ವಿದ್ಯಾರ್ಥಿಗಳು ಪಠ್ಯದ ಜೊತೆ ಕಲಾ ಸಂಸ್ಕೃತಿಯ ಬೆಳೆಸಿಕೊಳ್ಳಿ: ಚಿನ್ನಾ

0
9
loading...

ಕನ್ನಡಮ್ಮ ಸುದ್ದಿ-ಕುಮಟಾ: ವಿದ್ಯಾರ್ಥಿಗಳು ಪಠ್ಯದ ಜೊತೆ ಕಲಾ ಸಂಸ್ಕಾರವನ್ನು ಬೆಳೆಸಿಕೊಳ್ಳಬೇಕು ಎಂದು ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಜಿ ಡಿ ಭಟ್‌ ಅಭಿಪ್ರಾಯ ಪಟ್ಟರು.
ಅವರು ಶನಿವಾರ ಇಲ್ಲಿನ ಕೊಂಕಣ ಶಿಕ್ಷಣ ಸಂಸ್ಥೆಯ ಸಭಾಭವನದಲ್ಲಿ ರಂಗಚಿನ್ನಾರಿ ಕಾಸರಗೋಡ (ರಿ), ಕನ್ನಡ ಸಂಸ್ಕೃತಿ ಇಲಾಖೆ ಬೆಂಗಳೂರು, ಕೊಂಕಣ ಎಜ್ಯುಕೇಶನ್‌ ಟ್ರಸ್ಟ್‌ ಇವರ ಸಂಯುಕ್ತ ಆಶ್ರಯದಲ್ಲಿ ನಡೆದ ರಂಗ ಸಂಸ್ಕೃತಿ ತರಬೇತಿ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿ, ಶಿಕ್ಷಣ ಸಂಸ್ಥೆಗಳಲ್ಲಿ ಕಲೆಗಳ ಸಿಂಚನವಾಗುತ್ತಿರುವುದು ಶಿಕ್ಷಣದಲ್ಲಿಯ ಸಂಪನ್ನತೆಯನ್ನು ಬಿಂಬಿಸುತ್ತದೆ. ಈ ಮೂಲಕ ಶಿಕ್ಷಣದ ಜ್ಯೋತಿ ಸದಾ ಬೆಳಗುತ್ತಿರಬೇಕು ಎಂದರು.
ಕಾಸರಗೋಡು ಚಿನ್ನಾ ಮತನಾಡಿ, ಪಠ್ಯದ ಓದಿನ ಜೊತೆ ಕಲಾ ಸಂಸ್ಕೃತಿಯ ಕ್ರಿಯಾಶೀಲತೆ ಬೆಳೆಸಿಕೊಳ್ಳಬೇಕು. ಪಠ್ಯ ಪುಸ್ತಕಗಳನ್ನು ಓದಿನ ಬಿಡುವಿಲ್ಲದ ಸಮಯದಿಂದ ವಿದ್ಯಾರ್ಥಿಗಳು ಚಂದಮಾಮಾದಂತಹ ಕಥೆಗಳನ್ನು ಓದುವ ಹವ್ಯಾಸ ಮಾಡಿಕೊಳ್ಳಬೇಕು. ಕಲೆ ಕಲಿಕೆಗೆ ಅಡ್ಡಿ ಬರಲಾರದು. ಹೀಗಾಗಿ ವಿದ್ಯಾರ್ಥಿಗಳು ಆಸಕ್ತಿ ತೋರಬೇಕು. ಅಲ್ಲದೇ ಇಲ್ಲಿನ ರಂಗ ಕಲಾ ತರಬೇತಿಗೊಳಿಸಲು ಕೊಂಕಣ ಪ್ರೌಢ ಶಾಲೆಯನ್ನು ದತ್ತು ಪಡೆದುಕೊಂಡಿದ್ದೇನೆ ಎಂದು ತಿಳಿಸಿದರು.
ಕೊಂಕಣ ಶಿಕ್ಷಣ ಸಂಸ್ಥೆಯ ಕಾರ್ಯದರ್ಶಿ ಮುರಳೀಧರ ಪ್ರಭು ಅವರು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿ, ಜೀವನ ಒಂದು ನಾಟಕ. ಸಮಾಜದಲ್ಲಿಯ ಜೀವನದ ಆಯಾಮಗಳನ್ನು ನಾಟಕಗಳು ನಿಜ ರೂಪದಲ್ಲಿ ಪ್ರದರ್ಶಿಸುತ್ತವೆ. ಕಲಾವಿದರಾಗುವ ಸಾಮರ್ಥ್ಯ ಹಾಗೂ ಇದನ್ನು ಪ್ರದರ್ಶಿಸಲು ಆಸಕ್ತಿ ಪ್ರತೊಯೊಂದು ಮಕ್ಕಳಲ್ಲಿ ಇದೆ. ಆದರೆ ಪಾಲಕರಲ್ಲಿ ಈ ಆಸಕ್ತಿ ಕಂಡು ಬರುತ್ತಿಲ್ಲ. ಇಂದು ನಾಟಕಗಳು ಅತ್ಯಂತ ಪ್ರಸ್ತುತವಾಗಿದೆ. ಅಲ್ಲದೇ ಕಲೆಗಳಲ್ಲಿ ಜಗತ್ತು ಮಿಥ್ಯ ಜೀವನ ಸತ್ಯ ಎಂಬುದನ್ನು ಕಾಣಬಹುದು ಎಂದರು.
ಚಿದಾನಂದ ಭಂಡಾರಿ ಸ್ವಾಗತಿಸಿದರು. ಅನಿತಾ ಪಟಗಾರ ಹಾಗೂ ಸುನಿತಾ ನಾಯ್ಕ ನಿರೂಪಿಸಿದರು. ಶಿವಾನಂದ ಭಟ್‌ ವಂದಿಸಿದರು. ಜಗನ್‌ ಪವಾರ್‌, ಪ್ರಕಾಶ ನಾಯಕ, ಡಿ ಡಿ ಕಾಮತ್‌, ಡಾ ಸುಲೋಚನಾ ರಾವ್‌, ಸುಮಾ ಪ್ರಭು ಹಾಗೂ ಮೊದಲಾದವರು ಉಪಸ್ಥಿತರಿದ್ದರು.

loading...