ರೈತರ ಸಾಲ ಮನ್ನಾ ಕುರಿತು ಸ್ಪಷ್ಟತೆ ನೀಡದ ಸರ್ಕಾರ: ಶಂಕರಪ್ಪ

0
7
loading...

ಕನ್ನಡಮ್ಮ ಸುದ್ದಿ-ನರಗುಂದ: ರೈತರೆಂದಿಗೂ ಉದ್ಧಾರವಾಗುವುದಿಲ್ಲವೆಂಬ ಸ್ಪಷ್ಟ ನಿಲುವು ಸರ್ಕಾರದಿಂದಲೇ ತಿಳಿಯುವಂತಾಗಿದೆ. 1980ರ ಜು. 21 ರಂದು ರೈತರು ಬೆಟರ್‌ಮೆಂಟ್‌ ಲೇವ್ಹಿಗಾಗಿ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದರು. ಆದರೆ ಇಂದಿಗೂ ಸರ್ಕಾರಗಳು ಕಣ್ಣು ತೆರೆದು ರೈತರ ಸಮಸ್ಯೆ ಅರಿಯಲು ಚಿಂತನೆಮಾಡುತ್ತಿಲ್ಲವೆಂದು ಮಹದಾಯಿ ಮಹಾ ವೇದಿಕೆ ಹಿರಿಯ ಮುಖಂಡ ಶಂಕರಪ್ಪ ಅಂಬಲಿ ಆಕ್ರೋಶ ವ್ಯಕ್ತಪಡಿಸಿದರು.
ನರಗುಂದದಲ್ಲಿ ಜು. 21 ರಂದು ಆಚರಿಸಲಾಗುವ ಹುತಾತ್ಮರ ದಿನಾಚರಣೆ ಕುರಿತು ಸೋಮವಾರ ನರಗುಂದದ ಪ್ರವಾಸಿ ಮಂದಿರದಲ್ಲಿ ಏರ್ಪಡಿಸಿದ್ದ ಪೂರ್ವಭಾವಿ ಸಭೆಯಲ್ಲಿ ಅವರು ಮಾತನಾಡಿದರು.
ಸ್ವಾತಂತ್ರ್ಯ ಬಂದು ಇಷ್ಟು ದಿನ ಕಳೆದರೂ ಯಾವ ಸರ್ಕಾರ ರೈತರ ಕುರಿತು ಚಿಂತನೆ ನಡೆಸಿದೆ ಎಂದು ನಾವೆಲ್ಲ ಇಂದು ತುಲನಾತ್ಮವಾಗಿ ವಿಚಾರಿಸಬೇಕಾಗಿದೆ. ರೈತರ ಬೆಳೆಗಳಿಗೆ ನೀರು ದೊರೆಯುತ್ತಿಲ್ಲ. ಸಕಾಲಕ್ಕೆ ಅವರಿಗೆ ಬೀಜದ ಕೊರತೆ ಮತ್ತು ಅವರ ಉತ್ಪನ್ನಗಳಿಗೆ ಸರಿಯಾದ ಬೆಲೆ ನೀಡಲು ಸಹ ಸರ್ಕಾರಗಳು ಚಿಂತನೆಗೊಳಿಸಿಲ್ಲ. ಈ ರಾಜ್ಯದ 40 ಲಕ್ಷ ರೈತರ 34 ಸಾವಿರಕೋಟಿ ರೂ. ಸಾಲಮನ್ನಾ ಮಾಡಿರುವುದಾಗಿ ಈಗಿನ ರಾಜ್ಯ ಸರ್ಕಾರ ತಿಳಿಸಿ ಇದರ ಬೆನ್ನಲ್ಲೆ ಡಿಸೈಲ್‌ ಮತ್ತು ಪೆಟ್ರೋಲ್‌ ಬೆಲೆ ಏರಿಕೆಮಾಡಿ ಬಿಸಿ ನೀಡಿದೆ. ಇದು ಯಾವ ಲೆಕ್ಕವೆಂದು ರೈತರು ಕೇಳಬಹುದಾಗಿದೆ. ಸದಾ ರೈತರ ಬೆನ್ನಿಗೆ ಚೂರಿಹಾಕುವ ಕೆಲಸ ಸರ್ಕಾರಗಳಿಂದ ನಡೆದಿದೆ ಎಂದರು.
ರೈತರ ಸಾಲಮನ್ನಾ ಕುರಿತು ಸರ್ಕಾರ ಸ್ಪಷ್ಟತೆ ನೀಡಿಲ್ಲವೆಂದು ಅವರು ಸರ್ಕಾರದ ನೀತಿಗಳನ್ನು ಟೀಕಿಸಿದರು.
1980ರಲ್ಲಿ ನರಗುಂದದಲ್ಲಿ ನಡೆದ ಪ್ರತಿಭಟಣೆ ಸಂದರ್ಭದಲ್ಲಿ ನರಗುಂದ ತಾಲೂಕಿನ ಚಿಕ್ಕನರಗುಂದ ಈರಪ್ಪ ಕಡ್ಲಿಕೊಪ್ಪ ಮತ್ತು ನವಲಗುಂದ ತಾಲೂಕಿನ ಬಸಪ್ಪ ಲಕ್ಕುಂಡಿ ರೈತರು ಸಾವನ್ನಪ್ಪಿದ್ದರು. ಅವರ ಕುಟುಂಬಗಳು ಇನ್ನೂ ಕಣ್ಣೀರಲ್ಲಿ ಕೈತೊಳೆಯುವಂತಾಗಿದೆ. ಮಹದಾಯಿ ನಮ್ಮ ಪಾಲಿನ ನೀರು ನೀಡಿ ಎಂದು ನಾವು ಸರ್ಕಾರಗಳಗೆ ಭಿಕ್ಷೆ ಬೇಡುವಂತಹ ಸ್ಥಿತಿ ಉತ್ತರ ಕರ್ನಾಟಕದ ರೈತರ ಈಗಿನ ಹಣೆಬರಹವಾಗಿದೆ ಎಂದರು.
ಗೋವಾ ಮತ್ತು ಮಹರಾಷ್ಟ್ರಗಳ ಮನವೋಲೈಸಿ ಇಂದಿಗೂ ಮಹದಾಯಿಯ ನಮ್ಮ ಪಾಲಿನ ನೀರನ್ನು ಸರ್ಕಾರಗಳಿಗೆ ಕೊಡಿಸಲು ಆಗಿಲ್ಲ. ರೈತರ ಒಪ್ಪಿಗೆ ಇರದಿದ್ದರೂ ಕೂಡಾ ಕೇಂದ್ರದಲ್ಲಿಯ ಈ ಹಿಂದಿನ ಸರ್ಕಾರ ಮಹದಾಯಿ ವಿವಾದ ನ್ಯಾಯಮಂಡಳಿಗೆ ಒಪ್ಪಿಸಿತ್ತು. ಇದರ ವಿಚಾರಣೆಗಾಗಿ ಅನೇಕ ವರ್ಷಗಳನ್ನು ನ್ಯಾಯಮಂಡಳಿ ದೂಡಿತು. ಈಗ ಅಗಷ್ಟದೊಳಗೆ ತೀರ್ಪು ನೀಡಲು ನ್ಯಾಯಮಂಡಳಿ ನಿರ್ಣಯಿಸಿದೆ. ರೈತರ ಪರವಾಗಿ ಕೆಲಸ ಮಾಡಲು ಸಿದ್ದರಿರದ ಶಾಸಕರು, ಸಂಸದರು ನಮಗೆ ಅಗತ್ಯವೇ ಎಂದು ಶಂಕರಪ್ಪ ಅಂಬಲಿ ಪ್ರಶ್ನಿಸಿ, ಇಂತಹ ಗೋಸುಂಬೆ ವರ್ತನೆ ಸರ್ಕಾರದ ಆಡಳಿತಕ್ಕೆ ರೈತರು ನೊಂದುಕೊಂಡಿದ್ದಾರೆಂದು ಆಕ್ರೋಶ ವ್ಯಕ್ತಪಡಿಸಿದರು.
ಸಭೆಯಲ್ಲಿ ಮದಸೂದನ ತಿವಾರಿ, ಬಸವರಾಜ ಸಾಬಳೆ, ವಿಠಲ ಜಾಧವ, ಚನ್ನು ನಂದಿ, ಚಂದ್ರಗೌಡ ಪಾಟೀಲ ಮಾತನಾಡಿದರು. ಲಕ್ಷ್ಮಣ ಬಕಾಯಿ, ಬಾಲಚಂದ್ರ ಸುರಪೂರ, ಬಿ.ಎಂ ಮರೆತಮ್ಮಣ್ಣವರ, ಶಂಕರಗೌಡ ಪಾಟೀಲ, ನಿಂಗಪ್ಪ ತಪ್ಪಲದ, ಎಂ.ಎಂ. ಮಿರ್ಜಿ,ದೇವಕ್ಕ ಮಲ್ಲಗಿ, ಬಸವ್ವ ಸರಣ್ಣವರ, ಶಾಂತವ್ವ ಸಂಗಟಿ, ಅನಸವ್ವ ಗಾಯಕವಾಡ, ಎಚ್‌.ಎಚ್‌. ಮಜ್ಜಿಗುಡ್ಡ, ಎಸ್‌.ಎಂ. ,ಮರಿಗೌಡ್ರ, ವಿನೋದ ವಡ್ಡರ, ಡಿ.ಎಂ. ನಾಯ್ಕರ್‌ ಇದ್ದರು.

loading...