ರಾಜ್ಯದಲ್ಲಿರುವ ವಕ್ಫ್‌ ಆಸ್ತಿ ಸರ್ವೆಗೆ ಹಮೀದ್‌ ಶೇಖ್‌ ಆಗ್ರಹ

0
10
loading...

ಕನ್ನಡಮ್ಮ ಸುದ್ದಿ-ಕಾರವಾರ: ರಾಜ್ಯದಲ್ಲಿರುವ ವಕ್ಫ್‌ ಬೋರ್ಡ್‌ನ ಒಟ್ಟಾರೆ ಆಸ್ತಿಯ ಸರ್ವೇ ಹಾಗೂ ವಕ್ಫ್‌ ಆಸ್ತಿಯ ಅತಿಕ್ರಮಣ ತೆರವುಗೊಳಿಸಲು ಈ ಕೂಡಲೇ ಸರ್ಕಾರ ಕ್ರಮ ಕೈಗೊಳ್ಳುವಂತೆ ನ್ಯಾಯವಾದಿ ಹಾಗೂ ಸಾಮಾಜಿಕ ಹೋರಾಟಗಾರ ಹಮೀದ್‌ ಶೇಖ್‌ ರಾಜ್ಯ ಸರ್ಕಾರವನ್ನು ಆಗ್ರಹಿಸಿದ್ದಾರೆ.
ಇಲ್ಲಿನ ಪತ್ರಿಕಾಭವನದಲ್ಲಿ ಗುರುವಾರ ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಹಮೀದ್‌ ಶೇಖ್‌ ಕೆಲ ನಿರ್ಲಜ್ಜ ವ್ಯಕ್ತಿಗಳು ವಕ್ಫ್‌ ಆಸ್ತಿಯನ್ನು ಅತಿಕ್ರಮಿಸಿಕೊಂಡು ಅದರ ಆದಾಯವನ್ನು ಅನುಭವಿಸುತ್ತಿದ್ದಾರೆ. ಕೆಲ ಮಸೀದಿ ಹಾಗೂ ದರ್ಗಾಗಳ ಕಮೀಟಿಯು ಸಹ ಧಾರ್ಮಿಕ ನಿಧಿಯನ್ನು ದುರ್ಬಳಕೆ ಮಾಡಿಕೊಳ್ಳುತ್ತಿದೆ ಎಂದು ಆರೋಪಿಸಿದರು. ಕರ್ನಾಟಕ ಹೈಕೋರ್ಟ್‌ನ ಆದೇಶದ ನಂತರ ಜಿಲ್ಲಾಧಿಕಾರಿಗಳು ಇಲ್ಲಿನ ಕಡವಾಡದ ಹಜರತ್‌ ಬಾವಾ ಬದಂಗ್‌ ದರ್ಗಾದ ಆಡಳಿತವನ್ನು ಜಿಲ್ಲಾ ವಕ್ಫ್‌ ಅಧಿಕಾರಿ ತಾಜುದ್ದೀನ್‌ರಿಗೆ ವಹಿಸುವಂತೆ ಸೂಚಿಸಿದ ಹಿನ್ನೆಲೆಯಲ್ಲಿ ಅವರು ಕಳೆದ ಮೂರುದಿನಗಳ ಹಿಂದೆ ಅಧಿಕಾರ ಸ್ವೀಕರಿಸಿದ್ದಾರೆ.
ಈ ಬದಲಾಗಿ ಜಿಲ್ಲಾಡಳಿತವು ಆಡಳಿತಾಧಿಕಾರಿಯನ್ನು ನೇಮಕ ಮಾಡಬೇಕೆಂದು ಈ ಬಗ್ಗೆ ಈಗಾಗಲೇ ರಾಜ್ಯ ಹೈಕೋರ್ಟ್‌ನಲ್ಲಿ ರಿಟ್‌ ಪಿಟಿಷನ್‌ ದಾಖಲಾಗಿಸಲಾಗಿದೆ ಎಂದು ಹಮೀದ್‌ ಶೇಖ್‌ ಹೇಳಿದರು. ಅದೇ ರೀತಿಯಾಗಿ ನಾಲ್ಕುಸಾವಿರ ವರ್ಷದ ಇತಿಹಾಸವಿರುವ ಸದಾಶಿವಗಡದ ಫೀರ್‌ ಷಾ ಶಂಶುದ್ದೀನ್‌ ಕಾರೊಬತ್‌ ದರ್ಗಾಕ್ಕೂ ಸಹ ಆಡಳಿತಾಧಿಕಾರಿ ನೇಮಕಕ್ಕೆ ಆಗ್ರಹಿಸಿ ಹೈಕೋರ್ಟ್‌ನಲ್ಲಿ ಇನ್ನೊಂದು ರಿಟ್‌ ಪಿಟಿಶನ್‌ ದಾಖಲಾಗಿಸಲಾಗಿದೆ ಎಂದರು.
ರಾಜ್ಯದಲ್ಲಿ ವಕ್ಫ್‌ ಆಸ್ತಿ ಸಾಕಷ್ಟಿದೆ. ರಾಜ್ಯದ ಈ ಎಲ್ಲಾ ವಕ್ಫ್‌ ಆಸ್ತಿ ವ್ಯವಹಾರ ನೊಡಿಕೊಳ್ಳಲು ಕೇವಲ ಸಿಇಒ ಒಬ್ಬರಿಂದಲೇ ಕಷ್ಟಸಾಧ್ಯ. ಹೀಗಾಗಿ ರಾಜ್ಯ ಸರ್ಕಾರ ಕೂಡಲೇ ಒಂದಿಷ್ಟು ಸಿಇಓಗಳ ನೇಮಕ ಮುಂದಾಗಬೇಕು. ಸಾಕಷ್ಟು ಅಧಿಕಾರಿಗಳ ಕೊರತೆಯೂ ಸಹ ವಕ್ಫ್‌ ಆಸ್ತಿ ಅತಿಕ್ರಮಣಕ್ಕೆ ಕಾರಣವಾಗಿದ್ದು ಸರ್ಕಾರ ಈ ಬಗ್ಗೆಯೂ ಒಂದಿಷ್ಟು ಗಮನಹರಿಸಬೇಕೆಂದು ಹಮೀದ್‌ ಶೇಖ್‌ ಒತ್ತಾಯಿಸಿದರು. ಈ ಸಂದರ್ಭದಲ್ಲಿ ಜಮಾತ ಧುರೀಣರಾದ ಮೈನುದ್ದೀನ್‌ ಶೇಖ್‌, ಅಸೀಪ್‌ ಖತೀಬ್‌ ಮತ್ತು ಅಫ್ತಾಬ್‌ ಖಾನ್‌ ಉಪಸ್ಥಿತರಿದ್ದರು.

loading...