ಮಾದಕ ವ್ಯಸನಿಗಳಿಂದ ದೇಶದ ಸಾಮಾಜಿಕ ಅಭಿವೃದ್ಧಿ ಕುಂಠಿತ: ಡಾ.ರಾಮಕೃಷ್ಣ

0
9
loading...

ಕನ್ನಡಮ್ಮ ಸುದ್ದಿ-ಕೊಪ್ಪಳ : ಮದ್ಯ ಮತ್ತು ಮಾದಕ ವ್ಯಸನಿಗಳಿಂದಾಗಿ ಸಮಾಜದ ಮೇಲೆ ದುಷ್ಪರಿಣಾಮ ಬೀರುತ್ತಿದ್ದು, ಸಾಮಾಜಿಕ ಅಭಿವೃದ್ಧಿಗೆ ಅಡ್ಡಿಯಾಗಿದೆ ಎಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ. ರಾಮಕೃಷ್ಣ ಅವರು ಹೇಳಿದರು.

ಜಿಲ್ಲಾ ಮಟ್ಟದ ”ಅಂತರ ರಾಷ್ಟ್ರೀಯ ಮಾದಕ ವಸ್ತುಗಳ ಸೇವನೆ ಮತ್ತು ಅಕ್ರಮ ಕಳ್ಳ ಸಾಗಾಣಿಕೆ ವಿರೋಧಿ ಸಪ್ತಾಹ” ಅಂಗವಾಗಿ ನಗರದಲ್ಲಿ ಏರ್ಪಡಿಸಲಾದ ” ಜನಜಾಗೃತಿ ಜಾಥಾ” ಉದ್ಘಾಟಿಸಿ ಮಾತನಾಡಿದ ಅವರು ಭಾರತದಲ್ಲಿ 7.32 ಕೋಟಿ ಜನ ಮದ್ಯ ಮತ್ತು ಮಾದಕ ವಸ್ತುಗಳ ವ್ಯಸನಗಳಾಗಿದ್ದಾರೆ. ಇದರಲ್ಲಿ 6.25 ಕೋಟಿ ಜನ ಮದ್ಯ ವ್ಯಸನಿಗಳು, 87 ಲಕ್ಷ ಜನ ಗಾಂಜಾ ವ್ಯಸನಿಗಳು, 20 ಲಕ್ಷ ಜನ ಅಪೀಮ್ ವ್ಯಸನಿಗಳಾಗಿದ್ದಾರೆ. ಬಹಳಷ್ಟು ರಸ್ತೆ ಅಪಘಾತಗಳು ಮದ್ಯಪಾನ ಹಾಗೂ ಮಾದಕ ವ್ಯಸನಿಗಳಿಂದ ಸಂಭವಿಸುತ್ತವೆ ಎಂಬುದಾಗಿ ವರದಿಗಳಿಂದ ತಿಳಿದುಬರುತ್ತದೆ ಎಂದು ಡಾ. ರಾಮಕೃಷ್ಣ ಕಳವಳ ವ್ಯಕ್ತ ಪಡಿಸಿದರು. ಜಿಲ್ಲಾ ಮಾನಸಿಕ ಕಾರ್ಯಕ್ರಮ ಅನುಷ್ಠಾನ ಅಧಿಕಾರಿ ಡಾ. ಎಸ್.ಕೆ. ದೇಸಾಯಿ ಅವರು ಮಾತನಾಡಿ, ಆತ್ಮಹತ್ಯೆ ಪ್ರಕರಣಗಳಲ್ಲಿ ಶೇ. 25 ರಷ್ಟು ಮದ್ಯಪಾನ ವ್ಯಸನಿಗಳಿಂದ ಸಂಭವಿಸುತ್ತವೆ. ಈ ವರ್ಷ ” ಮೊದಲು ಆಲಿಸಿ – ಮಕ್ಕಳ ಮತ್ತು ಯುವಕರ ಸಮಸ್ಯೆಗಳನ್ನು ಆಲಿಸುವುದು ಅವರ ಆರೋಗ್ಯಕರ ಹಾಗೂ ಸುರಕ್ಷತೆ ಬೆಳವಣಿಗೆಗೆ ಬೇಕಾಗುವ ಮೊದಲ ಹೆಜ್ಜೆ” ಎಂಬ ಘೋಷ ವಾಕ್ಯದಡಿಯಲ್ಲಿ ಈ ಕಾರ್ಯಕ್ರಮವನ್ನು ಆಚರಿಸಲಾಗುತ್ತಿದೆ ಎಂದರು.

loading...