ರಾಗಿ ಮುದ್ದೆ ಉಣಬಡಿಸಿ ಗದ್ಯಬೋಧನೆ

0
5
loading...

ಕುಷ್ಟಗಿ: ತಾಲೂಕಿನ ಹಿರೇಮನ್ನಾಪುರ ಗ್ರಾಮದ ಶ್ರೀ ಗವಿಸಿದ್ದೇಶ್ವರ ಪಪೂ ಕಾಲೇಜಿನಲ್ಲಿ ವಿದ್ಯಾರ್ಥಿಗಳಿಗೆ ರಾಗಿಮುದ್ದೆ ಉಣಬಡಿಸುವ ಮೂಲಕ ಕನ್ನಡ ಭಾಷಾ ಉಪನ್ಯಾಸಕ ಮಲ್ಲಿಕಾರ್ಜುನ ಗಂಗನಾಳ `ರಾಗಿ ಮುದ್ದೆ’ ಕುರಿತ ಪಾಠ ಬೋಧನೆ ಮಾಡಿದ್ದಾರೆ.

ಉತ್ತರ ಕರ್ನಾಟಕ ಭಾಗದಲ್ಲಿ ಅಷ್ಟೊಂದು ಪರಿಚಿತವಲ್ಲದ ರಾಗಿ ಮುದ್ದೆಯ ತಯಾರಿಕೆ, ಅದರಿಂದ ತಯಾರಿಸುವ ವಿವಿಧ ಖಾದ್ಯಗಳ ಬಗ್ಗೆಯೂ ಪ್ರಾಯೋಗಿಕವಾಗಿ ತಿಳಿ ಹೇಳುವ ಮೂಲಕ ವಿನೂತನ ಪ್ರಯೋಗಕ್ಕೆ ಕೈ ಹಾಕಿದ್ದಾರೆ. ಕಾಲೇಜಿನ ವಿಶೇಷ ಅಗತ್ಯತೆಯುಳ್ಳ ವಿದ್ಯಾರ್ಥಿ ಪ್ರಶಾಂತ ಗದ್ದಡಕಿಗೆ ರಾಗಿಮುದ್ದೆ ತಿನಿಸಿ ಪಾಠ ಬೋಧನೆಗೆ ಚಾಲನೆ ನೀಡಿದ ಉಪನ್ಯಾಸಕರು ನಂತರ ವಿದ್ಯಾರ್ಥಿಗಳೆಲ್ಲರಿಗೂ ಬಡಿಸಿ ಸವಿಯಲು ತಿಳಿಸಿದರು. ರಾಗಿಮುದ್ದೆ ಸವಿದ ರವಿರಾಜ್, ಪ್ರಕಾಶ ಪುರದ್ ಇನ್ನಿತರ ವಿದ್ಯಾರ್ಥಿಗಳು ಅನುಭವ ಹಂಚಿಕೊಂಡರು. ಕಾಲೇಜಿನ ಪ್ರಾಚಾರ್ಯ ಬಿ.ಎಸ್.ಹಿರೇಮಠ, ಉಪನ್ಯಾಸಕರಾದ ಎಸ್.ಟಿ.ವಡ್ಡೀನ್, ವಿ.ಬಿ.ಹಾವರಗಿ, ಗೋಪಾಲ ಪೂಜಾರ ಉಪನ್ಯಾಸಕರ ಕಾರ್ಯವನ್ನು ಕೊಂಡಾಡಿದರು.
ಜೋಳ, ಸಜ್ಜೆ ರೊಟ್ಟಿ, ಚಪಾತಿ, ಅನ್ನ ಇವು ಉತ್ತರಕರ್ನಾಟಕದ ನಿತ್ಯದ ಅಡುಗೆ. ಈ ಭಾಗದವರಿಗೆ ‘ರಾಗಿ ಮುದ್ದೆ’ ಪರಿಚಯ ಬಹಳ ಕಡಿಮೆ. ಅಡುಗೆಯ ಹೆಸರು ಗೊತ್ತು ಆದರೆ ಅದನ್ನು ತಯಾರಿಸುವ, ಊಟ ಮಾಡುವ ವಿಧಾನ ಗೊತ್ತಿಲ್ಲ. ಪಿಯು ಕನ್ನಡ ಪಠ್ಯದಲ್ಲಿ ರಾಗಿ ಮುದ್ದೆ ಕುರಿತಾದ ಪಾಠ ಇದ್ದು ಇದನ್ನು ಪ್ರಾತ್ಯಕ್ಷಿಕೆ ಮೂಲಕ ತಿಳಿಸಿದರೆ ವಿದ್ಯಾರ್ಥಿಗಳಿಗೆ ಮನವರಿಕೆಯಾಗುತ್ತದೆ ಎಂಬ ವಿಚಾರ ಕಾಲೇಜಿನ ಕನ್ನಡ ಉಪನ್ಯಾಸಕ ಮಲ್ಲಿಕಾರ್ಜುನ ಗಂಗನಾಳ ಅವರಿಗೆ ಬಂತು. ಈ ಬಗ್ಗೆ ಪ್ರಾಚಾರ್ಯ ಬಿ.ಎಸ್.ಪಾಟೀಲ್ ಅವರೊಂದಿಗೆ ಚರ್ಚಿಸಿದಾಗ ಪ್ರಾತ್ಯಕ್ಷಿಕೆಗೆ ಒಪ್ಪಿಗೆಯೂ ದೊರೆಯಿತು. ಇಡೀ ಕಾಲೇಜಿನ ವಿದ್ಯಾರ್ಥಿಗಳಿಗೆ ರಾಗಿ ಮುದ್ದೆ ಊಟ ಮಾಡಿಸಲು ಉಪನ್ಯಾಸಕ ಸಿದ್ಧರಾದರು. ಬೇರೆ ಊರಿನಿಂದ ರಾಗಿ ಹಿಟ್ಟು ತರಿಸಿ ಮುದ್ದೆ ತಯಾರಿಸುವ ಪರಿಣಿತರಿಂದ ಅಡುಗೆ ಮಾಡಲು ಸಿದ್ಧತೆ ನಡೆಯಿತು. ಮುದ್ದೆ ತಯಾರಿಸುವಾಗ ವಿದ್ಯಾರ್ಥಿಗಳಿಗೆ ವಿಧಾನದ ಬಗ್ಗೆ ವಿವರವನ್ನೂ ನೀಡಲಾಯಿತು. ಮುದ್ದೆ ಅದರೊಂದಿಗೆ ರುಚಿಯಾದ ಸಾರು ತಯಾರಾಯಿತು. ಎಲ್ಲ ವಿದ್ಯಾರ್ಥಿಗಳಿಗೆ ಏಕಕಾಲಕ್ಕೆ ಮುದ್ದೆ ಊಟಕ್ಕೆ ಏರ್ಪಾಟು ಮಾಡಲಾಯಿತು. ಅಲ್ಲಿಗೆ ಪ್ರಾತ್ಯಕ್ಷಿಕೆ ಪಾಠವೂ ಮುಗಿದು ವಿದ್ಯಾರ್ಥಿಗಳ ಮನಸ್ಸಿನಲ್ಲಿ ವಿಷಯ ಅಚ್ಚಳಿಯದೇ ಉಳಿಯುವಂತೆ ಮಾಡುವ ಪ್ರಯತ್ನ ಯಶಸ್ವಿಯಾಯಿತು.
ಊಟ ಮಾಡಿದ ಮೇಲೆ ಉಪನ್ಯಾಸಕರು ವಿದ್ಯಾರ್ಥಿಗಳನ್ನು ಸುಮ್ಮನೆ ಬಿಡಲಿಲ್ಲ, ಈ ಬಗ್ಗೆ ಸಂವಾದವನ್ನೂ ನಡೆಸಲಾಯಿತು. ವಿದ್ಯಾರ್ಥಿಗಳಾದ ರವಿರಾಜ್, ಪ್ರಕಾಶ ಪುರದ್ ತಮ್ಮ ಅನುಭವವನ್ನು ಸ್ವಾರಸ್ಯಕರವಾಗಿ ಹಂಚಿಕೊಂಡರು. ಈ ಸಂದರ್ಭದಲ್ಲಿ ಉಪನ್ಯಾಸಕರಾದ ಎಸ್.ಟಿ.ವಡ್ಡಿನ್, ವಿ.ಬಿ.ಹಾವರಗಿ ಸೇರಿದಂತೆ ಇನ್ನಿತರರು ಇದ್ದರು.

loading...