ಯಾತ್ರೆಗೆ ತೆರಳಿದ್ದ ಕನ್ನಡಿಗರು ಬಚಾವ್

0
10
loading...

ಬೆಂಗಳೂರು: ವರುಣನ ಅಬ್ಬರದಿಂದಾಗಿ ಕೈಲಾಸ ಮಾನಸ ಸರೋವರ ಯಾತ್ರೆಯಲ್ಲಿ ಸಿಲುಕಿದ್ದ ೨೦೦ಕ್ಕೂ ಹೆಚ್ಚು ಕನ್ನಡಿಗರು ಸುರಕ್ಷಿತವಾಗಿದ್ದು, ಆತಂಕಪಡುವ ಅಗತ್ಯವಿಲ್ಲ. ನೇಪಾಳದ ಸಿಮಿಕೋಟ್ ಮತ್ತು ನೇಪಾಳ್ ಗಂಜ್ ನಲ್ಲಿರುವ ಕರ್ನಾಟಕದ ಪ್ರವಾಸಿಗರ ಜೊತೆಗೆ ಭಾರತೀಯ ರಾಯಭಾರಿ ಅಧಿಕಾರಿಗಳು ಸಂಪರ್ಕದಲ್ಲಿದ್ದು, ಸುರಕ್ಷಿತವಾಗಿದ್ದಾರೆ.
ಬೆಂಗಳೂರು, ಧಾರವಾಡ, ಗುಲ್ಬರ್ಗ ಮತ್ತು ಹಾಸನದ ಪ್ರವಾಸಿಗರು ಅಮರನಾಥ, ಕೈಲಾಸ, ಮಾನಸ ಸರೋವರ ಪ್ರವಾಸ ಕೈಗೊಂಡಿದ್ದರು. ಸಂಕಷ್ಟದಲ್ಲಿರುವ ಕನ್ನಡಿಗರಿಗೆ ಭಾರತ, ನೇಪಾಳ ಮತ್ತು ಟಿಬೆಟ್ ರಾಯಭಾರಿ ಕಚೇರಿ ಅಧಿಕಾರಿಗಳು ನೆರವಿಗೆ ಧಾವಿಸಿದ್ದಾರೆ.
ಯಾತ್ರಾರ್ಥಿಗಳ ಸುರಕ್ಷತೆಗಾಗಿ ಅಗತ್ಯ ಕ್ರಮ ಕೈಗೊಳ್ಳುವಂತೆ ನವದೆಹಲಿಯ ಕರ್ನಾಟಕ ಭವನದಲ್ಲಿರುವ ಆಯುಕ್ತರಿಗೆ ಮುಖ್ಯಮಂತ್ರಿ ಎಚ್. ಡಿ. ಕುಮಾರಸ್ವಾಮಿ ನಿರ್ದೇಶನ ನೀಡಿದ್ದರು. ಕಠ್ಮಂಡುವಿನಲ್ಲಿರುವ ಭಾರತೀಯ ರಾಯಭಾರಿ ಅಧಿಕಾರಿ ಹಾಗೂ ನೇಪಾಳ ಸರ್ಕಾರದೊಂದಿಗೆ ಕರ್ನಾಟಕ ಭವನದ ಆಯುಕ್ತರು ಚರ್ಚೆ ನಡೆಸಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಹವಾಮಾನ ವೈಪರೀತ್ಯ ಹಿನ್ನೆಲೆಯಲ್ಲಿ ನೇಪಾಳದ ಗುಂಜ್ ಮತ್ತು ಸಿಮಿಕೊಟ್ ಮಧ್ಯೆ ಹೆಲಿಕಾಪ್ಟರ್ ಸೇವೆಗೆ ತೊಂದರೆಯಾಗಿದೆ.ಕರ್ನಾಟಕದ ಯಾತ್ರಾರ್ಥಿಗಳು ಸುರಕ್ಷಿತವಾಗಿದ್ದಾರೆ ಎಂದು ತುರ್ತು ಕಾರ್ಯಾಚರಣೆ ಕೇಂದ್ರ ಹೇಳಿದೆ.
ಮಾನಸ ಸರೋವರ ಯಾತ್ರೆಯಲ್ಲಿ ಕರ್ನಾಟಕದ ಯಾತ್ರಾರ್ಥಿಗಳು ಸಂಕಷ್ಟದಲ್ಲಿ ಸಿಲುಕಿದ್ದರಿಂದ ರಾಜ್ಯ ಸರ್ಕಾರ ಕಠ್ಮಂಡುವಿನಲ್ಲಿರುವ ಭಾರತೀಯ ರಾಯಭಾರ ಕಚೇರಿ, ವಿದೇಶಾಂಗ ಸಚಿವೆ ಸುಷ್ಮಾ ಸ್ವರಾಜ್, ಕೇಂದ್ರ ಗೃಹ ಸಚಿವ ರಾಜನಾಥ್ ಸಿಂಗ್ ನೆರವನ್ನು ಕೋರಿತ್ತು. ದೆಹಲಿಯಲ್ಲಿರುವ ಸ್ಥಾನಿಕ ನಿರ್ದೇಶಕರಿಗೆ ಅಗತ್ಯ ಪರಿಹಾರ ಕ್ರಮಕೈಗೊಳ್ಳುವಂತೆ ಸಿಎಂ ಕುಮಾರಸ್ವಾಮಿ ಅವರು ಸಹ ಸೂಚಿಸಿದ್ದಾರೆ.
ಮಾನಸ ಸರೋವರ ಯಾತ್ರೆಯ ಹಾದಿಯಲ್ಲಿ ನೇಪಾಳದ ಸಿಮಿಕೋಟ್ ಎಂಬಲ್ಲಿ ಭಾರಿ ಮಳೆ ಮತ್ತು ಮಂಜಿನಿಂದಾಗಿ ಯಾತ್ರಾರ್ಥಿಗಳು ತೀವ್ರ ಸಂಕಷ್ಟಕ್ಕೆ ಸಿಲುಕಿದ್ದರಿಂದ ರಾಜ್ಯದ ಯಾತ್ರಿಗಳೊಂದಿಗೆ ಸಂಪರ್ಕವನ್ನೂ ಕಡಿದುಕೊಂಡಿದ್ದರು. ಕರ್ನಾಟಕದ ಎಲ್ಲಾ ಯಾತ್ರಾರ್ಥಿಗಳು ಸುರಕ್ಷಿತವಾಗಿಯೇ ಇದ್ದಾರೆ ಎಂದು ವಿಪತ್ತು ನಿರ್ವಹಣಾ ಕೇಂದ್ರದ ಪ್ರಧಾನ ಕಾರ್ಯದರ್ಶಿ ತಿಳಿಸಿದ್ದಾರೆ.

loading...