ವಿಶ್ವ ಜನಸಂಖ್ಯಾ ದಿನಾಚರಣೆ ಜಾಗೃತಿ ಜಾಥಾಕ್ಕೆ: ವೀಣಾ ಚಾಲನೆ

0
14
loading...

ಕನ್ನಡಮ್ಮ ಸುದ್ದಿ-ಬಾಗಲಕೋಟೆ: ವಿಶ್ವ ಜನಸಂಖ್ಯಾ ದಿನಾಚರಣೆ ಅಂಗವಾಗಿ ಹಮ್ಮಿಕೊಂಡ ಜನಜಾಗೃತಿ ಜಾಥಾಕ್ಕೆ ಜಿ.ಪಂ ಅಧ್ಯಕ್ಷೆ ವೀಣಾ ಕಾಶಪ್ಪನವರ ಹಸಿರು ನಿಶಾನೆ ತೋರುವ ಮೂಲಕ ಚಾಲನೆ ನೀಡಿದರು. ಜಿಲ್ಲಾಡಳಿತ ಆವರಣದಲ್ಲಿ ಬುಧವಾರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ವತಿಯಿಂದ ಹಮ್ಮಿಕೊಂಡ ಜಾಗೃತಿ ಜಾಥಾಕ್ಕೆ ಚಾಲನೆ ನೀಡಿ ಮಾತನಾಡಿದ ಅವರು ಮಿತಿಮೀರಿ ಬೆಳೆಯುತ್ತಿರುವ ಜನಸಂಖ್ಯೆಯಿಂದ ಮುಂದಿನ ಪೀಳಿಗೆಯ ಮೇಲೆ ಆಗು ಹೋಗುವ ಬಗ್ಗೆ ಜನರಲ್ಲಿ ಹೆಚ್ಚು ಹೆಚ್ಚು ಜಾಗೃತಿ ಮೂಡಿಸಬೇಕಿದೆ. ಗ್ರಾಮೀಣ ಭಾಗದಲ್ಲಿ ಹೆಚ್ಚಾಗಿ ಜಾಗೃತಿ ಮೂಡಿಸುವ ಮೂಲಕ ಜನರಲ್ಲಿರುವ ಮೂಡನಂಬಿಕೆಗಳನ್ನು ಹೋಗಲಾಡಿಸಬೇಕು ಎಂದರು.
ಹತ್ತು ಮಕ್ಕಳನ್ನು ಹೆರುವದಕ್ಕಿಂತ ಉತ್ತಮವಾದ ಒಂದು ಮಗುವನ್ನು ಹೆರುವುದು ಒಳ್ಳೆಯದೆಂದರು. ಹಿಂದಿನವರು ಮಾಡಿದ ತಪ್ಪನ್ನು ನೀವು ಮಾಡದೇಡಿ. ಇತಿಮಿತಿಯಲ್ಲಿ ಮಕ್ಕಳಾದರೆ ಒಳ್ಳೆಯ ಶಿಕ್ಷಣ, ಉದ್ಯೋಗ ಮತ್ತು ಆರೋಗ್ಯವಂತರನ್ನಾಗಿ ಮಾಡಲು ಸಾದ್ಯವಾಗುತ್ತದೆ. ಹೆಣ್ಣು ಮಗು ಹುಟ್ಟಿದರೆ ಬರುವ ಅಳಿಯನನ್ನು ಮಗನೆಂದು ಹಾಗೂ ಗಂಡು ಮಗು ಹುಟ್ಟಿದರೆ ಬರುವ ಸೊಸೆಯನ್ನು ಮಗಳೆಂದು ತಿಳಿದುಕೊಳ್ಳಬೇಕೆಂದರು.
ಜಾಗೃತಿ ಜಾಥಾ ಜಿಲ್ಲಾಡಳಿತ ಭವನದಿಂದ ಪ್ರಾರಂಭವಾಗಿ ಹೊಸ ಬಸ್‌ ನಿಲ್ದಾಣ, ಪೊಲೀಸ್‌ ಪ್ಯಾಲೇಸ್‌, ಎಲ್‌.ಐ.ಸಿ ವೃತ್ತ, ಎಸ್‌ಬಿಐ ಬ್ಯಾಂಕ್‌ ಮೂಲಕ ಜಿಲ್ಲಾ ಆಸ್ಪತ್ರೆಗೆ ಮುಕ್ತಾಯಗೊಂಡಿತು. ಜಾಥಾದಲ್ಲಿ ಬಿವಿವಿ ಸಂಘದ ಸಜ್ಜಲಶ್ರೀ ನರ್ಸಿಂಗ್‌ ಕಾಲೇಜು, ಜಲ್ಲಾ ಆಸ್ಪತ್ರೆಯ ಪ್ಯಾರಾಮೆಡಿಕಲ್‌, ಎ.ಎಲ್‌.ಎಂ ತರಬೇತಿ ಕೇಂದ್ರದ ವಿದ್ಯಾರ್ಥಿಗಳು ಹಾಗೂ ಆದರ್ಶ ವಿದ್ಯಾಲಯದ ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು. ವಿದ್ಯಾರ್ಥಿಗಳು ಜಾಥಾದೂದ್ದಕ್ಕು ಘೋಷಣೆಗಳ ಫಲಕಗಳನ್ನು ಪ್ರದರ್ಶಿಸುವ ಮೂಲಕ ಘೋಷಣೆಗಳನ್ನು ಕೂಗಿದರು.
ಜಾಥಾದಲ್ಲಿ ತಾಲೂಕ ಪಂಚಾಯತ ಅಧ್ಯಕ್ಷ ಚನ್ನನಗೌಡರ ಪರನಗೌಡರ, ಜಿಲ್ಲಾಧಿಕಾರಿ ಕೆ.ಜಿ.ಶಾಂತಾರಾಮ, ಜಿ.ಪಂ ಸಿಇಓ ವಿಕಾಸ ಸುರಳಕರ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ಎ.ಎನ್‌.ದೇಸಾಯಿ, ಆರೋಗ್ಯ ಇಲಾಖೆಯ ಡಾ.ಡಿ.ಬಿ.ಪಟ್ಟಣಶೆಟ್ಟಿ, ಡಾ.ಜಿ.ಬಿ.ಹುಬ್ಬಳ್ಳಿ, ಡಾ.ಪರಶುರಾಮ ಹಿಟ್ನಳ್ಳಿ, ಡಾ.ಶಿವಪ್ಪ, ಪವಾಡೆಪ್ಪ ಸೇರಿದಂತೆ ಇತರರು ಪಾಲ್ಗೊಂಡಿದ್ದರು.

loading...