ವೀರಶೈವ-ಲಿಂಗಾಯತ ಎರಡೂ ಒಂದೇ: ರಂಭಾಪುರಿ ಶ್ರೀಗಳು

0
10
loading...

ಕನ್ನಡಮ್ಮ ಸುದ್ದಿ-ಹಾವೇರಿ: ಬದುಕು ಭಗವಂಗನ ಅಮೂಲ್ಯ ಕೊಡುಗೆ. ಅರಿತು ನುರಿತು ಬಾಳಿದರೆ ಬಾಳು ಬಂಗಾರ. ಚಾರಿತ್ರ್ಯತೆಯ ಸಾತ್ವಿಕ ಜೀವನದಿಂದ ಆಯುಷ್ಯ ಸಂವರ್ಧನೆಗೊಳ್ಳಲು ಸಾಧ್ಯವಾಗುವುದೆಂದು ಬಾಳೆಹೊನ್ನೂರು ರಂಭಾಪುರಿ ಜಗದ್ಗುರು ಡಾ. ವೀರಸೋಮೇಶ್ವರ ಶಿವಾಚಾರ್ಯ ಭಗವತ್ಪಾದರು ಅಭಿಪ್ರಾಯಪಟ್ಟರು.
ನಗರದ ಸಿಂದಗಿಮಠದಲ್ಲಿ ಜರುಗಿದ ಎಂ.ಬಿ.ಹಿರೇಮಠದ ಜನ್ಮ ಶತಮಾನೋತ್ಸವ ಧರ್ಮ ಸಮಾರಂಭದ ಸಾನ್ನಿಧ್ಯ ವಹಿಸಿ ಅಶೀರ್ವಚನ ನೀಡಿ ಅವರು ಮಾತನಾಡಿದರು.
ಮನುಷ್ಯ ಜೀವನದಲ್ಲಿ ನೀತಿ ನಿಯಮ ಪಾಲಿಸಬೇಕು. ಸಾತ್ವಿಕ ಬದುಕು ನೆಮ್ಮದಿ ಮತ್ತು ಶಾಂತಿಗೆ ಮೂಲ. ಉತ್ತಮವಾದ ಸಂಸ್ಕಾರ ಮತ್ತು ಧರ್ಮ ಪರಿಪಾಲನೆಯಿಂದ ಬದುಕಿನಲ್ಲಿ ಉತ್ಕರ್ಷತೆ ಹೊಂದಲು ಸಾಧ್ಯ. ಮಾನವ ಜೀವನದಲ್ಲಿ ಮೂಲ ಸಿದ್ಧಾಂತ, ತತ್ತ್ವ, ಪರಂಪರೆಯನ್ನು ಮೀರಿ ನಡೆಯಬಾರದು. ಏನಾದರೂ ಧರ್ಮ ಮೀರಿ ನಡೆದರೆ ಬದುಕು ಬೆಂಗಾಡು. ಸನಾತನ ವೀರಶೈವ ಧರ್ಮ ಜಗದ್ಗುರು ರೇಣುಕಾದಿ ಪಂಚಾಚಾರ್ಯರಿಂದ ಸಂಸ್ಥಾಪನೆಗೊಂಡು ಬದುಕಿನಲ್ಲಿ ಬೆಂದವರಿಗೆ ಆದರ್ಶ ಮಾರ್ಗದರ್ಶನ ನೀಡಿದೆ. ಅದೇ ದಾರಿಯಲ್ಲಿ ಹನ್ನೆರಡನೇ ಶತಮಾನದ ಶರಣರು ಮುನ್ನಡೆದು ಧರ್ಮವನ್ನು ಪ್ರಚಾರ ಪಡಿಸಿದ್ದು ಮರೆಯಲಾಗದು ಎಂದರು.
ಧರ್ಮ ನಿಂತ ನೀರಲ್ಲ. ಅದು ಸದಾ ಪ್ರವಹಿಸುತ್ತಿರುವ ಪವಿತ್ರ ಝರಿ. ಧರ್ಮದ ವಿರುದ್ಧ ಯಾರು ನಡೆಯುವರೋ ಅಂಥವರಿಗೆ ಅಪಾಯ ತಪ್ಪಿದ್ದಲ್ಲ. ವೀರಶೈವ-ಲಿಂಗಾಯತ ಎರಡೂ ಒಂದೇ ಆಗಿದೆ ಹೊರತು ಬೇರೆ ಬೇರೆಯಲ್ಲ. ಯಾರೇ ಧರ್ಮವನ್ನು ಒಡೆಯಲು ಯತ್ನಸಿದರೂ, ಅದು ಅಸಾಧ್ಯದ ಮಾತು ಎಂದು ಶ್ರೀಗಳು ಹೇಳಿದರು.
ಸರಳ ಸಜ್ಜನಿಕೆಗೆ ಹೆಸರಾದ ನಿವೃತ್ತ ಮುಖ್ಯೋಪಾಧ್ಯಾಯರಾದ ಎಂ. ಬಿ. ಹಿರೇಮಠರ ಅವರನ್ನು ಪೀಠದಿಂದ ಶಾಲು ಹೊದಿಸಿ, ಸ್ಮರಣಿಕೆ ನೀಡಿ ಆಶೀರ್ವದಿಸಿದರು.
ಶತಾಯುಷಿಗಳು, ಧರ್ಮಾಭಿಮಾನಿಗಳು ಆದ ನಿವೃತ್ತ ಶಿಕ್ಷಕ ಎಮ್. ಬಿ. ಹಿರೇಮಠರಿಗೆ ಪ್ರಸ್ತುತ ವರ್ಷದಲ್ಲಿ ಗದಗ ಜಿಲ್ಲೆ ಲಕ್ಷ್ಮೇಶ್ವರ ನಗರದಲ್ಲಿ ಜರುಗುವ ಪ್ರಸ್ತುತ ರಂಭಾಪುರಿ ಡಾ. ವೀರಸೋಮೇಶ್ವರ ಜಗದ್ಗುರುಗಳವರ 27 ನೇ ಶರನ್ನವರಾತ್ರಿ ದಸರಾ ದರ್ಬಾರ್ ಮಹೋತ್ಸವದ ಸಂದರ್ಭದಲ್ಲಿ ವೀರಶೈವ ಸಿರಿ ಪ್ರಶಸ್ತಿ ಪ್ರದಾನ ಮಾಡಲಾಗುವುದೆಂದು ರಂಭಾಪುರಿ ಜಗದ್ಗುರುಗಳು ಘೋಷಿಸಿದರು.
ಹಾವೇರಿ-ಕರ್ಜಗಿಯ ಶಿವಯೋಗಿ ಶಿವಾಚಾರ್ಯರು, ಬಂಕಾಪುರ ರೇವಣಸಿದ್ಧೇಶ್ವರ ಶಿವಾಚಾರ್ಯರು, ಬಣ್ಣದಮಠದ ಅಭಿನವ ರುದ್ರ ಚನ್ನಮಲ್ಲಿಕಾರ್ಜುನ ಶಿವಾಚಾರ್ಯರು, ನೆಗಳೂರು ಗುರುಶಾಂತೇಶ್ವರ ಶಿವಾಚಾರ್ಯರು, ಚಿಟಗುಪ್ಪದ ಗುರುಲಿಂಗ ಶಿವಾಚಾರ್ಯರು ಪಾಲ್ಗೊಂಡಿದ್ದರು.
ಬಿ.ಜೆ.ಪಿ. ಜಿಲ್ಲಾಧ್ಯಕ್ಷ ಶಿವರಾಜ ಸಜ್ಜನರ, ಮಾಜಿ ವಿ.ಪ. ಸದಸ್ಯ ಸೋಮಣ್ಣ ಬೇವಿನಮರದ, ಬಸವರಾಜ ಶಾಸ್ತ್ರಿ ಕರೂರು, ಎಂ.ಎಂ.ಜೆ. ಸ್ವರೂಪಾನಂದ, ಎಸ್.ಬಿ. ಹಿರೇಮಠ, ಶಿವಬಸಯ್ಯ ಆರಾಧ್ಯಮಠ, ಡಾ. ರಾಜು ವೈದ್ಯ, ಸಿಂದಗಿ ವೈದಿಕ ಪಾಠಶಾಲೆಯ ವಟುಗಳು ಪಾಲ್ಗೊಂಡಿದ್ದರು. ಜಗದ್ಗುರು ರೇಣುಕಾಚಾರ್ಯ ಗುರುಕುಲ ಸಾಧಕರು ವೇದಘೋಷ ಮಾಡಿದರು. ಬಸವರಾಜ ಹಿರೇಮಠ ಸ್ವಾಗತಿಸಿದರು, ಪ್ರೊ. ಸಿ. ಸಿ. ಪ್ರಭುಗೌಡ್ರ ಪ್ರಾಸ್ತಾವಿಕ ಮಾತನಾಡಿದರು, ಪ್ರೊ. ಗುರುಪಾದಯ್ಯ ವೀ. ಸಾಲಿಮಠ ನಿರೂಪಿಸಿದರು. ಪ್ರೊ. ಪುಷ್ಪಾ ಶೆಲವಡಿಮಠ ವಂದಿಸಿದರು.

loading...