ರಾಯಚೂರಿನಲ್ಲಿ ವಿಭಾಗೀಯ ಕಚೇರಿ ಶೀಘ್ರ ಆರಂಭ: ಸಚಿವ ನಾಡಗೌಡ

0
24
loading...

ಕನ್ನಡಮ್ಮ ಸುದ್ದಿ-ಗಂಗಾವತಿ: ಗಂಗಾವತಿ ನಗರಸಭೆಯಲ್ಲಿ ನಡೆದಿರುವ 150 ಕೋಟಿ ರೂ. ನಿವೇಶನ ಹಗರಣ ತನಿಖೆ ನಡೆಸಲು ತಾವು ಸರಕಾರಕ್ಕೆ ಶಿಫಾರಸ್ಸು ಮಾಡುತ್ತೇನೆ ಎಂದು ಪಶು ಸಂಗೋಪನಾ, ಮೀನುಗಾರಿಕ ಸಚಿವ ವೆಂಕಟರಾವ್‌ ನಾಡಗೌಡ ತಿಳಿಸಿದರು.
ಸೋಮವಾರ ಮುನಿರಾಬಾದ್‌ನಲ್ಲಿ ನಡೆಯಲಿರುವ ತುಂಗಭದ್ರಾ ಜಲಾಶಯದ ನೀರಾವರಿ ಸಲಹಾ ಸಮಿತಿ ಸಭೆಯಲ್ಲಿ ಪಾಲ್ಗೊಳ್ಳಲು ತೆರಳುತ್ತಿದ್ದ ಅವರು ಮಾರ್ಗ ಮಧ್ಯೆ ಜೆಡಿಎಸ್‌ ರಾಜ್ಯ ಉಪಾಧ್ಯಕ್ಷ ಎಚ್‌.ಆರ್‌.ಶ್ರೀನಾಥ ಅವರ ನಿವಾಸದಲ್ಲಿ ಸನ್ಮಾನ ಸ್ವೀಕರಿಸಿ ನಂತರ ಪತ್ರಿಕಾಗೋಷ್ಠಿಯಲ್ಲಿ ಅವರು ಮಾತನಾಡಿದರು.
ಕಾಂಗ್ರೆಸ್‌ನ ಹಿರಿಯ ಮುಖಂಡ ಮತ್ತು ಮಾಜಿ ಸಂಸದ ಎಚ್‌.ಜಿ.ರಾಮುಲು ಅವರ ಯೋಗ ಕ್ಷೇಮ ವಿಚಾರಿಸಲು ಅವರ ನಿವಾಸಕ್ಕೆ ಬಂದಿದ್ದೇನೆ ಎಂದು ತಿಳಿಸಿದರು. ನೀರಾವರಿ ಸಲಹಾ ಸಮಿತಿ ಸಭೆಯಲ್ಲಿ ಎಡದಂಡೆ ನಾಲೆ ಮತ್ತು ಬಳ್ಳಾರಿಯ ಬಲದಂಡೆ ನಾಲೆಗೆ ನೀರು ಬಿಡುವ ಕುರಿತು ನಿರ್ಣಯ ಕೈಗೊಳ್ಳಲಾಗುವುದು ಎಂದು ಹೇಳಿದರು.
ಜಲಾಶಯದಲ್ಲಿ ಈ ಸಾರೆ ಸಾಕಷ್ಟು ನೀರು ಸಂಗ್ರಹವಾಗಿದೆ. ರೈತರ ಬೆಳೆಗಳಿಗೆ ನೀರಿನ ಸಮಸ್ಯೆ ನೀಗಿಸಲು ಸಮಾನಾಂತರ ಜಲಾಶಯ ನಿರ್ಮಾಣ ಮಾಡಲು ನಮ್ಮಲ್ಲಿ ಸೌಲಭ್ಯಗಳ ಕೊರತೆ ಇದೆ. ಆದರೆ ಆಂಧ್ರ ಪ್ರದೇಶದಲ್ಲಿ ಎಲ್ಲ ಸೌಲಭ್ಯಗಳಿವೆ. ಎರಡು ಬೆಳೆಗಳಿಗೆ ನೀರು ಬಿಡಲು ಪ್ರಯತ್ನಿಸಲಾಗುವುದು. ಜಲಾಶಯದಿಂದ ನೀರು ಪೋಲಾಗದಂತೆ ಎಚ್ಚರವಹಿಸಿ ನೀರು ಉಳಿತಾಯ ಮಾಡಲಾಗುವುದು ಎಂದು ಹೇಳಿದರು.
ರಾಯಚೂರಿನಲ್ಲಿ ವಿಭಾಗೀಯ ಕಚೇರಿ: ರಾಜ್ಯದಲ್ಲಿರುವ ಎಲ್ಲ ಪಶು ಆಸ್ಪತ್ರೆಗಳನ್ನು ಮೇಲ್ದರ್ಜೆ ಮಾಡಲಾಗುವುದು. ರಾಜ್ಯದಲ್ಲಿ ವಿಶೇಷವಾಗಿ ಹೈದ್ರಾಬಾದ ಕರ್ನಾಟಕ ಪ್ರದೇಶದಲ್ಲಿ 140 ಪಶು ವೈದ್ಯರ ಕೊರತೆ ಇದೆ. ಈ ಹುದ್ದೆಗಳನ್ನು ಭರ್ತಿ ಮಾಡಲು ಈಗಾಗಲೆ ಕ್ರಮ ಜರುಗಿಸಲಾಗಿದೆ.
ಪಶು ವೈದ್ಯರ ಹುದ್ದೆಗಾಗಿ ತಮ್ಮ ಇಲಾಖೆ ಅರ್ಜಿ ಆಹ್ವಾನಿಸಿದೆ. 140 ಹುದ್ದೆಗಳಿಗೆ ಕೇವಲ 50 ಜನ ಆಕಾಂಕ್ಷಿಗಳು ಅರ್ಜಿ ಸಲ್ಲಿಸಿದ್ದಾರೆ. ಉಳಿದ ಹುದ್ದೆಗಳನ್ನು ಶೀಘ್ರದಲ್ಲಿ ಭರ್ತಿ ಮಾಡಲಾಗುವುದು. ಪಶು ಇಲಾಖೆಯ ವಿಭಾಗೀಯ ಕಚೇರಿಯನ್ನು ರಾಯಚೂರಿನಲ್ಲಿ 15 ದಿನಗಳೊಳಗೆ ಆರಂಭ ಮಾಡಲಾಗುವುದು ಎಂದು ಸಚಿವರು ತಿಳಿಸಿದರು.
ಎಚ್‌ಡಿಕೆ ಕಣ್ಣೀರು: ಸಮ್ಮಿಶ್ರ ಸರಕಾರದ ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿಯವರು ಸಾಲ ಮನ್ನಾ ಕುರಿತಂತೆ ಸಭೆಗಳಲ್ಲಿ ಕಣ್ಣೀರು ಹಾಕಿರುವುದು ಅವರ ಮಾನವೀಯತೆ ತೋರಿಸುತ್ತದೆ. ವಿರೋಧಿಗಳು ಟೀಕಿಸುತ್ತಾರೆ. ಟೀಕಿಸುವವದು ಸುಲಭ ಕೆಲಸ ಮಾಡುವುÀದು ಕಷ್ಟ ಎಂದು ಹೇಳಿದರು.
ತೆರಿಗೆ ಅನಿವಾರ್ಯ: ರೈತರ ಸಾಲ ಮನ್ನಾ ಮಾಡಿದ ಕಾರಣ 45 ಸಾವಿರ ಕೋಟಿ ರೂ. ತೆರಿಗೆ ಮೂಲಕ ಸಂಗ್ರಹಿಸುವುದು ಅನಿವಾರ್ಯವಾಗಿದೆ. ಇದರಿಂದ ಶ್ರೀಸಾಮಾನ್ಯನಿಗೆ ಹೊರೆಯಾಗಿಲ್ಲ ಎಂದು ಅವರು ಸ್ಪಷ್ಟಪಡಿಸಿದರು. ಈ ಸಂದರ್ಭದಲ್ಲಿ ಎಚ್‌.ಆರ್‌.ಶ್ರೀನಾಥ, ಜೆಡಿಎಸ್‌ ನಗರ ಘಟಕದ ಅಧ್ಯಕ್ಷ ಶೇಖನಬಿಸಾಬ, ಜಿಲ್ಲಾ ಅಧ್ಯಕ್ಷ ಅಮರೇಗೌಡ ಪಾಟೀಲ್‌ ಇದ್ದರು.

loading...