ಶವಸಂಸ್ಕಾರಕ್ಕೆ ಅಡ್ಡಿ: ವಾಗ್ವಾದ

0
15
loading...

ಕನ್ನಡಮ್ಮ ಸುದ್ದಿ-ಹಿರೇಕೆರೂರ: ಪರಿಶಿಷ್ಟ ಜಾತಿಯ ಶವವೊಂದನ್ನು ಸುಡುವ ವಿಚಾರವಾಗಿ ಸರ್ವಣೀಯರು ಮತ್ತು ಹಿಂದುಳಿದ ಜನಾಂಗದ ಮಧ್ಯೆ ಪರಸ್ಪರ ವಾಗ್ವಾದ ನಡೆದ ಘಟನೆ ತಾಲೂಕಿನ ದಿವಗೀಹಳ್ಳಿ ಗ್ರಾಮದಲ್ಲಿ ಶನಿವಾರ ಜರುಗಿದೆ.
ಕೆಳಜಾತಿಯ ಶವವನ್ನು ಸುಡುವ ಸಂದರ್ಭದಲ್ಲಿ ಸತತ 6 ಗಂಟೆಗಳ ಕಾಲ ವಾಗ್ವಾದ ನಡೆದಿದ್ದು, ಬಳಿಕ ತಹಸೀಲ್ದಾರ ಎ.ವಿ.ಶಿಗ್ಗಾಂವಿಯವರ ನೇತೃತ್ವದಲ್ಲಿ ಗ್ರಾಮದ ಹೊರಗಿನ ಸರ್ಕಾರಿ ಜಮೀನಿನೊಂದರಲ್ಲಿ ಶವವನ್ನು ಸುಡಲಾಯಿತು.
ಘಟನೆಯ ಹಿನ್ನೆಲೆ: ಗ್ರಾಮದ ಮಾದರ ವರ್ಗದ ಹಿರಿಯ ವೃದ್ಧ ನಿಂಗಪ್ಪ ದೊಡ್ಮನಿ (80) ಶುಕ್ರವಾರ ರಾತ್ರಿ 9 ಗಂಟೆಗೆ ನಿಧನರಾಗಿದ್ದರು. ಶನಿವಾರ ಬೆಳಗ್ಗೆ 10 ಗಂಟೆಗೆ ಶವವನ್ನು ಸುಡಲು ಮೊದಲು ಗ್ರಾಮದ ಎಲ್ಲ ಧರ್ಮದವರು ಸರ್ವಣೀಯರ ಖಾಸಗಿ ಜಮೀನೊಂದರಲ್ಲಿ ಶವ ಸಂಸ್ಕಾರ ನೆರವೇರಿಸುತ್ತಾ ಬಂದಿದ್ದರು. ಈ ಸ್ಥಳದಲ್ಲಿ ಶವವನ್ನು ಸುಡಲು ಮುಂದಾದಾಗ ಇದಕ್ಕೆ ನಿರಾಕರಿಸಿದ ಜಮೀನಿನ ಮಾಲಕ ಶಿವನಗೌಡ ಮಾವಿನತೋಪ ನಮಗೆ ಜಮೀನು ಕಡಿಮೆ ಇದೆ ನಾವು ಇದನ್ನು ಶವಸಂಸ್ಕಾರಕ್ಕೆ ಬಿಟ್ಟುಕೊಡುವುದಿಲ್ಲ ಎಂದಿದ್ದಾರೆ. ನೀವು ಬೇರೆ ಸ್ಥಳದಲ್ಲಿ ಶವಸಂಸ್ಕಾರ ಮಾಡಿ ಎಂದು ಹೇಳಿದಾಗ ಪರಸ್ಪರ ಮಾತಿನ ಚಕಮಿಕಿ ನಡೆದು, ಕೊನೆಗೆ ಶವವನ್ನು ಸರ್ಕಾರದ ಕೆರೆಯ ದಡದಲ್ಲಿ ಸುಡಲು ಮುಂದಾಗಿದ್ದಾರೆ. ಇದಕ್ಕೆ ಸರ್ವಣೀಯರು ತೀವ್ರ ಪ್ರತಿರೋಧ ಒಡ್ಡಿದ್ದು, ಹತ್ತಿರದಲ್ಲಿ ಶಾಲೆಯಿದೆ. ನೀವು ಗ್ರಾಮ ಪಂಚಾಯಿತಿಯವರು ಸೂಚಿಸಿದ ಸರ್ಕಾರಿ ಜಮೀನಿನಲ್ಲಿ ಶವಸಂಸ್ಕಾರ ಮಾಡಿರಿ ಎಂದು ಹೇಳಿದ್ದರಿಂದ, ಶವವನ್ನು ಇಲ್ಲಿಯೆ ಸುಡುವುದಾಗಿ ಕೆಳವರ್ಗದವರು ಪಟ್ಟುಹಿಡಿದು, ಬೆಳಗ್ಗೆ 10 ಗಂಟೆಯಿಂದ ಮದ್ಯಾಹ್ನ 3.30 ಗಂಟೆಯವರೆಗೆ ಅಲ್ಲಿಯೇ ಶವವನ್ನು ಇಟ್ಟು, ಈಗ ಮೀಸಲಿರಿಸಿದ ಸ್ಥಳ ಗ್ರಾಮದಿಂದ ತುಂಬಾ ದೂರವಾಗುತ್ತದೆ ನಾವು ಇಲ್ಲಿಯೆ ಶವಸಂಸ್ಕಾರ ಮಾಡುವುದಾಗಿ ಹಠಹಿಡಿದಾಗ, ಸ್ಥಳಕ್ಕಾಗಮಿಸಿದ ತಹಸೀಲ್ದಾರ ಎ.ವಿ.ಶಿಗ್ಗಾಂವಿ, ಸಿಪಿಐ ಎಚ್‌.ಆರ್‌.ಸಂಗನಾಥ ಕೆಳವರ್ಗದವರು ಮತ್ತು ಮೇಲ್ಜಾತಿಯವರ ನಡುವೆ ಸಂಧಾನಕ್ಕೆ ಯತ್ನಿಸಿದರಾದರೂ, ಇದಕ್ಕೆ ಒಪ್ಪದೆ ಇದ್ದಾಗ ಕೊನೆಗೆ ಗ್ರಾಮದ ಹೊರಗಿನ ಸರ್ವೇ ನಂ 199 ಗೊಚ್ಚಿನ ಗುಂಡಿಯ ಸರ್ಕಾರಿ ಜಮೀನಿನಲ್ಲಿ ಎಲ್ಲ ವರ್ಗದವರು ಶವಸಂಸ್ಕಾರ ನಡೆಸುವಂತೆ ಸೂಚಿಸಿದ್ದರಿಂದ ಇದಕ್ಕೆ ಒಪ್ಪಿಗೆ ಸೂಚಿಸಿ ನಂತರ ಶವಸಂಸ್ಕಾರ ನಡೆಸಲಾಯಿತು.

loading...