ರಾಜ್ಯ ಬಜೆಟ್‌ನಿಂದ ರೈತರಿಗೆ ಅನ್ಯಾಯ: ಹೆಗಡೆ

0
24

ಕನ್ನಡಮ್ಮ ಸುದ್ದಿ-ಯಲ್ಲಾಪುರ: ಮುಖ್ಯಮಂತ್ರಿ ಕುಮಾರಸ್ವಾಮಿ ಮಂಡಿಸಿದ ಬಜೆಟ್‌ ರೈತ ಸಮುದಾಯದ ಬಹುತೇಕರಿಗೆ ತೀವ್ರ ಅನ್ಯಾಯ ಉಂಟುಮಾಡಿದೆ. ಸಾಮಾನ್ಯವಾಗಿ ಸಹಕಾರಿ ಸಂಘಗಳ ಮೂಲಕ ವ್ಯವಹಾರ ಮಾಡುತ್ತಿರುವ ರೈತರು, ಸಂಸ್ಥೆಯ ಹಿತದೊಂದಿಗೆ ಪ್ರಾಮಾಣಿಕತೆಯಿಂದ ಮರ್ಯಾದೆ ಉಳಿಸಿಕೊಳ್ಳುವ ಸಲುವಾಗಿ ಖಾಸಗಿ ಸಾಲ ತೆಗೆದುಕೊಂಡು ಸಂಘಗಳಲ್ಲಿ ಮಾಡಿದ ಸಾಲವನ್ನು ಮರುಪಾವತಿ ಮಾಡುತ್ತ ಬಂದಿರುವುದು ಸಂಪ್ರದಾಯ. ಆದರೆ ಈ ಬಾರಿಯ ಬಜೆಟ್‌ನಲ್ಲಿ ಇಂತಹ ಸಾಲ ತುಂಬದಿದ್ದವರಿಗೂ ಮನ್ನಾಗೊಳಿಸಿರುವುದು ಪ್ರಾಮಾಣಿಕ ರೈತರಿಗೆ ಮಾಡಿದ ಮೋಸ ಎಂದು ಹಿರಿಯ ಸಹಕಾರಿ ಎನ್‌.ಎಸ್‌.ಹೆಗಡೆ ಕುಂದರಗಿ ಪತ್ರಿಕಾ ಹೇಳಿಕೆಯಲ್ಲಿ ತಿಳಿಸಿದ್ದಾರೆ.
2 ಲಕ್ಷದವರೆಗಿನ ಸಾಲವನ್ನು ಮನ್ನಾ ಮಾಡಲಾಗುವುದೆಂದು ಘೋಷಿಸಲಾಗಿದೆ. ಬಹುತೇಕ ರೈತರು ಈಗಾಗಲೇ ಬಂಗಾರ ಅಡವಿಟ್ಟು ಅಥವಾ ಖಾಸಗಿಯವರಿಂದ ಹೆಚ್ಚಿನ ಬಡ್ಡಿಯ ಸಾಲ ಪಡೆದು ಸಂಘದ ಸಾಲವನ್ನು ತುಂಬಿರುವುದು ಕಂಡುಬರುತ್ತದೆ. ಇಂತಹ ಸ್ಥಿತಿಯಲ್ಲಿ ಸಾಲ ತುಂಬದಿದ್ದವರಿಗೂ ಮನ್ನಾ ಮಾಡುವುದೆಂದರೆ ಇದು ಅವೈಜ್ಞಾನಿಕ ನಿರ್ಣಯ ಎನ್ನಬೇಕಾಗಿದೆ. ಕೇವಲ ಕೆಲವಷ್ಟೇ ರೈತರು ಮಾತ್ರ ಸಾಲ ತುಂಬದಿರುವ ಪರಂಪರೆಯನ್ನೇ ಬೆಳೆಸಿಕೊಂಡಿದ್ದಾರೆ. ಇದರಿಂದ ಸಾಲ ನೀಡಿದ ಸಂಸ್ಥೆಗೂ ನಷ್ಟವಾಗುತ್ತದೆ. ಆದರೆ ಇಂತಹ ಸಾಲಗಾರರು ಪಡೆದ ಹಣವನ್ನು ಮನ್ನಾ ಮಾಡಿದರೆ, ಪ್ರಾಮಾಣಿಕ ರೈತರಿಗೆ ಮೋಸ ಮಾಡಿದಂತಾಗುತ್ತದೆ ಎಂದು ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಇಂತಹ ಮನ್ನಾ ನಿರ್ಧಾರದಿಂದಾಗಿ ಭವಿಷ್ಯದಲ್ಲಿ ಸಾಲ ತುಂಬದಿರುವವರ ಸಂಖ್ಯೆ ಅಧಿಕಗೊಳ್ಳುತ್ತದೆ. ಅಲ್ಲದೇ, ಕಾಲಕಾಲಕ್ಕೆ ಸರ್ಕಾರ ಬದಲಾದಾಗ ಸಾಲ ಮನ್ನಾ ಆಗುತ್ತದೆ ಎಂಬ ಭಾವನೆಯನ್ನು ರೈತ ಸಮುದಾಯ ಬೆಳೆಸಿಕೊಳ್ಳಲು ಕಾರಣವಾಗುತ್ತದೆ. ಈ ಎಲ್ಲ ಕಾರಣಗಳಿಂದ ಮುಖ್ಯಮಂತ್ರಿಗಳು ವಾಸ್ತವಿಕ ಅಂಶಗಳನ್ನು ಮನವರಿಕೆ ಮಾಡಿಕೊಂಡು ಎಲ್ಲ ರೈತರಿಗೂ ಸಾಲ ಮನ್ನಾ ಲಾಭ ದೊರಕುವಂತೆ ಮಾಡಬೇಕೆಂದು ಎನ್‌.ಎಸ್‌.ಹೆಗಡೆ ಹೇಳಿಕೆಯಲ್ಲಿ ಆಗ್ರಹಿಸಿದ್ದಾರೆ.

loading...