ವಿವಿಧ ಮೂಲಭೂತ ಸೌಲಭ್ಯ ಒದಗಿಸುವಂತೆ ಮನವಿ

0
13
loading...

ಕನ್ನಡಮ್ಮ ಸುದ್ದಿ-ಶಿರಸಿ: ಯಲ್ಲಾಪುರ ತಾಲೂಕಿನ ಮಾವಿನಮನೆ ಗ್ರಾಮ ಪಂಚಾಯ್ತಿ ವ್ಯಾಪ್ತಿಯಲ್ಲಿ ಎದುರಾಗಿರುವ ವಿದ್ಯುತ್‌ ಸಮಸ್ಯೆ, ಉಪಕರಣಗಳ ಕೊರತೆ ಸೇರಿದಂತೆ ವಿವಿಧ ಮೂಲಭೂತ ಸೌಲಭ್ಯ ಒದಗಿಸುವಂತೆ ಆ ಭಾಗದ ನಾಗರಿಕರು ಬುಧವಾರ ಹೆಸ್ಕಾಂ ಅಧೀಕ್ಷಕ ಅಭಿಯಂತರಲ್ಲಿ ವಿನಂತಿಸಿದರು.
ಭಾರತೀಯ ಕಿಸಾನ್‌ ಸಂಘ ಕರ್ನಾಟಕ ಪ್ರದೇಶ ಮಾವಿನಮನೆ ಘಟಕದ ನೇತೃತ್ವದಲ್ಲಿ ಶಿರಸಿಯಲ್ಲಿರುವ ಹೆಸ್ಕಾಂ ಅಧೀಕ್ಷಕ ಅಭಿಯಂತರ ಶಶಿಧರ ಅವರನ್ನು ಭೇಟಿ ಮಾಡಿ ಚರ್ಚಿಸಿದರು. ತಾಲೂಕಾ ಕೇಂದ್ರದಿಂದ 40 ಕಿಮೀ ದೂರದಲ್ಲಿರುವ ಮಾವಿನಮಬೆ ಗ್ರಾಮ ಪಂಚಾಯ್ತಿ ವ್ಯಾಪ್ತಿಯ ಮಜಿರೆಗಳಿಗೆ ವಿದ್ಯುತ್‌ ಮಾರ್ಗದ ಉನ್ನತೀಕರಣ, ತಂತಿಗಳ ಬದಲಾವಣೆ, ಜಿಓಎಸ್‌ ಹಾಗೂ ವಿದ್ಯುತ್‌ ಪರಿವರ್ತಕಗಳ ಮರು ಜೋಡಣೆ ಮಾಡುವಂತೆ ಮನವಿ ನೀಡಿದರೂ ಹೆಚ್ಚಿನ ಪ್ರಯೋಜನವಾಗಿಲ್ಲ. ಅನುಷ್ಠಾನಗೊಂಡ ಕಾರ್ಯ ನಿಧಾನ ಗತಿಯಲ್ಲಿ ಸಾಗುತ್ತಿದೆ. ಇದರಿಂದ ಸಾರ್ವಜನಿಕರು ತೊಂದರೆಗೆ ಒಳಗಾಗಿದ್ದಾರೆ ಎಂದು ಕಿಸಾನ್‌ ಸಂಘದ ಅಧ್ಯಕ್ಷ ವಿಘ್ನೇಶ್ವರ ಭಟ್ಟ ಹೊಸ್ತೋಟ ಹೇಳಿದರು. ಮಾವಿನಮನೆ, ಬಾರೆ, ಕಾನೂರು, ಬೇಣದಗುಳಿ, ಮರಹಳ್ಳಿ ಗ್ರಾಮದ ಎಲ್ಲ ಟಿಸಿಗಳ ಪಕ್ಕದಲ್ಲಿ ಉರಿಯುತ್ತಿರುವ ತಂತಿಗಳನ್ನು ಕಾಣಬಹುದಾಗಿದೆ. ಇದರಿಂದ ಉಂಟಾಗುವ ಸಮಸ್ಯೆಯಿಂದ ರೈತರು ಕಂಗಾಲಾಗಿದ್ದಾರೆ. ಮಳೆಗಾಲದ ನಿರ್ವಹಣಾ ಯೋಜನೆಗಳ ದೋಷದಿಂದ ವಿದ್ಯುತ್‌ ಕೈಕೊಡುತ್ತಿದೆ ಎಂದು ಹೇಳಿದರು.
ಪ್ರಮುಖರಾದ ಶಿವರಾಮ ಗಾಂವಕರ್‌, ಮಾವಿನಮನೆ ಪಂಚಾಯ್ತಿ ವ್ಯಾಪ್ತಿಯ ಸಮಸ್ಯೆಗಳಿಗೆ ಸ್ಪಂದಿಸಬೇಕು. ವಿದ್ಯುತ್ಗಾಗಿ ಇಡೀ ಜಿಲ್ಲೆ ಒಪ್ಪಿಸಿಕೊಂಡರೂ ಇಲ್ಲಿನವರಿಗೆ ಸರಿಯಾಗಿ ವಿದ್ಯುತ್‌ ಸಿಗುತ್ತಿಲ್ಲ. ಲೈನ್‌ ಮೆನ್‌, ಗ್ಯಾಂಗ್‌ ಮನ್‌, ಅಧಿಕಾರಿಗಳಿಲ್ಲ ಎನ್ನುವ ಬದಲು ಜನರಿಗೆ ಕೆಲಸ ಮಾಡಿಕೊಡಬೇಕು ಎಂದರು. ಹೆಸ್ಕಾಂ ದಲ್ಲಿ ಬಿಲ್‌ ಸಂಗ್ರಹಿಸಲು ಜನರಿಲ್ಲ ಎನ್ನುವ ಕಾಲ ಬಂದಿದೆ. ಇದರಿಂದ ಗ್ರಾಹಕರು ನ್ಯಾಯಾಲಯದ ಮೆಟ್ಟಿಲೇರುತ್ತಿದ್ದಾರೆ. ಹೀಗಾಗದೇ ತ್ವರಿತವಾಗಿ ಬಿಲ್‌ ಸಂಗ್ರಹಿಸುವ ಕಾರ್ಯ ಮಾಡಬೇಕು ಎಂದರು.
‘ಮಾವಿನಮನೆ ಗ್ರಾಮ ಪಂಚಾಯ್ತಿ ವ್ಯಾಪ್ತಿಯಲ್ಲಿ 100 ಕಿಮೀ ಗಿಂತ ಹೆಚ್ಚು ಎಚ್‌.ಟಿ. ವಿದ್ಯುತ್‌ ಮಾರ್ಗ ಹೊಂದಿದ್ದು ನುರಿತ ಇಬ್ಬರು ಲೈನ್‌ ಮನ್ಗಳ ನೇಮಕ ಮಾಡಬೇಕು. ಮರಹಳ್ಳಿವರೆಗಿನ ಎಲ್ಲ ಎಚ್‌.ಟಿ ಹಾಗೂ ಎಲ್‌.ಟಿ. ವಿದ್ಯುತ್‌ ಮಾರ್ಗಕ್ಕೆ ರ್ಯಾಬಿಟ್‌ ತಂತಿಗಳನ್ನು ಇನ್ಸುಲೇಟರ್‌ ನೊಂದಿಗೆ ಅಳವಡಿಸಬೇಕು. ಮುಖ್ಯ ಮಾರ್ಗದ ಎಲ್ಲ ಉಪ ಮಾರ್ಗ ಜೋಡಿಸುವಲ್ಲಿ ಜಿಓಎಸ್‌ ಅಳವಡಿಸಬೇಕು. ಹೊಸ ಟಿಸಿ ಅಳವಡಿಸಬೇಕು. ಹಳೆಯ ಟಿಸಿಗಳ ನಿರ್ವಹಣೆ ಮಾಡಬೇಕು. ಮಲವಳ್ಳಿಯಲ್ಲಿ ವಿದ್ಯುತ್‌ ಕಂಬ, ಇನ್ಸುಲೇಟರ್ಗಳ ದಾಸ್ತಾನು ಕೇಂದ್ರ ಸ್ಥಾಪಿಸಬೇಕು. ವಿದ್ಯುತ್‌ ಸಂಪರ್ಕವಿಲ್ಲದ ಮನೆಗಳಿಗೆ ವಿದ್ಯುತ್‌ ಸಂಪರ್ಕ ನೀಡಬೇಕು ಎಂದು ಇದೇ ವೇಳೆ ಮನವಿ ನೀಡಿ ವಿನಂತಿಸಲಾಯಿತು. ಈ ವೇಳೆ ಹೆಸ್ಕಾಂ ಅಧಿಕಾರಿ ದೀಪಕ ಕಾಮತ್‌, ಕಿಸಾನ ಸಂಘದ ಪ್ರಸನ್ನ ಗಾಂವ್ಕರ ಹಾಗೂ ಇತರರು ಇದ್ದರು.

loading...