ರೈತರ ಹೆಸರಿನಲ್ಲಿ ಪಟ್ಟಾ ಮಂಜೂರಿಗೆ ಆಗ್ರಹ

0
11
loading...

ಕನ್ನಡಮ್ಮ ಸುದ್ದಿ-ಕಾರವಾರ: ಕಳೆದ 75 ಕ್ಕೂ ಹೆಚ್ಚಿನ ವರ್ಷಗಳಿಂದ ಅರಣ್ಯ ಭೂಮಿ ಅತಿಕ್ರಮಿಸಿ ಸಾಗುವಳಿ ಮಾಡುತ್ತಿರುವ ರೈತರ ಜಮೀನನ್ನು ಸಕ್ರಮ ಮಾಡದೇ ಸಂಪೂರ್ಣವಾಗಿ ನಿರ್ಲಕ್ಷಿಸಿದ್ದು, ಕೂಡಲೇ ಸಕ್ರಮ ಮಾಡದಿದ್ದರೆ, ಮುಂದಿನ ದಿನಗಳಲ್ಲಿ ಜಿಲ್ಲೆಯ ಮೂರು ಸಾವಿರಕ್ಕೂ ಹೆಚ್ಚಿನ ರೈತರಿಂದ ಮುಖ್ಯಮಂತ್ರಿ ನಿವಾಸದ ಎದುರು ಹೋರಾಟ ಹಮ್ಮಿಕೊಳ್ಳಲಾಗುವುದು ಎಂದು ದಲಿತ ಸಂಘರ್ಷ ಸಮಿತಿಯ ಕೆಂಪು ಸೇನೆಯ ಉತ್ತರ ಕರ್ನಾಟಕ ಸಮಿತಿಯ ಅಧ್ಯಕ್ಷ ವಿ.ಬಿ.ರಾಮಚಂದ್ರ ಸರಕಾರಕ್ಕೆ ಎಚ್ಚರಿಸಿದರು. ನಗರದ ಪತ್ರಿಕಾಭವನದಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು ಹಳಿಯಾಳ ತಾಲೂಕಿನ ಕೃಷಿಕರ ಪಟ್ಟಾ ಮಾಡಿಕೊಡುವಂತೆ ರಾಜ್ಯ ಸರ್ಕಾರಕ್ಕೆ ಈಗಾಗಲೇ ಹಲವಾರು ಬಾರಿ ಮನವಿ ನೀಡಲಾಗಿದೆ.
ಸುಮಾರು 35 ವರ್ಷಗಳಿಂದ ಕ್ಷೇತ್ರದ ಜನಪ್ರತಿನಿಧಿಯಾಗಿರುವ ಸಚಿವ ಆರ್‌.ವಿ.ದೇಶಪಾಂಡೆ ಅವರು ಕೂಡ ಈ ಬಗ್ಗೆ ಗಮನ ಹರಿಸುತ್ತಿಲ್ಲ. 2017ರ ಡಿಸೆಂಬರ್‌ 12ರಂದು ನಾವು ಹಳಿಯಾಳದಿಂದ ಕಾರವಾರದವರೆಗೆ ಪಾದಯಾತ್ರೆ ಮೂಲಕ ಆಗಮಿಸಿ ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಿ ತಾಲ್ಲೂಕಿಗೆ ಭೇಟಿ ನೀಡಿ ಪರಿಶೀಲಿಸಬೇಕು ಎಂದು ಮನವಿ ಮಾಡಲಾಗಿತ್ತು. ಆದರೆ ಜಿಲ್ಲಾಧಿಕಾರಿ ಬರಲಿಲ್ಲ ಈ ಬಗ್ಗೆ ಯಾವುದೇ ಕ್ರಮಕೈಗೊಂಡಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು. ಹಳಿಯಾಳ ತಾಲೂಕಿನಲ್ಲಿ ಶೇ.30 ರಿಂದ ಶೇ.35ರಷ್ಟು ಭೂಮಿ ಜಿ.ಪಿ.ಎಸ್‌. ಆಗಿಲ್ಲ. ಜಮೀನಿಗೆ ಸಂಬಂಧಿಸಿ ಕೃಷಿಕರು ಸಲ್ಲಿಸಿದ ಅರ್ಜಿಗಳಿನ್ನೂ ಸರ್ಕಾರಕ್ಕೆ ತಲುಪಿಲ್ಲ. ಜಿ.ಪಿ.ಎಸ್‌. ಮಾಡುವ ವಿಚಾರದಲ್ಲಿ ಅಧಿಕಾರಿಗಳು ತಾರತಮ್ಯ ಮಾಡುತ್ತಿದ್ದಾರೆ. ಜಿಪಿಎಸ್‌ ಮಾಡುವಲ್ಲಿ ತಪ್ಪಿ ಹೋದ ರೈತರ ಭೂಮಿಗೆ ಜಿಪಿಎಸ್‌ ಮಾಡಬೇಕು. ಉತ್ತರ ಕನ್ನಡ ಜಿಲ್ಲೆಯಾದ್ಯಂತ ಅರಣ್ಯ ಭೂಮಿ ಅತಿಕ್ರಮಿಸಿ ಸಾಗುವಳಿ ಮಾಡುತ್ತಿರುವ ಬಡ, ಕೂಲಿಕಾರ್ಮಿಕ ಪರಿಶಿಷ್ಟ ಜಾತಿ, ಪಂಗಡಗಳಿಗೆ ಸೇರಿದ ರೈತರ ಭೂಮಿಯನ್ನು ಜಿಲ್ಲಾಡಳಿತ ಕೂಡಲೇ ಸಕ್ರಮ ಮಾಡಲು ಸೂಕ್ತ ಕ್ರಮ ಕೈಗೊಳ್ಳಬೇಕು. ಇಲ್ಲದಿದ್ದರೆ, ಮುಂದಿನ ದಿನಗಳಲ್ಲಿ ಬೆಂಗಳೂರಿಗೆ ತೆರಳಿ ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿಯವರನ್ನು ಭೇಟಿ ಮಾಡಲಾಗುವುದು. ಅಲ್ಲಿಯೂ ಸೂಕ್ತ ಸ್ಪಂಧನೆ ಸಿಗದಿದ್ದರೆ,ಅವರ ನಿವಾಸದ ಎದುರು ಹೋರಾಟ ಹಮ್ಮಿಕೊಳ್ಳಲಾಗುವುದು ಎಂದು ಹೇಳಿದರು. ಎಂದು ಆರೋಪಿಸಿದರು. ಹಳಿಯಾಳದ ಸಮೀಪ ಅರಣ್ಯ ಭೂಮಿಯಲ್ಲಿ ರುದ್ರಪ್ಪ ಎಂಬುವವರು ಕೃಷಿ ಮಾಡುತ್ತಿದ್ದರು. ಅವರಿಗೆ ಕಚೇರಿಗಳಿಗೆ ಅಡ್ಡಾಡುವುದು, ಜಿ.ಪಿ.ಎಸ್‌. ಮಾಡಿಸಿಕೊಳ್ಳುವುದರಲ್ಲಿ ಅನುಭವ ಇಲ್ಲ. ಅವರು ಅತಿಕ್ರಮಣ ಮಾಡಿದ ಜಮೀನಿನಲ್ಲಿ ಕೃಷಿ ಮಾಡಿದ್ದಾರೆ ಎಂದು ವಲಯ ಅರಣ್ಯಾಧಿಕಾರಿ ಬೆಳೆದ ಬೆಳೆಯನ್ನೇ ನಾಶ ಮಾಡಿಸಿದ್ದಾರೆ. ಈ ಬಗ್ಗೆ ಉಪ ಅರಣ್ಯಾಧಿಕಾರಿಯ ಗಮನಕ್ಕೂ ತರಲಾಗಿದ್ದು ಮುಂದಿನ ದಿನಗಳಲ್ಲಿ ಬೆಳೆ ಹಾನಿ ಮಾಡದಂತೆ ಒತ್ತಾಯಿಸಲಾಗಿದೆ ಎಂದರು.
ಈ ಸಂದರ್ಭದಲ್ಲಿ ಸಂಘಟನೆಯ ಶಿವಾಜಿ ಮಂಗೇಶ್ಕರ್‌, ಆನಂದ ಮುಗುದ್‌, ಮೀನಾಕ್ಷಿ ಮಾದರ, ಪರಶುರಾಮ ವಡ್ಡರ್‌, ಲಕ್ಷ್ಮಣ, ಸಿದ್ದರಾಮ ತಳವಾರ್‌, ಸತ್ತಾರ್‌ ಬೆಟಗೇರಿ, ನಂದೇಶ್‌ ಬಂಡಿವಡ್ಡಾಳ ಇದ್ದರು. ಬಳಿಕ ಹಳಿಯಾಳ ತಾಲೂಕಿನಲ್ಲಿ 75 ವರ್ಷಗಳಿಗಿಂತಲೂ ಹೆಚ್ಚಿನ ಅವಧಿಯಿಂದ ಅರಣ್ಯ ಜಮೀನು ಒತ್ತುವರಿ ಮಾಡಿಕೊಂಡಿರುವ ರೈತರ ಹೆಸರಿಗೆ ಪಟ್ಟಾ ಮಂಜೂರು ಮಾಡಿಕೊಡಬೇಕು. ಇಲ್ಲದಿದ್ದರೆ ಮುಖ್ಯಮಂತ್ರಿ ಬಳಿಗೆ ನಿಯೋಗದಲ್ಲಿ ತೆರಳಿ ಒತ್ತಡ ಹೇರಲಾಗುವುದು ಎಂದು ಆಗ್ರಹಿಸಿ ದಲಿತ ಸಂಘರ್ಷ ಸಮಿತಿಯ ಜಿಲ್ಲಾ ಘಟಕದ ವತಿಯಿಂದ ಜಿಲ್ಲಾಡಳಿತಕ್ಕೆ ಮನವಿ ಸಲ್ಲಿಸಲಾಯಿತು.

loading...