ರಾಹುಲ್ ಭಾಷಣ ಮೆಚ್ಚಿದ ಶೀವಸೇನೆ

0
18
loading...

ನವದೆಹಲಿ: ಅವಿಶ್ವಾಸ ನಿರ್ಣಯ ಮಂಡನೆ ಚರ್ಚೆ ವೇಳೆ ಲೋಕಸಭೆಯಲ್ಲಿ ಪ್ರಧಾನಮಂತ್ರಿ ನರೇಂದ್ರ ಮೋದಿ ವಿರುದ್ಧ ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿಯವರು ಮಾಡಿದ್ದ ಭಾಷಣಕ್ಕೆ ಶಿವಸೇನೆ ಶನಿವಾರ ಮೆಚ್ಚುಗೆ ವ್ಯಕ್ತಪಡಿಸಿದೆ. 

ಅವಿಶ್ವಾಸ ನಿರ್ಣಯ ಮಂಡನೆ ಚರ್ಚೆ ವೇಳೆ ಲೋಕಸಭೆಯಲ್ಲಿ ನಡೆದ ಆಗುಹೋಗುಗಳ ಕುರಿತಂತೆ ಶಿವಸೇನೆ ತನ್ನ ಮುಖವಾಣಿ ಸಾಮ್ನಾದಲ್ಲಿ ಬರೆದುಕೊಂಡಿದ್ದು, ರಾಹುಲ್ ಗಾಂಧಿ ಭಾಷಣಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದೆ. 

ತನ್ನ ಮುಖವಾಣಿ ಸಾಮ್ನಾದ ಮೊದಲ ಪುಟದಲ್ಲಿ ಲೋಕಸಭೆಯಲ್ಲಿ ರಾಹುಲ್ ಗಾಂಧಿಯವರು ಪ್ರಧಾನಿ ಮೋದಿಯವರನ್ನು ಆಲಂಗಿಸಿದ್ದನ್ನು ಪ್ರಮುಖವಾಗಿ ತೆಗೆದುಕೊಂಡಿರುವ ಶಿವಸೇನೆ, ರಾಹುಲ್ ಗಾಂಧಿಯವರಿಗೆ ಭೇಷ್ ಎಂದಿದೆ. ಅಲ್ಲದೆ, ಮೋದಿ ವಿರುದ್ಧ ರಾಹುಲ್ ಮಾಡಿದ್ದ ಆರೋಪಿಗಳು ಹಾಗೂ ಜುಮ್ಲಾ ಸ್ಟ್ರೈಕ್ ಹೇಳಿಕೆಗಳನ್ನು ಪ್ರಮುಖ ವಿಚಾರಗಳನ್ನಾಗಿಸಿದೆ. 

ಭಾಷಣದ ಬಳಿಕ ರಾಹುಲ್ ಗಾಂಧಿ, ಮೋದಿಯವರನ್ನು ಆಲಂಗಿಸಿಕೊಂಡು ಹೊಸ ರಾಜಕೀಯ ಸಂಪ್ರದಾಯವನ್ನು ಆರಂಭಿಸಿದ್ದಾರೆಂದು ಶಿವಸೇನೆ ಹೇಳಿಕೊಂಡಿದೆ. 

ಲೋಕಸಭೆಯಲ್ಲಿ ಅವಿಶ್ವಾಸ ನಿರ್ಣಯ ಚರ್ಚೆ ವೇಳೆ ಮೋದಿ ಸರ್ಕಾರದ ವಿರುದ್ಧ ಟೀಕೆ, ಆರೋಪಗಳ ಸುರಿಮಳೆಗೆರೆದ ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿಯವರು ಪ್ರಧಾನಮಂತ್ರಿಗಳತ್ತ ತೆರಳಿ ಹಸ್ತಲಾಘವ ನೀಡಿದರು. ನಂತರ ಎದ್ದು ನಿಲ್ಲುವಂತೆ ಕೋರಿದರು. ಮೋದಿ ಒಪ್ಪದಿದ್ದಾಗ ಅವರು ಕುಳಿತಿದ್ದಂತೆಯೇ ದಿಢೀರ್ ತಬ್ಬಿಕೊಂಡರು. 

ಬಳಿಕ ಸ್ವಸ್ಥಾನಕ್ಕೆ ಮರಳಿದ ಬಳಿಕ ತಮ್ಮ ಸಹೋದ್ಯೋಗಿಯೊಬ್ಬರತ್ತ ನೋಡಿ ಕಣ್ಣು ಮಿಟುಕಿಸಿದರು. ಈ ನಾಟಕೀಯ ವಿದ್ಯಾಮಾನ ದೇಶದಾದ್ಯಂತ ಭಾರೀ ಚರ್ಚೆಗೆ ಗ್ರಾಸವಾಗಿದೆ. 

ರಾತ್ರಿ ಅವಿಶ್ವಾಸ ಗೊತ್ತುವಳಿಗಳಿಗೆ ಉತ್ತರ ನೀಡಿದ ಮೋದಿಯವರು ರಾಹುಲ್ ಅವರನ್ನು ಟೀಕಿಸಿದರು. ಸದಸ್ಯರೊಬ್ಬರು ಅಧಿಕಾರಕ್ಕೆ ಎಷ್ಟು ಹಾತೊರೆಯುತ್ತಿದ್ದಾರೆಂದರೆ, ಗೆಲ್ಲುವ ಮುನ್ನವೇ ನನ್ನನ್ನು ಏಳು…ಏಳು… ಎಂದರು. ಅವರ ಕಣ್ಸನ್ನೆ ಮಕ್ಕಳಾಟ ಇಡೀ ದೇಶವೇ ನೋಡಿದೆ ಎಂದು ವ್ಯಂಗ್ಯವಾಡಿದರು. 

 

loading...