ವಿದ್ಯಾರ್ಥಿಗಳು ಸಮಯದ ಸದುಪಯೋಗಪಡಿಸಿಕೊಳ್ಳಿ

0
16
loading...

ಕನ್ನಡಮ್ಮ ಸುದ್ದಿ-ಧಾರವಾಡ: ವ್ಯರ್ಥವಾದ ಹರಟೆಯ ಮಾತುಗಳಿಂದ ಸಮಯವನ್ನು ವ್ಯರ್ಥಮಾಡದೇ ಸಿಕ್ಕ ಸಮಯಾವಕಾಶವನ್ನು ವಿದ್ಯಾರ್ಥಿಗಳು ಸರಿಯಾದ ರೀತಿಯಲ್ಲಿ ಸದುಪಯೋಗಪಡಿಸಿಕೊಳ್ಳಬೇಕು ಎಂದು ಮುರುಘಾಮಠದ ಮಲ್ಲಿಕಾರ್ಜುನ ಮಹಾಸ್ವಾಮಿಗಳು ಹೇಳಿದರು.
ಜೆ.ಎಸ್.ಎಸ್. ಬನಶಂಕರಿ ಕಲಾ, ವಾಣಿಜ್ಯ ಮತ್ತು ಶಾಂತಿಕುಮಾರ ಗುಬ್ಬಿ ವಿಜ್ಞಾನ ಮಹಾವಿದ್ಯಾಲಯದ ವಿದ್ಯಾರ್ಥಿ ಸಂಘ ಹಾಗೂ ಕ್ರೀಡಾ ವಿಭಾಗಗಳ ಉದ್ಘಾಟನಾ ಸಮಾರಂಭದ ಸಾನಿಧ್ಯವಹಿಸಿ ಮಾತನಾಡಿದರು. ಚಂಚಲವಾದ ಮನಸ್ಸನ್ನು, ಇಂದ್ರೀಯ ಆಸೆಗಳನ್ನು ಹತೋಟಿಯಲ್ಲಿ ಇಟ್ಟುಕೊಂಡಾಗ ಮಾತ್ರ ಜೀವನದಲ್ಲಿ ಯಶಸ್ಸು ಸಾಧಿಸಿ, ಗುರಿ ಮುಟ್ಟಲು ಸಾಧ್ಯ. ದುಶ್ಚಟಗಳಿಗೆ ಈಡಾಗಿ, ಹಣವನ್ನು ವ್ಯಯಮಾಡಿ, ಆರೋಗ್ಯವನ್ನು ಹಾಳು ಮಾಡಿಕೊಂಡು ಹೆತ್ತವರಿಗೂ, ವಿದ್ಯೆ ಕಲಿಸಿದ ಗುರುಗಳಿಗೂ ಭಾರವಾಗುವುದು ಜೀವನವಲ್ಲ ಸತ್ಕಾರ್ಯದಲ್ಲಿ ಮನಸ್ಸನ್ನು ತೊಡಗಿಸಿಕೊಂಡು ಸದಾಕಾಲ ಸಾಧನೆಯ ಸಿದ್ಧಿಗೆ ಪ್ರಯತ್ನಿಸುವುದೇ ವಿದ್ಯಾರ್ಥಿ ಜೀವನದ ಗುರಿಯಾಗಬೇಕು ಎಂದರು. ಜನತಾ ಶಿಕ್ಷಣ ಸಮಿತಿಯ ಕಾರ್ಯದರ್ಶಿÀ ಡಾ. ನ.ವಜ್ರಕುಮಾರ ಅಧ್ಯಕ್ಷತೆವಹಿಸಿ ಮಾತನಾಡಿ, ಗುರು-ಶಿಷ್ಯರ ಮಧ್ಯೆ ಆದರ್ಶ ಬಾಂಧವ್ಯ ಏರ್ಪಡಬೇಕಾದರೆ ವಿದ್ಯಾರ್ಥಿಗಳು ಪಠ್ಯ ಹಾಗೂ ಪಠ್ಯೇತರ ಚಟುವಟಿಕೆಗಳಲ್ಲಿ ಸಕ್ರೀಯವಾಗಿ ಪಾಲ್ಗೊಂಡು, ತಮ್ಮ-ತಮ್ಮ ಪ್ರತಿಭೆಯನ್ನು ತೋರ್ಪಡಿಸಲು ಒಳ್ಳೆಯ ಅವಕಾಶವಿರುತ್ತದೆ, ಇದರ ಸದುಪಯೋಗವನ್ನು ಎಲ್ಲ ವಿದ್ಯಾರ್ಥಿಗಳೂ ಪಡೆದುಕೊಳ್ಳಬೇಕು ಎಂದರು. ಜೆ.ಎಸ್.ಎಸ್. ವಿತ್ತಾಧಿಕಾರಿ ಡಾ. ಅಜಿತಪ್ರಸಾದ ಅವರು ನೂತನ ಪದಾಧಿಕಾರಿಗಳಾಗಿ ಆಯ್ಕೆಯಾದ ವಿದ್ಯಾರ್ಥಿ ಪ್ರತಿನಿಧಿಗಳಿಗೆ ಪ್ರತಿಜ್ಞಾವಿಧಿ ಬೋಧಿಸಿದರು. ಪ್ರಾಚಾರ್ಯ ಡಾ. ಜಿ.ಕೃಷ್ಣಮೂರ್ತಿ ಪ್ರಾಸ್ತಾವಿಕ ಮಾತನಾಡಿದರು. ಉಪಪ್ರಾಚಾರ್ಯರುಗಳಾದ ಡಾ. ಚಿತ್ರಾ ದೈಜೋಡೆ, ಡಾ. ಬಿ.ಆರ್. ಗಾಯತ್ರಿ, ದೈಹಿಕ ಶಿಕ್ಷಣ ನಿರ್ದೇಶಕ ಜಿನ್ನಪ್ಪ ಕುಂದಗೋಳ, ಪ್ರೊ. ಸೂರಜ ಜೈನ ಉಪಸ್ಥಿತರಿದ್ದರು. ಶಿವನಂದಿನಿ ಸ್ವಾಗತಿಸಿದರು. ಸತೀಶ ಉಳ್ಳಾಗಡ್ಡಿ ವಂದಿಸಿದರು. ವೇದಶ್ರೀ ಮರಾಠೆ ನಿರೂಪಿಸಿದರು.

loading...