ಲಚ್ಯಾಣದ ಸಿದ್ಧಲಿಂಗ ಮಹಾರಾಜರ ಚಲನಚಿತ್ರ ನಿರ್ಮಾಣಕ್ಕೆ ಸಂಕಲ್ಪ – ಶ್ರೀಗಳು

0
17
loading...

ಕನ್ನಡಮ್ಮ ಸುದ್ದಿ-ಇಂಡಿ: ಪವಾಡ ಪುರುಷ ಲಿಂಗೈಕ್ಯ ಸಿದ್ಧಲಿಂಗ ಮಹಾರಾಜರ ಜೀವನ ಚರಿತ್ರೆ ಕುರಿತ ಕನ್ನಡ ಚಲನಚಿತ್ರ ನಿರ್ಮಿಸಬೇಕು ಎಂಬ, ಅಪಾರ ಭಕ್ತರ ಬಹುದಿನಗಳ ಬೇಡಿಕೆ ಈಗ ಸಾಕಾರಗೊಳ್ಳುವ ಕಾಲ ಕೂಡಿಬಂದಿದೆ. ಇದೊಂದು ಯೋಗಾಯೋಗ ಎಂದು ಹಳಿಂಗಳಿಯ ಶಿವಾನಂದ ಮಹಾಸ್ವಾಮೀಜಿ ಹೇಳಿದರು.
ಇಂಡಿ ತಾಲ್ಲೂಕಿನ ಸುಕ್ಷೇತ್ರ ಲಚ್ಯಾಣದ ಲಿಂ.ಸಿದ್ಧಲಿಂಗ ಮಹಾರಾಜರ ಕಮರಿಮಠದಲ್ಲಿ ಭಾನುವಾರ ನಡೆದ, ಪೂರ್ವಭಾವಿ ಸಭೆಯ ಅಧ್ಯಕ್ಷತೆವಹಿಸಿ ಮಾತನಾಡಿದ ಅವರು, ಸಾಧು ಪುರುಷ ಸಿದ್ಧಲಿಂಗ ಮಹಾರಾಜರ ಜೀವನ ಚರಿತ್ರೆಯ ಕುರಿತು, ಚಲನಚಿತ್ರ ನಿರ್ಮಿಸಲು ಜಮಖಂಡಿ ಚಲನಚಿತ್ರ ತಂಡದವರು ಒಪ್ಪಿಗೆ ಸೂಚಿಸಿದ್ದಾರೆ. ಈ ಕಾರ್ಯಕ್ಕೆ ಅತ್ಯಗತ್ಯವಾದ ಆರ್ಥಿಕ ಸಹಾಯಕ್ಕೆ ದಾನಿಗಳು ಮುಂದೆಬರಬೇಕು ಎಂದರು.
ಸಭೆಯ ಸಾನಿಧ್ಯವಹಿಸಿದ ಬಂಥನಾಳ ಮಠದ ಪೀಠಾಧೀಶರಾದ ಪೂಜ್ಯ ವೃಷಭಲಿಂಗೇಶ್ವರ ಮಹಾಶಿವಯೋಗಿಗಳು ಮಾತನಾಡಿ, ತಮ್ಮ ಪವಾಡ ಶಕ್ತಿಯ ಮೂಲಕ ಲೋಕ ಕಲ್ಯಾಣ ಕಾರ್ಯ ಮಾಡಿದ ಲಿಂಗೈಕ್ಯ ಸಿದ್ಧಲಿಂಗ ಮಹಾರಾಜರು ಮಹಿಮೆ ಬಲು ದೊಡ್ಡದು, ಇಂಥಹ ಮಹಿಮರ ಪವಾಡ ಇಂದಿನ ಜನಾಂಗಕ್ಕೆ ಪರಿಚಯಿಸುವ ಚಲನಚಿತ್ರ ನಿರ್ಮಾಣ ಕಾರ್ಯಕ್ಕೆ ಈ ಭಾಗದ ಭಕ್ತರು ಅಭೂತಪೂರ್ವ ಉತ್ಸಾಹ ತೋರಿರುವದಕ್ಕೆ ಸಂತಸ ವ್ಯಕ್ತಪಡಿಸಿದರು.
ಚಿತ್ರಕಥೆ ಸಂಭಾಷಣೆಕಾರ ಪದ್ಮಣ್ಣ ನರಸಣ್ಣವರ ಮಾತನಾಡಿ, ಈ ಚಲನಚಿತ್ರವನ್ನು ಹಳಿಂಗಳಿಯ ಶಿವಾನಂದ ಮಹಾಸ್ವಾಮೀಜಿ ಬರೆದ ಕಥೆಯನ್ನೆ ಆಧರಿಸಿ, ಚಿತ್ರಿಕರಣ ಮಾಡಲಾಗುವದು, ಗುಣಮಟ್ಟದ ಕ್ಯಾಮರಾ ಬಳಸಲಾಗುವದು, ನುರಿತ ಕಲಾವಿದರು ಅಭಿನಯಿಸಲಿದ್ದಾರೆ ಎಂದು ವಿವರಿಸಿದರು.
ಇದೇ ಸಂದರ್ಭದಲ್ಲಿ ಹಲವು ದಾನಿಗಳು ಚಿತ್ರಿಕರಣಕ್ಕೆ ದೇಣಿಗೆ ಸಲ್ಲಿಸಿದರು. ಸಭೆಯಲ್ಲಿ ಎಂ.ಎಸ್‌. ಮುಜಗೊಂಡ ಹಾಗೂ ಉಪನ್ಯಾಸಕ ಎ.ಪಿ. ಕಾಗವಾಡಕರ, ಜಿ.ಕೆ. ಲಾಳಸೇರಿ ಹಾಗೂ ಡಿ.ಎ. ಮುಜಗೊಂಡ ಅಭಿಪ್ರಾಯ ವ್ಯಕ್ತಪಡಿಸಿದರು.
ಈ ಸಂದರ್ಭದಲ್ಲಿ ಬಸಯ್ಯ ಮಠ, ಮಲ್ಲಯ್ಯ ಮಠಪತಿ, ಚಿತ್ರಕಥೆ ಸಹನಿರ್ದೆಶಕ ಶಂಕರ ಪಾಟೀಲ್‌, ಸ್ಟಿಲ್‌ ಕ್ಯಾಮರಾಮನ್‌ ಶಿವಪ್ರಕಾಶ ತುಕ್ಕಣ್ಣವರ, ಊರಿನ ಗಣ್ಯರಾದ ಡಿ.ಎಸ್‌. ಪಾಟೀಲ್‌, ಜಗನ್ನಾಥ ಕೋಟೆ, ವಿ.ಎಂ. ಕರಾಳೆ, ಹಣಮಂತ ಮುಜಗೊಂಡ, ಗೌರಿಶಂಕರ ಬಾಬುಳಗಾಂವ, ಸಂಕಪ್ಪಗೌಡ ಬಿರಾದಾರ, ಅಶೋಕಗೌಡ ಪಾಟೀಲ್‌, ರಮೇಶ ದಾಯಗೋಡೆ, ಮಲಕಣ್ಣಾ ಗುಬ್ಯಾಡ ಹಾಗೂ ಸುತ್ತಲ ಗ್ರಾಮದ ಹಲವು ಗಣ್ಯರು ಉಪಸ್ಥಿತರಿದ್ದರು.

loading...