ರಸ್ತೆ ದುರಸ್ತಿಗೊಳಿಸುವಂತೆ ಸಾರ್ವಜನಿಕರ ಆಗ್ರಹ

0
10
loading...

ಕನ್ನಡಮ್ಮ ಸುದ್ದಿ-ಶಿರಸಿ: ರಸ್ತೆಯ ದುರವಸ್ತೆಯಿಂದಾಗಿ ತಾಲೂಕಿನ ಕಂಡ್ರಾಜಿಗೆ ಕಳೆದ 15 ದಿನಗಳಿಂದ ಬಸ್ ಸಂಚಾರ ಸ್ಥಗಿತವಾಗಿದ್ದು, ವಿದ್ಯಾರ್ಥಿಗಳಾದಿಯಾಗಿ ನೂರಾರು ಗ್ರಾಮಸ್ಥರು ಇದರಿಂದ ಪರದಾಡುವಂತಾಗಿದೆ.
ಶಿರಸಿ ತಾಲೂಕಿನ ಬಂಕನಾಳ ಗ್ರಾಮ ಪಂಚಾಯ್ತಿ ವ್ಯಾಪ್ತಿಯ ಕಂಡ್ರಾಜಿಯಲ್ಲಿ 80ಕ್ಕೂ ಅಧಿಕ ಮನೆಗಳಿದ್ದು, ಕಳೆದ 15 ದಿನಗಳಿಂದ ಗ್ರಾಮಕ್ಕೆ ಸಾರಿಗೆ ಸಂಸ್ಥೆಯ ಬಸ್ ಬಾರದೇ ನಿತ್ಯ ಶಾಲಾ ಕಾಲೇಜಿಗೆ ಹೋಗುವ ವಿದ್ಯಾರ್ಥಿಗಳು ಪರದಾಡುವಂತಾಗಿದೆ.

ಹುಸರಿ-ಗೋಣೂರ-ಕಂಡ್ರಾಜಿ ರಸ್ತೆಯ ಕಾಯಿಗುಡ್ಡೆಯಿಂದ ಕಂಡ್ರಾಜಿವರೆಗೆ ಸುಮಾರು ಎರಡುವರೆ ಕಿಮೀ ರಸ್ತೆ ಸಂಪೂರ್ಣ ಹದಗೆಟ್ಟು ಸಂಚಾರಕ್ಕೆ ಅಯೋಗ್ಯವಾಗಿದೆ. ಪ್ರತಿ ವರ್ಷ ಮಳೆಗಾಲದಲ್ಲಿ ಬಸ್ ಕಂಡ್ರಾಜಿಯವರೆಗೆ ಬರುತ್ತಿದ್ದು, ಈ ಬಾರಿಯ ಭಾರಿ ಮಳೆಗೆ ರಸ್ತೆ ದುಸ್ಥಿತಿಗೆ ತಲುಪಿದ್ದರಿಂದ ಬಸ್ ಸಂಚಾರ 15 ದಿನಗಳಿಂದ ಸ್ಥಗಿತವಾಗಿದೆ ಎನ್ನುತ್ತಾರೆ ಸ್ಥಳಿಕರಾದ ಯಶವಂತ ನಾಯ್ಕ.
ಕಂಡ್ರಾಜಿಗೆ ದಿನಕ್ಕೆ ಮೂರು ಬಾರಿ ಬಂದು ಹೋಗುತ್ತಿದ್ದ ಬಸ್ ಸಂಚಾರ ಸ್ಥಗಿತ ಆಗಿದ್ದರಿಂದ ಪ್ರಾಥಮಿಕ, ಪ್ರೌಢ ಶಾಲೆ ಹಾಗೂ ಕಾಲೇಜಿಗೆ ಹೋಗುವ ವಿದ್ಯಾರ್ಥಿಗಳು ಹಾಗೂ ಶಿರಸಿ ನಗರಕ್ಕೆ ಬರುವ ಗ್ರಾಮದ ಜನ ಎರಡುವರೆ ಕಿಮೀ ದೂರ ಕೆಸರು ಗದ್ದೆಯಂತಾದ ರಸ್ತೆಯಲ್ಲಿ ಕಾಯಿಗುಡ್ಡೆಯವರೆಗೆ ಸಾಗಿ ಬಸ್ ಹತ್ತಬೇಕಾದ ಸ್ಥಿತಿ ನಿರ್ಮಾಣವಾಗಿದೆ. ಪ್ರತಿ ವರ್ಷ ಈ ರಸ್ತೆ ಹಾಳಾಗುತ್ತಿರುವ ಬಗ್ಗೆ ಗ್ರಾಮಸ್ಥರು, ಜನಪ್ರತಿನಿಧಿಗಳು ಹಾಗೂ ಸಂಬಂಧಪಟ್ಟ ಇಲಾಖೆಗೆ ಮನವಿ ಮಾಡಿದರೂ ಯಾವುದೇ ಪ್ರಯೋಜನವಾಗಿಲ್ಲ. ಕೂಡಲೇ ರಸ್ತೆ ಸರಿಪಡಿಸಿ ವಿದ್ಯಾರ್ಥಿಗಳು ಹಾಗೂ ಸಾರ್ವಜನಿಕರಿಗಾಗುತ್ತಿರುವ ತೊಂದರೆ ಸರಿಪಡಿಸುವಂತೆ ಕಂಡ್ರಾಜಿಯ ಮಹೇಶ ಕೆಎಂ, ಹರೀಶ ನಾಯ್ಕ, ಅಕ್ಷಯ ಕಂಡ್ರಾಜಿ ಆಗ್ರಹಿಸಿದ್ದಾರೆ.

loading...