ವಿವೇಕದ ಜೀವನ ವಿಧಾನವೇ ಬದುಕಿನ ಯಶಸ್ಸಾಗಿದೆ: ಶಂಕರಾನಂದ ಶ್ರೀ

0
8
loading...

ಕನ್ನಡಮ್ಮ ಸುದ್ದಿ- ಹಾನಗಲ್ಲ : ವಿವೇಕದ ಜೀವನ ವಿಧಾನವೇ ಬದುಕಿನ ಯಶಸ್ಸಾಗಿದ್ದು, ಸಾಹಿತ್ಯ ಸಂಸ್ಕøತಿಯ ಓದು ನಮ್ಮ ಜ್ಞಾನ ಕ್ಷಿತಿಜವನ್ನು ವಿಸ್ತಾರಗೊಳಿಸುತ್ತದೆ ಎಂದು ಹೋತನಹಳ್ಳಿ ಸಿದ್ಧಾರೂಢಮಠದ ಶಂಕರಾನಂದ ಶ್ರೀಗಳು ನುಡಿದರು.

ಹಾನಗಲ್ಲಿನ ವೆಂಕಟೇಶ್ವರ ದೇವಸ್ಥಾನದಲ್ಲಿ ವಿವೇಕ ಜಾಗ್ರತ ಬಳಗ ಆಯೋಜಿಸಿದ ಓದುಗರ ಸಮಾವೇಶದ ಸಾನಿಧ್ಯವಹಿಸಿ ಮಾತನಾಡಿದ ಅವರು, ವೇದ ಉಪನಿಷತ್ತು, ಭಗವದ್ಗೀತೆಯಾದಿ ಧಾರ್ಮಿಕ ಕಾವ್ಯಗಳು ನಮ್ಮ ಮನಸ್ಸನ್ನು ವಿಕಾರದಿಂದ ಬಿಡಿಸಿ ಸಕಾರಾತ್ಮಕ ನಡೆಗೆ ಸಹಕಾರಿಯಾಗಿವೆ. ಒಳ್ಳೆಯದನ್ನು ಓದುವ, ಅರಿಯುವ, ಅಳವಡಿಸಿಕೊಳ್ಳುವ, ನಡೆ-ನುಡಿಗೆ ಸಾಕಾರವಾಗಿ ಸ್ವೀಕರಿಸುವ ಮನಸ್ಸು ಬೇಕಾಗುತ್ತದೆ. ಪ್ರಸ್ತುತ ಸಾಮಾಜಿಕ ವ್ಯವಸ್ಥೆಯಲ್ಲಿ ಮನುಷ್ಯ ಮೃಗವಾಗುತ್ತಿರುವ ಸಂದರ್ಭದಲ್ಲಿ ಧರ್ಮ ಮಾರ್ಗಮಾತ್ರ ಪರಿವರ್ತನೆ ತರಬಲ್ಲದು. ಇದಕ್ಕೆ ಧಾರ್ಮಿಕ ಮನೋಭಾವದ, ಸಮಚಿತ್ತದ ಸಂಘಟನೆಗಳು ಸೇವೆ ಸಲ್ಲಿಸುತ್ತಿರುವುದು ಪ್ರಶಂಶನೀಯ ಎಂದ ಅವರು, ದೇಶದ ನಾನಾ ಸಂತರು ಸತ್ಪುರುಷರ ವಾಣಿಗಳನ್ನು ವಿವೇಕ ಸಂಪದ ಸೇರಿದಂತೆ ನಾಡಿನ ಪತ್ರಕೆಗಳ ಮೂಲಕ ಅರಿತು ಅನುಸರಿಸುವಂತಾಗಬೇಕು ಎಂದರು.
ಮುಖ್ಯ ಅತಿಥಿಯಾಗಿದ್ದ ಭಾರತೀಯ ಜೀವ ವಿಮಾ ನಿಗಮದ ಅಧಿಕಾರಿ ಪ್ರಹ್ಲಾದ ಸಾಂಬ್ರಾಣಿ, ಮಕ್ಕಳಲ್ಲಿ ಮೊದಲು ಓದುವ ಹವ್ಯಾಸ ಬೆಳಸಬೇಕು. ಗಿಡವಾಗಿ ಬಗ್ಗದ್ದು ಮರವಾಗಿ ಬಗ್ಗೀತೆ ಎಂಬ ಹಿರಿಯರ ವಾಣಿಯನ್ನು ಪಾಲಕರಾದವರು ಸರಿಯಾಗಿ ಅರ್ಥ ಮಾಡಿಕೊಳ್ಳಬೇಕು. ಇಂದಿನ ಸಾಮಾಜಿಕ ವ್ಯವಸ್ಥೆಯಲ್ಲಿ ಮಕ್ಕಳನ್ನು ಸುಸಂಸ್ಕøತವಾಗಿ ಬೆಳೆಸುವುದೆ ಒಂದು ಸಾಹಸವಾಗಿದೆ ಎಂಬ ಅರಿವು ನಮಗಿರಲಿ ಎಂದರು.

ಅಧ್ಯಕ್ಷತೆ ವಹಿಸಿದ್ದ ವಿವೇಕ ಜಾಗ್ರತ ಬಳಗದ ಅಧ್ಯಕ್ಷ ರವಿ ಲಕ್ಷ್ಮೇಶ್ವರ, ನೀತಿ ಪಾಠಗಳಿಲ್ಲದ ಇಂದಿನ ಶಿಕ್ಷಣ ಯಾಂತ್ರಕ ಹಾಗೂ ಭಾವನಾತ್ಮಕ ಸಂಬಂಧಗಳಿಲ್ಲದ ಕೃತಕ ವ್ಯವಸ್ಥೆಯನ್ನು ಪೋಷಿಸುತ್ತಿರುವುದು ವಿಷಾದದ ಸಂಗತಿ. ಮನೆ ಕುಟುಂಬ ದೇವರು ಧರ್ಮದ ಕಲ್ಪನೆಗಳೆ ದೂರವಾಗಿ ಕೇವಲ ಹಣವನ್ನು ಬಾಚುವ ತಂತ್ರಗಳನ್ನು ಕಲಿಸುವ ಶಿಕ್ಷಣ ಈಗ ಕಾಣುತ್ತಿರುವುದು ಭವಿಷ್ಯದಲ್ಲಿ ಸಾಮಾಜಿಕ ದುರಂತಕ್ಕೆ ಸಾಕ್ಷಿಯಾಗುತ್ತದೆ ಎಂದರು.
ಡಿವೈನ್ ಪಾರ್ಕನ ಅಧಿಕಾರಿಗಳಾದ ಶಿವಶಂಕರಪ್ಪ ಬ್ಯಾಡಗಿ, ಹನುಮಂತಪ್ಪ ಬಂಗೇರಾ, ಯಲ್ಲಮ್ಮ ಕಬ್ಬೂರ, ಶ್ವೇತಾ ನಾಗರವಳ್ಳಿ, ವಿ.ವಿ.ಬಂಕಾಪೂರ ಮಾತನಾಡಿದರು. ರೂಪಾ ಸಾಂಬ್ರಾಣಿ ಸ್ವಾಗತಿಸಿದರು. ಲೀಲಾವತಿ ಗುಡಿ ಕಾರ್ಯಕ್ರಮ ನಿರೂಪಿಸಿದರು. ಪಿ.ಪುಷ್ಪಾ ವಂದಿಸಿದರು.

loading...