ವೀರಶೈವ-ಲಿಂಗಾಯತ ಸಂಘಟನಾ ಸಮಾವೇಶ ನಡೆಸಲಿ: ಶಾಸಕ ಶೆಟ್ಟರ್

0
11
loading...

ಕನ್ನಡಮ್ಮ ಸುದ್ದಿ-ಹುಬ್ಬಳ್ಳಿ: ರಾಜ್ಯ ಬಣಜಿಗ ಸಮಾಜದ ಕ್ಷೇಮಾಭಿವೃದ್ಧಿ ಸಂಘದ ಕಾರ್ಯಕ್ರಮದಲ್ಲಿ ಲಿಂಗಾಯತ ಉಪ ಪಂಗಡದವರು ತಮ್ಮ ತಮ್ಮ ಸಂಘಟನೆ ಮಾಡಿಕೊಳ್ಳಬೇಕು. ಬಳಿಕ ವೀರಶೈವ ಮತ್ತು ಲಿಂಗಾಯತರೆಲ್ಲ ಒಂದು ಎನ್ನುವ ಸಂಘಟನಾ ಸಮಾವೇಶ ಆಗಬೇಕು ಎಂದು ಮಾಜಿ ಮುಖ್ಯಮಂತ್ರಿ ಜಗದೀಶ ಶೆಟ್ಟರ್ ಹೇಳಿದರು.
ರಾಜ್ಯ ಬಣಜಿಗ ಸಮಾಜದ ಕ್ಷೇಮಾಭಿವೃದ್ಧಿ ಸಂಘದಿಂದ ಸತ್ತೂರಿನ ಡಾ. ವೀರೇಂದ್ರ ಹೆಗ್ಗಡೆ ಕಲಾಕ್ಷೇತ್ರದಲ್ಲಿ ಆಯೋಜಿಸಿದ್ದ ಬಣಜಿಗರ ರಾಜ್ಯ ಮಟ್ಟದ ಸಮಾವೇಶ ಹಾಗೂ ವಿಶ್ವಸ್ಥ ಮಂಡಳಿ ಸದಸ್ಯರ ಸನ್ಮಾನ ಸಮಾರಂಭ ಉದ್ಘಾಟಿಸಿ ಅವರು ಮಾತನಾಡಿದರು. ಗುಜರಾತ್, ರಾಜಸ್ಥಾನ, ಉಡುಪಿ, ಮಂಗಳೂರಿನ ಜನ ದೇಶದ ಎಲ್ಲೇ ಹೋದರೂ ತಮ್ಮ ವೃತ್ತಿಯಿಂದ ಗುರುತಿಸಿಕೊಳ್ಳುತ್ತಾರೆ. ಹಾಗೆಯೇ ಬಣಜಿಗ ಸಮಾಜದವರು ತಮ್ಮ ವ್ಯಾಪಾರ, ಕಸುಬುಗಳಲ್ಲಿ ಅಭಿವೃದ್ಧಿ ಹೊಂದುವುದರೊಂದಿಗೆ ಸಮಾಜದ ದುರ್ಬಲರಿಗೆ, ಯುವಕರಿಗೆ, ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಪ್ರೋತ್ಸಾಹ ನೀಡುವ ಕಾರ್ಯಕ್ರಮ ಹಮ್ಮಿಕೊಳ್ಳಬೇಕು ಎಂದರು.
ಅತಿಥಿಯಾಗಿ ಪಾಲ್ಗೊಂಡಿದ್ದ ನಿವೃತ್ತ ಪೊಲೀಸ್ ಮಹಾನಿರ್ದೇಶಕ ಶಂಕರ ಬಿದರಿ ಮಾತನಾಡಿ, ಬಣಜಿಗ ಸಮಾಜ ಬಸವ ಸಂಕುಲದ ಅವಿಭಾಜ್ಯ ಅಂಗ. ಸಮಾವೇಶ ಆಯೋಜಿಸಿರುವುದು ಬಣಜಿಗ ಕುಟುಂಬದವರೆಲ್ಲ ಒಂದೆಡೆ ಸೇರಿ ರ್ಚಚಿಸಿ ತಮ್ಮ ತಪ್ಪುಗಳು ಕಂಡು ಬಂದಲ್ಲಿ ತಿದ್ದಿಕೊಳ್ಳಲು ಹಾಗೂ ಆತ್ಮ ವಿಮರ್ಶೆ ಮಾಡಿಕೊಳ್ಳಲಿಕ್ಕೆ ವಿನಃ ಯಾರ ವಿರುದ್ಧ ಅಭಿಪ್ರಾಯ ಹೊಂದಲು ಅಲ್ಲ. ಆನ್‍ಲೈನ್ ವಹಿವಾಟಿನಿಂದ ಸಮಾಜದ ವ್ಯಾಪಾರಸ್ಥರಿಗೆ ಸ್ವಲ್ಪ ಅಡೆತಡೆ ಆಗುತ್ತಿದೆ. ಬದಲಾದ ಸನ್ನಿವೇಶಕ್ಕೆ ಹೊಂದಿಕೊಂಡು ವೃತ್ತಿಯಲ್ಲಿ ಆಧುನಿಕ ತಂತ್ರಜ್ಞಾನ ಅಳವಡಿಸಿಕೊಳ್ಳಬೇಕು. ವೈಯಕ್ತಿಕ ವೃತ್ತಿಯನ್ನಷ್ಟೇ ನೆಚ್ಚಿಕೋಳ್ಳದೆ ಸಣ್ಣ ಕಂಪನಿ, ಸಂಸ್ಥೆಗಳೊಂದಿಗೆ ಮುನ್ನಡೆಯಬೇಕು. ಕ್ಷೇಮಾಭಿವೃದ್ಧಿ ಸಂಘಗಳಿಂದ ಪ್ರತಿ ಪಟ್ಟಣ, ತಾಲೂಕು, ಜಿಲ್ಲಾ ಕೇಂದ್ರಗಳಲ್ಲಿ ಸಮಾಜದ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ಕಾರ್ಯಕ್ರಮ ಸಂಘಟಿಸಿ ಬೆಂಬಲಿಸಬೇಕು ಎಂದರು. ಗವಿಸಿದ್ದಪ್ಪ ಕೊಪ್ಪಳ ಪ್ರಾಸ್ತಾವಿಕವಾಗಿ ಮಾತನಾಡಿ, ಸಂಘದ ಕಾರ್ಯಚಟುವಟಿಕೆಗಳನ್ನು ವಿವರಿಸಿದರು. ಶಾಸಕ ಪರಣ್ಣ ಮುನವಳ್ಳಿ, ವಿಧಾನ ಪರಿಷತ್ ಮಾಜಿ ಸಭಾಪತಿ ವೀರಣ್ಣ ಮತ್ತಿಕಟ್ಟಿ ಮಾತನಾಡಿದರು. ಸಂಘದ ರಾಜ್ಯಾಧ್ಯಕ್ಷ ಡಾ. ಶಿವಬಸಪ್ಪ ಹೆಸರೂರ ಅಧ್ಯಕ್ಷತೆ ವಹಿಸಿದ್ದರು. ಸಮಾರಂಭದಲ್ಲಿ ವಿಶ್ವಸ್ಥ ಮಂಡಳಿ ಸದಸ್ಯರನ್ನು ಸನ್ಮಾನಿಸಲಾಯಿತು. ಬಣಜಿಗ ಸಮಾಜದ ಮೊದಲ ಮಹಿಳಾ ವಚನಗಾರ್ತಿ ಅಕ್ಕಮಹಾದೇವಿ ಅವರ ಜಯಂತಿಯನ್ನು ಮುಂಬರುವ ಮಾರ್ಚ್‍ನಲ್ಲಿ ಉಡುತಡಿಯಲ್ಲಿ ಅದ್ದೂರಿಯಿಂದ ಆಚರಿಸಲು ಸಮಾವೇಶ ನಿರ್ಣಯಿಸಿತು. ಸಮಾಜದ ಮುಖಂಡರಾದ ಜಿ.ಪಂ. ಅಧ್ಯಕ್ಷೆ ಚೈತ್ರಾ ಶಿರೂರ, ವಿಧಾನ ಪರಿಷತ್ ಸದಸ್ಯ ಪ್ರೊ. ಎಸ್.ವಿ. ಸಂಕನೂರ, ಕೆಎಲ್‍ಇ ಸಂಸ್ಥೆ ನಿರ್ದೇಶಕ ಶಂಕರಣ್ಣ ಮುನವಳ್ಳಿ, ಎಂ.ವಿ. ಗೋವಿಂದಶೆಟ್ಟಿ, ಸಿದ್ದಣ್ಣ ಸಕ್ರಿ, ಸರಳಾ ಹೇರೆಕರ, ಅಂದಪ್ಪ ಜವಳಿ, ಶಿವಕುಮಾರ ದೇವರಮನಿ, ಶರಣು ಸಬರದ, ಅಥಣಿ ಎಸ್. ವೀರಣ್ಣ, ಅಂದಾನೆಪ್ಪ ಪಟ್ಟಣಶೆಟ್ಟಿ, ಮತ್ತಿತರರಿದ್ದರು.

loading...