ಯುವ ಸಾಹಿತಿಗಳಿಗೆ ಶಕ್ತಿ ಸಂಪನ್ನತೆಯಿದೆ: ಕುಲಕರ್ಣಿ

0
9
loading...

ಕನ್ನಡಮ್ಮ ಸುದ್ದಿ-ವಿಜಯಪುರ: ಇಂದಿನ ತಲೆಮಾರಿನ ಯುವ ಸಾಹಿತಿಗಳಿಗೆ ಶಕ್ತಿ ಸಂಪನ್ನತೆಯಿದೆ, ಏನೋ ಸಾಧಿಸಬೇಕು ಎಂಬ ಅದಮ್ಯ ಉತ್ಸಾಹವಿದೆ, ಬಯಕೆ ಇದೆ ಎಂದು ಖ್ಯಾತ ಸಾಹಿತಿ ಆರ್‌.ಕೆ. ಕುಲಕರ್ಣಿ ಹೇಳಿದರು.
ನಗರದ ಹೇಮರೆಡ್ಡಿ ಕಲ್ಯಾಣ ಮಂಟಪದಲ್ಲಿ ಜರುಗಿದ 6ನೇ ತಾಲೂಕಾ ಕನ್ನಡ ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷ ಸ್ಥಾನ ಅಲಂಕರಿಸಿ ತಮ್ಮ ಸಂದೇಶ ನೀಡಿದ ಅವರು, ಇಂದಿನ ಸಾಹಿತ್ಯ ಪ್ರಸ್ತುತ ಸಾಗುತ್ತಿರುವ ಹಾದಿ, ಯುವ ಲೇಖಕರು ಸಾಗಿರುವ ಹಾದಿ, ಯುವ ಸಾಹಿತಿಗಳು ಉತ್ತಮ ಸಾಹಿತಿಗಳಿಗಾಗಿ ಹೊರಬರಲು ಗಮನಿಸಬೇಕಾದ ಅಂಶಗಳು ಸೇರಿದಂತೆ ಹಲವಾರು ವಿಚಾರಗಳನ್ನು ತಮ್ಮ ಸುದೀರ್ಘವಾದ ಸಂದೇಶದಲ್ಲಿ ವಿವರಿಸಿದರು.
ಅಧ್ಯಯನಶೀಲತೆ, ಪ್ರಯೋಗಶೀಲತೆ, ಚಿಂತನಶೀಲತೆ ಕಡಿಮೆಯಾಗಿದ್ದು, ಭಾವೋತ್ಕಟತೆ ಮಾತ್ರ ಹೆಚ್ಚಾಗಿದೆ. ಎಲ್ಲರೂ ಹೇಳಿದ್ದನ್ನೇ ಹೇಳುತ್ತಾ ಸಾಗುವುದನ್ನು ನೋಡಿದರೆ ತೃಪ್ತಿಕರವಾದ ದೃಶ್ಯ ಗೋಚರಿಸುತ್ತಿಲ್ಲ. ಆಳವಾದವಿಸ್ತಾರವಾದಂತಹ ಓದು ಮೈಗೂಡಿಸಿಕೊಳ್ಳುವ ಮೂಲಕ ಜ್ಞಾನ ಕ್ಷೀತಿಜವನ್ನು ವಿಸ್ತರಿಸಿಕೊಳ್ಳಬೇಕು ಎಂದು ಕರೆ ನೀಡಿದರು.
ಯುವ ಸಾಹಿತಿಗಳು ಹೊರವಲಯದ ಗಾಳಿಗೆ ಮೈಯೊಡ್ಡಬೇಕು. ದೇಶ-ವಿದೇಶಗಳಲ್ಲಿ ನಡೆದಿರುವ ಸೃಜನಾತ್ಮಕ, ವೈಚಾರಿಕ ಪ್ರಯೋಗಗಳ ಅರಿವು ಅತ್ಯಂತ ಅವಶ್ಯ. ಹಾಗೆಂದ ಮಾತ್ರ ಹೊರಗಿನದ್ದನ್ನು ತಂದು ಇದಕ್ಕಿದ್ದಂತೆ ಸೇರ್ಪಡೆ ಮಾಡುವುದು ಎಂತಲ್ಲ, ಈ ಪ್ರಯತ್ನ ವಿಪ್ಲವಕಾರಿ ಎಂದರು. ಹೊರಗಿನದ್ದನ್ನು ತಂದು ಇದ್ದಕ್ಕಿಂದ್ದಂತೆ ಸೇರ್ಪಡೆ ಮಾಡಿದರೆ ನಮ್ಮ ಪರಂಪರೆ ಎಂದು ಹೇಳಿದರು.
ಸಾಹಿತ್ಯ ನಿಂತ ನೀರಾಗಬಾರದು, ಹಾಗೆಯೇ ಕದಡಿದ ಕೆರೆಯೂ ಆಗಬಾರದು. ಸದಾ ಹರಿಯುವ ನೀರಾಗಬೇಕು. ಎಲ್ಲರನ್ನೂ ಒಂದುಗೂಡಿಸಿ, ಮನಸ್ಸಿಗೆ ನೆಮ್ಮದಿ ನೀಡುವಂತಾಗಬೇಕು ಎಂದು ಆಶಯ ವ್ಯಕ್ತಪಡಿಸಿದರು.
ಕಲಿಕಾ ಮಾಧ್ಯಮ ಕನ್ನಡವೇ ಆಗಿರಲಿ: ಕಲಿಕಾ ಮಾಧ್ಯಮದ ಬಗ್ಗೆಯೂ ತಮ್ಮ ಸಂದೇಶದಲ್ಲಿ ಹಲವಾರು ವಿಚಾರಗಳನ್ನು ಹಂಚಿಕೊಂಡ ಆರ್‌.ಕೆ. ಕುಲಕರ್ಣಿ ಅವರು ಕಲಿಕಾ ಮಾಧ್ಯಮ ಕನ್ನಡದಲ್ಲಿಯೇ ಇರಬೇಕು ಎಂದು ಪ್ರಬಲವಾಗಿ ತಮ್ಮ ಸಂದೇಶದಲ್ಲಿ ಪ್ರತಿಪಾದಿಸಿದರು.
ಇಂಗ್ಲೀಷ್‌ ಭಾಷೆ ರಾಷ್ಟ್ರೀಯ, ಅಂತಾರಾಷ್ಟ್ರೀಯ ಸಂದರ್ಭದಲ್ಲಿ ಅನಿವಾರ್ಯ, ಆದರೆ ಅದು ನಮ್ಮ ನೆಲದ ಭಾಷೆಯಾಗಿರುವ ಕನ್ನಡವನ್ನು ಕಬಳಿಸಬಾರದು ಎಂದರು.
ದುಡಿಯುವ ಕೈಗಳಿಗೆ ಉದ್ಯೋಗ ದೊರಕಿಸುವುದು, ಜನರ ಆಶೋತ್ತರಗಳ ಈಡೇರಿಕೆಗೆ ಪ್ರಭುತ್ವದಲ್ಲಿರುವವರು ಗಂಭೀರವಾಗಿ ಪ್ರಯತ್ನಿಸಬೇಕು ಎಂದರು.
ವಿಜಯಪುರ ಜಿಲ್ಲೆಯ ಭವ್ಯ ಶ್ರೀಮಂತಿಕೆ, ಸಾಹಿತ್ಯಿಕ, ರಂಗಭೂಮಿ, ಪತ್ರಿಕೋದ್ಯಮ ಕ್ಷೇತ್ರದ ಮೈಲುಗಲ್ಲು ಹೀಗೆ ವಿಜಯಪುರದ ವೈಭವಯುತ ಇತಿಹಾಸದ ಬಗ್ಗೆ ತಮ್ಮ ಸಂದೇಶದಲ್ಲಿ ಸರ್ವಾಧ್ಯಕ್ಷರು ಉಲ್ಲೇಖಿಸಿದರು.
ಕೆರೆ ತುಂಬುವ ಯೋಜನೆಗೆ ಶ್ಲಾಘನೆ: ಬರದ ಜಿಲ್ಲೆ ಎಂಬ ಹಣಪಟ್ಟಿ ಕಳಚಬೇಕಿದೆ. ಈ ನಿಟ್ಟಿನಲ್ಲಿ ಕೆರೆ ತುಂಬುವ ಯೋಜನೆಯಂತಹ ಉತ್ತಮ ಯೋಜನೆಗಳನ್ನು ಮಾಜಿ ಜಲಸಂಪನ್ಮೂಲ ಸಚಿವ ಎಂ.ಬಿ. ಪಾಟೀಲ ಅನುಷ್ಠಾನಗೊಳಿಸಿರುವುದು ಶ್ಲಾಘನೀಯ ಕಾರ್ಯ ಎಂದು ಸರ್ವಾಧ್ಯಕ್ಷ ಆರ್‌.ಕೆ. ಕುಲಕರ್ಣಿ ತಮ್ಮ ಸಂದೇಶದಲ್ಲಿ ಶ್ಲಾಘಿಸಿದರು.

loading...