು ವಿಜಯಪುರ ನಗರದ ಫಾರೆಸ್ಟ್‌ ಐಬಿಯಲ್ಲಿ ಸುದೀರ್ಘ ವಿಚಾರಣೆ ನಡೆಸಿದ್ದಾರೆ. ಕೆರೂರನಿಂದ ವಿಜಯಪುರದ ಅರಣ್ಯ ಇಲಾಖೆಯ ಪ್ರವಾಸಿ ಮಂದಿರಕ್ಕೆ ಕರೆ ತಂದು ಬಳಿಕ ಜಿಲ್ಲಾಸ್ಪತ್ರೆಯಲ್ಲಿ ಆರೋಗ್ಯ ಪರೀಕ್ಷೆ ನಡೆಸಿ ಮಧ್ಯಾಹ್ನ 3ಕ್ಕೆ ಇಂಡಿ ನ್ಯಾಯಾಲಯಕ್ಕೆ ಹಾಜರುಪಡಿಸಲಾಯಿತು.

ಸಿಐಡಿ ಎಸ್‌.ಪಿ. ಆನಂದಕುಮಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಗಂಗಾಧರ ಚಡಚಣ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ತನಿಖೆ ನಿರ್ಣಾಯಕ ಹಂತಕ್ಕೆ ಬಂದಿದೆ, ಪ್ರಕರಣಕ್ಕೆ ಸಂಬಂಧಿಸಿದಂತೆ ಇನ್ನೂ ಹಲವರನ್ನು ಬಂಧಿಸಲಾಗುವುದು ಎಂದು ತಿಳಿಸಿದರು.

ಈಗಾಗಲೇ ತನಖೆ ಚುರುಕುಗೊಂಡಿದೆ, ಪ್ರಕರಣಕ್ಕೆ ಸಂಬಂಧಿಸಿದಂತೆ ಇನ್ನೂ ಅನೇಕರನ್ನು ದಸ್ತಗಿರಿ ಮಾಡುವ ಸಾದ್ಯತೆಗಳೂ ಇವೆ, ಶೀಘ್ರದಲ್ಲೇ ತನಿಖಾ ವರದಿಯನ್ನು ಮಂಡಿಸಲಾಗುತ್ತದೆ. ತೀವ್ರ ಶೋಧ ಕಾರ್ಯಾಚರಣೆ ನಡೆಸಿ ಮಹಾದೇವ ಭೈರಗೊಂಡನನ್ನು ಬಂಧಿಸಲಾಗಿದೆ. ಇಬ್ಬರು ಡಿವೈಎಸ್‌ಪಿ, ಏಳು ಪಿಎಸ್‌ಐ ಸೇರಿದಂತೆ ಹಲವರನ್ನೊಳಗೊಂಡ ತಂಡ ಆರೋಪಿಯನ್ನು ಬಂಧಿಸುವಲ್ಲಿ ಯಶಸ್ವಿಯಾಗಿದೆ ಎಂದರು.
ಆರೋಪಿಯ ಬಂಧನದ ಸಂದರ್ಭದಲ್ಲಿ ಅವರ ಬಳಿ ಯಾವುದೇ ಶಸ್ತ್ರಾಸ್ತ್ರಗಳು ಸಿಕ್ಕಿಲ್ಲ, ಆದರೆ ಈ ಹಿಂದೆಯೇ ಮನೆ ತಪಾಸಣೆ ವೇಳೆ ಕೆಲವು ಶಸ್ತ್ರಾಸ್ತ್ರಗಳು ದೊರಕಿದ್ದು ಈ ಬಗ್ಗೆಯೂ ಸಹ ತನಿಖೆ ನಡೆಯುತ್ತಿದೆ ಎಂದು ತಿಳಿಸಿದರು.

loading...