ರಂಗ ಸಂಸ್ಕೃತಿ ವಿದ್ಯಾರ್ಥಿಗಳಲ್ಲಿ ಇಚ್ಚಾಸಕ್ತಿ ಬೆಳೆಸುತ್ತದೆ: ಕಾಸರಗೋಡು

0
9
loading...

ಕನ್ನಡಮ್ಮ ಸುದ್ದಿ-ಕುಮಟಾ: ರಂಗ ಸಂಸ್ಕೃತಿ ವಿದ್ಯಾರ್ಥಿಗಳಲ್ಲಿ ಇಚ್ಚಾಸಕ್ತಿಯನ್ನು ಬೆಳೆಸುತ್ತದೆ. ಅಲ್ಲದೇ ವಿದ್ಯಾರ್ಥಿಗಳು ಹಿರಿಯರನ್ನು ಗೌರವಿಸಬೇಕು. ಸ್ನೇಹಿತರನ್ನು ಪ್ರೀತಿಸಬೇಕು. ಒಳ್ಳೆಯ ವಿಚಾರಗಳನ್ನು ಮೈಗೂಢಿಸಿಕೊಳ್ಳುವ ಜತೆಗೆ ಒಳ್ಳೆಯ ಕಾರ್ಯವನ್ನು ಬೆಂಬಲಿಸುವಂತಾಗಬೇಕು ಎಂದು ಚಲನಚಿತ್ರ ನಿರ್ದೇಶಕ ಕಾಸರಗೋಡು ಚಿನ್ನಾ ಹೇಳಿದರು.
ರಂಗ ಚಿನ್ನಾರಿ ಕಾಸರಗೋಡು, ಕೊಂಕಣ ಎಜುಕೇಶನ್‌ ಟ್ರಸ್ಟ್‌, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಯೋಗದಲ್ಲಿ ಇಲ್ಲಿನ ಟ್ರಸ್ಟ್‌ನ ಸಭಾಭವನದಲ್ಲಿ ಭಾನುವಾರ ನಡೆದ ರಂಗ ಸಂಸ್ಕೃತಿಯ ಸಮಾರೋಪದಲ್ಲಿ ಅಧ್ಯಕ್ಷತೆ ವಹಿಸಿ, ಅವರು ಮಾತನಾಡಿದರು. ವಿದ್ಯಾರ್ಥಿಗಳು ಕೇವಲ ಪಠ್ಯಕ್ಕೆ ಸಂಬಂಧಿಸಿರುವ ವಿಷಯದ ಜತೆಗೆ ಕಥೆ, ಕವನ, ಸಾಹಿತ್ಯಗಳನ್ನು ಓದುವ ಹವ್ಯಾಸ ಬೆಳೆಸಿಕೊಳ್ಳಬೇಕು. ಇದರಿಂದ ಒತ್ತಡ ಭರಿತ ಬದುಕಿನಿಂದ ನೆಮ್ಮದಿ ಪಡೆಯಲು ಸಾಧ್ಯ ಎಂದರು.
ಪತ್ರಕರ್ತ ಎಂ ಜಿ ನಾಯ್ಕ ಮಾತನಾಡಿ, ಚಿನ್ನಾ ಅವರ ಕನಸು ನಮ್ಮ ರಂಗ ಸಂಸ್ಕೃತಿಯ ಮಹತ್ವವನ್ನು ಮಕ್ಕಳಿಗೆ ತಿಳಿಸಿಕೊಡುವ ಮೂಲಕ ಮುಂದಿನ ತಲೆ ಮಾರಿಗೆ ದಾಟಿಸಬೇಕು. ಆ ಮಹತ್ವವಾದ ಕಾರ್ಯಕ್ಕೆ ನಾವೆಲ್ಲ ಕೈಜೋಡಿಸೋಣ ಎಂದರು.
ಸಾಮಾಜಿಕ ಕಾರ್ಯಕರ್ತೆ ಸುಜಾತಾ ಶಾನಭಾಗ ಮಾತನಾಡಿ, ನಮ್ಮಲ್ಲಿ ಆತ್ಮಸ್ಥೈರ್ಯವನ್ನು ಜಾಗೃತಗೊಳಿಸುವ ರಂಗ ಸಂಸ್ಕೃತಿಯನ್ನು ನಮ್ಮ ಜೀವನದಲ್ಲಿ ಅಳವಡಿಸಿಕೊಳ್ಳಬೇಕು ಎಂದರು.
ಕಾರ್ಯಕ್ರಮದಲ್ಲಿ ಟ್ರಸ್ಟ್‌ನ ವಿಶ್ವಸ್ಥರಾದ ಡಿ.ಡಿ.ಕಾಮತ್‌, ತರಬೇತುದಾರ ಜಗನ್ನ ಪವಾರ್‌, ಪ್ರಮುಖರಾದ ಭರತ ಭಂಡಾರಕರ್‌, ಪ್ರಕಾಶ ನಾಯ್ಕ ಇದ್ದರು. ರಂಗ ಸಂಸ್ಕೃತಿ ಶಿಬಿರದ ಸಂಚಾಲಕ ಚಿದಾನಂದ ಭಂಡಾರಿ ಸ್ವಾಗತಿಸಿ, ನಿರೂಪಿಸಿದರು. ಶಿಕ್ಷಕ ಪ್ರಕಾಶ ಗಾವಡಿ ವಂದಿಸಿದರು.

loading...