ಮೊತ್ತ ಪಾವತಿಸದೇ ಇರುವುದನ್ನು ಖಂಡಿಸಿ ಪ್ರತಿಭಟನೆ

0
20

ಕನ್ನಡಮ್ಮ ಸುದ್ದಿ-ಹಳಿಯಾಳ: ಸ್ಥಳೀಯ ಸಕ್ಕರೆ ಕಾರ್ಖಾನೆಯವರು 2016-17ನೇ ಕಬ್ಬು ನುರಿಸುವ ಹಂಗಾಮಿಗೆ ಅನ್ವಯವಾಗುವಂತೆ ಕಬ್ಬು ಬೆಳೆಗಾರರಿಗೆ ನೀಡುವುದಾಗಿ ಹೇಳಿದರೂ ಸಹ ನೀಡಬೇಕಾದ ಮೊತ್ತ ಪಾವತಿಸದೇ ಇರುವುದನ್ನು ಖಂಡಿಸಿ ಕಬ್ಬು ಬೆಳೆಗಾರರ ಸಂಘದ ವತಿಯಿಂದ ಬೃಹತ್‌ ಪ್ರತಿಭಟನೆಯ ಸಿದ್ಧತೆ ನಡೆದಿದೆ.
ಕಬ್ಬು ಬೆಳೆಗಾರರ ಸಂಘದ ಹಳಿಯಾಳ, ಕಲಘಟಗಿ, ಕಿತ್ತೂರ ಭಾಗಗಳ ಪದಾಧಿಕಾರಿಗಳು ಸೋಮವಾರ ಸಭೆ ಸೇರಿ ಈ ಬಗ್ಗೆ ಚರ್ಚೆ ನಡೆಸಿ ಆಗಸ್ಟ್‌ 6 ರಂದು ಹಮ್ಮಿಕೊಂಡ ಪ್ರತಿಭಟನೆಯನ್ನು ಪರಿಣಾಮಕಾರಿಯಾಗಿ ಮಾಡುವ ಬಗ್ಗೆ ನಿರ್ಧಾರ ಕೈಗೊಂಡರು.
ಹಳಿಯಾಳ ತಹಶೀಲ್ದಾರ ಮಾತ್ರವಲ್ಲದೇ ಉತ್ತರಕನ್ನಡ ಜಿಲ್ಲಾಧಿಕಾರಿ ಇವರ ಸಮಕ್ಷಮ ನಡೆದ ಸಭೆಯಲ್ಲಿ ಹಳಿಯಾಳದ ಪ್ಯಾರಿ ಕಂಪನಿಯ ಸಕ್ಕರೆ ಕಾರ್ಖಾನೆಯವರು ಪ್ರತಿ ಟನ್‌ ಕಬ್ಬಿಗೆ 305 ರೂ.ಗಳಂತೆ ನೀಡುವುದಾಗಿ ಒಪ್ಪಿಗೆ ಸೂಚಿಸಿದ್ದು ಆ ಸಭೆಗಳಲ್ಲಿ ಠರಾವಿನ ಪುಸ್ತಕಗಳಲ್ಲಿ ನಮೂದಾಗಿದೆ. ಕಳೆದ ವರ್ಷದ ಕಬ್ಬು ನುರಿಸುವ ಹಂಗಾಮು ಆರಂಭಗೊಳ್ಳುವ ಸಂದರ್ಭದಲ್ಲಿ ಹಿಂದಿನ ವರ್ಷದ ಮೊತ್ತ ನೀಡುವುದಾಗಿ ತಿಳಿಸಿ ರೈತರಿಂದ ಕಬ್ಬು ಪಡೆದಿದ್ದರು. ಕಬ್ಬು ನುರಿಸುವ ಹಂಗಾಮು ಮುಗಿದು ಪ್ರಸಕ್ತ ವರ್ಷದ ಕಬ್ಬು ನುರಿಸುವ ಹಂಗಾಮು ಸಮೀಪಿಸುತ್ತಿದ್ದರೂ ಸಹ ಸಕ್ಕರೆ ಕಾರ್ಖಾನೆಯವರು ಆ ಬಾಕಿ ಮೊತ್ತ ನೀಡುತ್ತಿಲ್ಲ. ಹೀಗಾಗಿ ರೈತರು ತಮ್ಮ ಹಕ್ಕಿನ ಮೊತ್ತವನ್ನು ಪಡೆದುಕೊಳ್ಳಲು ಉಗ್ರ ಹೋರಾಟದ ಹಾದಿ ಹಿಡಿಯಬೇಕಾಗಿರುವುದು ಅನಿವಾರ್ಯವಾಗಿದೆ.
ಪೂರ್ವಭಾವಿ ಸಭೆಯ ನಂತರ ಏರ್ಪಡಿಸಲಾಗಿದ್ದ ಪತ್ರಿಕಾಗೋಷ್ಠಿಯಲ್ಲಿ ಕಬ್ಬು ಬೆಳೆಗಾರರ ಸಂಘದ ಹಳಿಯಾಳ ತಾಲೂಕಾಧ್ಯಕ್ಷ ಶಂಕರ ಕಾಜಗಾರ, ಪ್ರಧಾನ ಕಾರ್ಯದರ್ಶಿ ಅಶೋಕ ಮೇಟಿ, ರಾಜ್ಯ ಉಪಾಧ್ಯಕ್ಷ ಎಂ.ವಿ. ಘಾಡಿ, ಕಲಘಟಗಿಯ ಎಸ್‌.ಎನ್‌. ಬಣವಣ್ಣವರ, ಕಿತ್ತೂರಿನ ಪ್ರವೀಣ ಬಾಬು ಸರದಾರ, ಸ್ಥಳೀಯ ಹಿರಿಯ ಮುಖಂಡರಾದ ಯು.ಕೆ. ಬೋಬಾಟಿ, ಜಿ.ಆರ್‌. ಪಾಟೀಲ ಮೊದಲಾದವರು ಮಾತನಾಡಿದರು.
ಕಬ್ಬು ಬೆಳೆಗಾರರಿಗೆ ಆದ ಅನ್ಯಾಯದ ವಿರುದ್ಧ ಏರ್ಪಡಿಸಲಾಗಿರುವ ಪ್ರತಿಭಟನೆ ಈಡೇರುವವರೆಗೆ ಮುಂದುವರಿಯುತ್ತದೆ. ಅನ್ಯಾಯ ಎಸಗುತ್ತಿರುವ ಸ್ಥಳೀಯ ಸಕ್ಕರೆ ಕಾರ್ಖಾನೆಯ ಜೊತೆಗೆ ಸ್ಥಳೀಯ ಕೆಲ ಪ್ರಮುಖ ರಾಜಕಾರಣಿಗಳು ಶಾಮೀಲಾಗಿ ಗೊಂದಲ ಹುಟ್ಟಿಸಲು ಯತ್ನಿಸಿದರೂ ಸಹ ಕಬ್ಬು ಬೆಳೆಗಾರ ರೈತರ ಹೋರಾಟ ಯಶಸ್ವಿಯಾಗುವುದು ನಿಶ್ಚಿತ ಎಂದರು.
ಈ ಸಮಸ್ಯೆಯ ಬಗ್ಗೆ ಈಗಾಗಲೇ ರವಿವಾರ ಹಳಿಯಾಳಕ್ಕೆ ಆಗಮಿಸಿದ ಸ್ಥಳೀಯ ಶಾಸಕ ಹಾಗೂ ರಾಜ್ಯ ಕಂದಾಯ ಸಚಿವ ಆರ್‌.ವಿ. ದೇಶಪಾಂಡೆಯವರಿಗೆ ಮನವಿ ನೀಡಲಾಗಿದೆ. ಆದರೆ ಆ ಮನವಿಗೆ ಅವರಿಂದ ಯಾವುದೇ ಸ್ಪಂದನವಾಗಲಿ, ಪ್ರತಿಕ್ರಿಯೆಯಾಗಲಿ, ಭರವಸೆಯಾಗಲಿ ದೊರೆತಿಲ್ಲ ಎಂದು ನಿರಾಶೆ ವ್ಯಕ್ತಪಡಿಸಿದರು.
ಹಲವಾರು ಸಂದರ್ಭಗಳಲ್ಲಿ ರೈತರ ಹೋರಾಟದ ಪರಿಣಾಮವಾಗಿಯೇ ರೈತರಿಗೆ ನ್ಯಾಯ ದೊರೆಯುತ್ತಿದೆ. ಆದರೆ ಸ್ಥಳೀಯ ಪ್ರಭಾವಿಗಳೆನಿಸಿಕೊಂಡವರು ಅದರ ಶ್ರೇಯ ತಾವೇ ಪಡೆದುಕೊಳ್ಳಲು ಪತ್ರಿಕಾ ಹೇಳಿಕೆಗಳನ್ನು ನೀಡಿ ಪ್ರಚಾರ ಗಿಟ್ಟಿಸಿಕೊಳ್ಳಲು ಪ್ರಯತ್ನಿಸುತ್ತಿದ್ದಾರೆ. 2016-17ನೇ ಸಾಲಿನ ಬಾಕಿ ಮೊತ್ತ 305 ರೂ. ಮೊತ್ತವನ್ನು ಸಕ್ಕರೆ ಕಾರ್ಖಾನೆಯವರು ನೀಡಲು ಒಪ್ಪಿರುವುದು ತಮ್ಮ ಪ್ರಯತ್ನದಿಂದಲೇ ಎಂದು ಹೇಳಿಕೊಂಡಿದ್ದರು. ಅವರು ಈ ಬಗ್ಗೆ ಈಗ ಏನೂ ಚಕಾರವೆತ್ತದಿರುವುದು ನಾಚಿಕೆಗೇಡಿನ ಸಂಗತಿ ಎಂದು ರೈತ ಮುಖಂಡರು ಕಿಡಿಕಾರಿದರು.
ಪ್ರತಿಭಟನೆಯ ದಿವಸ ಕಬ್ಬು ಬೆಳೆಗಾರರು ಬೃಹತ್‌ ಪ್ರತಿಭಟನಾ ಪ್ರದರ್ಶನ ನಡೆಸಿ ಮೆರವಣಿಗೆಯ ಮೂಲಕ ತೆರಳಿ ಸಕ್ಕರೆ ಕಾರ್ಖಾನೆಗೆ ಮುತ್ತಿಗೆ ಹಾಕಲಾಗುವುದು. ಬೇಡಿಕೆ ಈಡೇರುವವರೆಗೆ ಪ್ರತಿಭಟನೆ ಮುಂದುವರಿಸಲಾಗುವುದು ಎಂದು ತಿಳಿಸಿದರು.
ಸಂಘದ ಪ್ರಮುಖರಾದ ಗಣಪತಿ ಕರಂಜೇಕರ, ಮಂಜುಳಾ ಗೌಡಾ, ಗಿರೀಶ ಟೋಸೂರ, ಶಿವಪುತ್ರ ನುಚ್ಚಂಬ್ಲಿ, ಪ್ರಕಾಶ ಫಾಕ್ರೆ ಮೊದಲಾದವರು ಪಾಲ್ಗೊಂಡಿದ್ದರು.

loading...