ವಚನ ಸಾಹಿತ್ಯ ಬದುಕಿನ ಒಂದು ಭಾಗ: ಅರವಿಂದ ಜತ್ತಿ

0
18
loading...

ಕನ್ನಡಮ್ಮ ಸುದ್ದಿ-ವಿಜಯಪುರ: ವಚನ ಸಾಹಿತ್ಯ ಬದುಕಿನ ಒಂದು ಭಾಗ. ವ್ಯಕ್ತಿತ್ವ ವಿಕಸನದಲ್ಲಿ ವಚನ ಸಾಹಿತ್ಯ ಅತ್ಯಂತ ಪ್ರಭಾವ ಬೀರುತ್ತದೆ ಎಂದು ಬಸವ ಸಮಿತಿಯ ರಾಜ್ಯ ಘಟಕದ ಅಧ್ಯಕ್ಷ ಅರವಿಂದ ಜತ್ತಿ ಹೇಳಿದರು.
ವಿಜಯಪುರದ ಬಿಎಲ್‌ಡಿಇ ಸಂಸ್ಥೆಯ ಎಸ್‌.ಬಿ. ಕಲಾ ಮತ್ತು ಕೆಸಿಪಿ ವಿಜ್ಞಾನ ಮಹಾವಿದ್ಯಾಲಯ ಹಾಗೂ ಐಕ್ಯೂಎಸಿ ಸಹಯೋಗದಲ್ಲಿ ಹಮ್ಮಿಕೊಳ್ಳಲಾಗಿದ್ದ ‘ವಚನಗಳು ಮತ್ತು ವ್ಯಕ್ತಿತ್ವ ವಿಕಸನ’ ಕುರಿತಾಗಿ ವಿಶೇಷ ಉಪನ್ಯಾಸ ನೀಡಿದ ಅವರು, ವಚನ ಸಾಹಿತ್ಯ ತನ್ನದೇ ಆದ ಮಹತ್ವ ಹೊಂದಿದೆ. ವಚನಗಳಿಂದ ಬದುಕು ಹಸನಾಗುತ್ತದೆ. ಅಂತಹ ಮಹತ್ವದ ಜೀವನ ಮೌಲ್ಯಗಳು ವಚನ ಸಾಹಿತ್ಯದಲ್ಲಿ ಅಡಕವಾಗಿವೆ ಎಂದರು. ಸಾಹಿತ್ಯಕ್ಕೆ ಚೌಕಟ್ಟು ಎನ್ನುವುದಿಲ್ಲ ಎಲ್ಲ ವಿಷಯಗಳಲ್ಲಿ ನಾವು ಸಾಹಿತ್ಯವನ್ನು ಕಾಣಬಹುದು. ಅದರ ವ್ಯಾಪಿಯು ತುಂಬಾ ಆಳವಾದುದು. ವಚನ ಸಾಹಿತ್ಯದಲ್ಲಿ ಎಲ್ಲ ವಿಶ್ವವಿದ್ಯಾಲಯಗಳಿಂದ 576 ಸಂಶೋಧನಾ ಪ್ರಬಂಧಗಳಿಗ ಪಿಎಚ್‌ಡಿ ಪದವಿ ದೊರಕಿದೆ. ಈ ಮೂಲಕ ವಚನ ಸಾಹಿತ್ಯದ ಆಳವನ್ನು ಅರಿಯಬಹುದಾಗಿದೆ. ಬದುಕಿನ ಆದರ್ಶದ ಪಾಠಗಳು ವಚನ ಸಾಹಿತ್ಯದಲ್ಲಿವೆ. ವಚನ ಸಾಹಿತ್ಯದ ಅಧ್ಯಯನದಿಂದ, ವಚನಗಳ ಸಾರವನ್ನು ಜೀವನದಲ್ಲಿ ಅಳವಡಿಸಿಕೊಳ್ಳುವ ಮೂಲಕ ಜೀವನದಲ್ಲಿ ಉತ್ತಮ ಸಾಧನೆ, ಸಂಸ್ಕಾರದಿಂದ ಕೂಡಿದ ಜೀವನ ನಡೆಸಬಹುದಾಗಿದೆ ಎಂದರು.
ಅಲ್ಲಮ ಪ್ರಭು ಆಧ್ಯಾತ್ಮ ಜೀವಿ. ಭಗವಂತನ ಇತಿಹಾಸ ತಿಳಿಯ ಬೇಕಾದರೆ ಸಾಧನೆ ಮಾಡಬೇಕು. ಅದಮ್ಯ, ಅಗೋಚರ, ವಿಜ್ಞಾನವನ್ನು ಅರ್ಥಮಾಡಿಕೊಂಡರೆ ವಚನಗಳಲ್ಲಿರುವ ಆತ್ಮಸಾಕ್ಷಿ ಪ್ರಜ್ಞೆ ತಿಳಿಯುವುದು. ಜೀವನದಲ್ಲಿ ಯಶಸ್ವಿ ಹೊಂದಬೇಕಾದರೆ ಹಿಡಿದಗುರಿಯಿಂದ ಹಿಂದೆ ಸರಿಯಕೂಡದು. ಕಲಿತಂತ ಜ್ಞಾನ ಎಲ್ಲರ ಹೃದಯವನ್ನು ಮನಮುಟ್ಟುವಂತಿರಬೇಕು. ಶರಣರ ಬಗ್ಗೆ ಜಾಗೃತಿ ಮೂಡಿಸಲು ದೇಶದ ಎಲ್ಲ ಗ್ರಂಥಾಲಯಗಳಲ್ಲಿ ವಚನ ಸಾಹಿತ್ಯ ಗ್ರಂಥಗಳಿರಬೇಕು.
ವಚನಗಳಲ್ಲಿ ಸಾಕಷ್ಟು ವ್ಯಕ್ತಿತ್ವ ವಿಕಸನಕ್ಕೆ ಬೇಕಾದ ವಿಷಯಗಳಿವೆ. ಪ್ರತಿಯೊಂದು ವಿಷಗಳಲ್ಲಿ ವಚನಗಳಿವೆ. ಛಲವಿದ್ದರೆ ಗೆಲವು ನಿಮ್ಮನ್ನು ಹಿಂಬಾಲಿಸುವುದು. ಭಾವದಲ್ಲಿ ದಿಗಂಭರತ್ವವಿರಬೇಕು, ಭಾಷೆಯಲ್ಲಿ ಉದಾಸೀನತೆ, ಜ್ಞಾನದಲ್ಲಿ ಪರಮಾನಂದವಿರಬೇಕು. ದೈವದ ಪರಿಪೂರ್ಣವಾದ ಕಲ್ಪನೆಗಳು ಬೆಳಕಿನಲ್ಲಿವೆ ಎಂದರು.
ವಿದ್ಯಾರ್ಥಿಗಳು ಸಂದರ್ಭ ಬಂದಾಗ ಅವಕಾಶಗಳನ್ನು ಸದುಪಯೋಗಪಡಿಸಿಕೊಳ್ಳಬೇಕು. ಅಭಿಮಾನಕ್ಕೆ ತುತ್ತಾಗಿ ನಿಮ್ಮ ಜ್ಞಾನವನ್ನು ಸಂಕುಚಿತಗೊಳಿಸಬಾರದು ಎಂದು ಸಲಹೆ ನೀಡಿದರು.
ಪ್ರಾಚಾರ್ಯ ಡಾ. ಕೆ.ಜಿ.ಪೂಜಾರಿ. ಮಹಾಂತೇಶ ಬಿರಾದಾರ. ಸಂಗಮೇಶ್ವರ ಬಬಲೇಶ್ವರ ಮೊದಲಾದವರು ಉಪಸ್ಥಿತರಿದ್ದರು.
ಉಪನ್ಯಾಸಕಿ ಜ್ಯೋತಿ ಕೋರಿ ಪ್ರಾರ್ಥಿಸಿದರು. ಪ್ರೊ. ಜಿ.ಆರ್‌.ಅಂಬಲಿ ಸ್ವಾಗತಿಸಿದರು. ಡಾ. ಎಸ್‌.ಟಿ.ಮೇರವಾಡೆ ಕಾರ್ಯಕ್ರಮ ನಿರೂಪಿಸಿದರು. ಡಾ.ಯು.ಎಸ್‌.ಪೂಜಾರಿ ವಂದಿಸಿದರು.

loading...