ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹ

0
11
loading...

ವಿಜಯಪುರ : ಟೋಲ್‌ ಶುಲ್ಕವನ್ನು ಸಂಪೂರ್ಣ ರದ್ದುಗೊಳಿಸಿ ಟೋಲ್‌ ಮುಕ್ತ ಭಾರತ ನಿರ್ಮಿಸುವುದು ಸೇರಿದಂತೆ ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಅಖಿಲ ಭಾರತ ಮೋಟಾರ ಟ್ರಾನ್ಸ್‌ಪೋರ್ಟ್‌ ಕಾಂಗ್ರೆಸ್‌ ಕರೆ ನೀಡಿದ್ದ ಲಾರಿ ಮುಷ್ಕರವನ್ನು ಬೆಂಬಲಿಸಿ ವಿಜಯಪುರದಲ್ಲಿಯೂ ಟ್ರಾನ್ಸ್‌ಪೋರ್ಟ್‌ ಲಾರಿ ಸಂಚಾರ ಸಂಪೂರ್ಣ ಸ್ಥಗಿತಗೊಂಡಿತ್ತು. ಜೀವನಾವಶ್ಯಕ ವಸ್ತುಗಳ ಪೂರೈಕೆ ಹೊರತುಪಡಿಸಿ ಉಳಿದೆಲ್ಲ ಲಾರಿಗಳು ರಸ್ತೆಗೆ ಇಳಿಯಲಿಲ್ಲ.
ಶುಕ್ರವಾರ ಸಿಂದಗಿ ಬೈಪಾಸ್‌ನಲ್ಲಿ ಜಮಾಯಿಸಿದ ಲಾರಿ ಸಂಘಟನೆಗಳ ಪದಾಧಿಕಾರಿಗಳು ತಮ್ಮ ಬೇಡಿಕೆ ಈಡೇರಿಕೆಗೆ ಒತ್ತಾಯಿಸುವ ಜೊತೆಗೆ, ಬೇಡಿಕೆಗಳುಳ್ಳ ಕರಪತ್ರ ಹಾಗೂ ಸ್ಟೀಕರ್‌ಗಳನ್ನು ಲಾರಿಗಳಿಗೆ ಅಂಟಿಸಿದರು.
ಸಂಘಟನೆಯ ಜಿಲ್ಲಾಧ್ಯಕ್ಷ ಅಮೋಘಿ ಚಿಂಚಲಿ ಮಾತನಾಡಿ, ಲಾರಿ ಚಾಲಕರು ಹಾಗೂ ಮಾಲಕರು ಅನೇಕ ರೀತಿಯ ಸಮಸ್ಯೆಗಳನ್ನು ಎದುರಿಸುತ್ತಿದ್ದಾರೆ. ಲಾರಿ ಚಾಲಕರ ಹಾಗೂ ಮಾಲೀಕರ ನ್ಯಾಯಯುತವಾದ ಬೇಡಿಕೆಗಳನ್ನು ಸರ್ಕಾರ ಈಡೇರಿಸಬೇಕು ಎಂದು ಒತ್ತಾಯಿಸಿದರು. ಟೋಲ್‌ ಶುಲ್ಕವೂ ಸಹ ಅತೀಯಾಗಿದೆ, ಅದರ ಜೊತೆಗೆ ಟೋಲ್‌ನಲ್ಲಿ ಸಾಕಷ್ಟು ಹೊತ್ತು ನಿಲ್ಲಬೇಕಾದ ಅನಿವಾರ್ಯತೆ, ಈ ಎಲ್ಲ ಕಾರಣಗಳಿಂದಾಗಿ 70 ಸಾವಿರ ಕೋಟಿ ರೂ.ನಷ್ಟು ಇಂಧನ ಸೇರಿದಂತೆ ವಿವಿಧ ರೀತಿಯಲ್ಲಿ ಆರ್ಥಿಕ ನಷ್ಟ ಉಂಟಾಗುತ್ತಿದೆ ಎಂದರು. ಈ ಹಿನ್ನೆಲೆಯಲ್ಲಿ ಕೂಡಲೇ ಟೋಲ್‌ ರದ್ದುಗೊಳಿಸಿ ಟೋಲ್‌ ಮುಕ್ತ ಭಾರತ ನಿರ್ಮಾಣಕ್ಕೆ ಸಂಕಲ್ಪ ಮಾಡಬೇಕು ಎಂದು ಕರೆ ನೀಡಿದರು. ಬಹುಮುಖ್ಯವಾಗಿ ಲಾರಿ ಹಾಗೂ ಟ್ರಾನ್ಸ್‌ಪೋರ್ಟ್‌ ವಾಹನಗಳ ಥರ್ಡ್‌ ಪಾರ್ಟಿ ಇನ್ಸ್ಯೂರೆನ್ಸ್‌ನ್ನು 150 ಪಟ್ಟು ಹೆಚ್ಚಿಗೆ ಮಾಡಿರುವುದು ಲಾರಿ ಚಾಲಕರ ಹಾಗೂ ಮಾಲಕರ ತೀವ್ರ ಆತಂಕಕ್ಕೆ ಕಾರಣವಾಗಿದೆ, ಇದನ್ನುಕೂಡಾ ರದ್ದುಗೊಳಿಸಬೇಕು. ಪೆಟ್ರೋಲ್‌ ಹಾಗೂ ಡಿಸೈಲ್‌ ಬೆಲೆ ನಿಯಂತ್ರಿಸಲು ಗಂಭೀರವಾದ ಪ್ರಯತ್ನ ಮಾಡಬೇಕು ಎಂದು ಆಗ್ರಹಪಡಿಸಿದರು.
ಸಂಘಟನೆಯ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಸುರೇಶ ಪಾರಗೊಂಡ, ರಜಾಕ ತಾಜಿಮತರಕ, ಆಸೀಫ ಬಗಲಿ, ರಜಾಕ ದರ್ಗಾ, ಕಲಾದಗಿ, ಇಸಾಕ ದರ್ಗಾ, ನೂರ್‌ ಉಲ್ಲಾ ಪಟಾಯತ್‌ ಮೊದಲಾದವರು ಪಾಲ್ಗೊಂಡಿದ್ದರು.

loading...