ಸಂಘಸಂಸ್ಥೆ ಬೆಳೆಯಲು ಮೂಲ ತತ್ವಗಳ ಪರಿಪಾಲನೆ ಅತ್ಯಗತ್ಯ: ಶ್ರೀರಾಮ

0
10
loading...

ಕನ್ನಡಮ್ಮ ಸುದ್ದಿ-ಶಿರಸಿ: ಸಂಸ್ಥೆಗಳು ಬೆಳೆಯುವಲ್ಲಿ ಸ್ಥಳೀಯ ಸ್ಪಂದನೆ ಹಾಗೂ ಆ ಸಂಸ್ಥೆಯ ನೈತಿಕತೆ ಮುಖ್ಯವಾಗುತ್ತದೆ ಎಂದು ಪ್ರೊ.ಎ.ವೈದ್ಯನಾಥನ್‌ ಸಮಿತಿ ಸದಸ್ಯ ಎಂ.ಎಸ್‌.ಶ್ರೀರಾಮ ಅಭಿಪ್ರಾಯಪಟ್ಟರು.
ತಾಲೂಕಿನ ಹುಳಗೋಳ ಸೇವಾ ಸಹಕಾರಿ ಸಂಘದ ಶತಮಾನೋತ್ಸವ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಅವರು ನೂರು ಮೆಟ್ಟಿಲೇರಿ ಸ್ಮರಣ ಸಂಚಿಕೆ ಬಿಡುಗಡೆ ಮಾಡಿ ಅವರು ಮಾತನಾಡಿದರು.
ಸಂಘ ಸಂಸ್ಥೆಗಳಿಗೆ ಎಂದಿಗೂ ಸಾವಿಲ್ಲ. ಆದರೆ ಸಂಘದ ಮೂಲ ಉದ್ದೇಶ ಹಾಗೂ ನೈತಿಕತೆಯಿಂದ ಸಂಘ ದೂರವಾದರೆ ಹೆಚ್ಚು ಕಾಲ ಬದುಕುವುದಿಲ್ಲ ಎಂದರು. ಯಾವುದೇ ಸಂಘಸಂಸ್ಥೆಗಳು ಬೆಳೆಯಲು ಅದನ್ನು ಮುನ್ನಡೆಸುವ ನಾಯಕತ್ವ, ಕಾಲಕಾಲಕ್ಕೆ ತಕ್ಕ ಬದಲಾವಣೆ, ಮೂಲ ತತ್ವಗಳ ಪರಿಪಾಲನೆ ಅತ್ಯಗತ್ಯ ಎಂದ ಅವರು, ಹಲವು ಸಮಸ್ಯೆಗಳ ನಡುವೆಯೂ ನೂರು ವರ್ಷ ಪೂರೈಸುತ್ತಿರುವ ಹುಳಗೋಳ ಸಹಕಾರಿ ಸಂಘದ ಆದರ್ಶ ನಡೆ ಶ್ಲಾಘನೀಯ ಎಂದು ಹೇಳಿದರು.
ಸಂಘದ ಸದಸ್ಯರ ಮೊಬೈಲ್‌ ನಂಬರ್‌ ಮಾರ್ಗದರ್ಶಿ ಬಿಡುಗಡೆ ಮಾಡಿದ ಕ್ಯಾಂಪ್ಕೊ ಅಧ್ಯಕ್ಷ ಎಸ್‌.ಆರ್‌.ಸತೀಶ್ಚಂದ್ರ, ದೇಶ ಗುಲಾಮಿ ತನದಲ್ಲಿದ್ದಾಗ ವಿಶೇಷ ದೃಷ್ಟಿಕೋನದೊಂದಿಗೆ ಹುಟ್ಟಿದ್ದು ಹುಳಗೋಳ ಸಹಕಾರಿ ಸಂಘವಾಗಿದೆ. ಸದಸ್ಯರಲ್ಲಿ ಜ್ಞಾನ ಕ್ರಾಂತಿ ಮಾಡಿಸಿ ಅವರ ಏಳ್ಗೆಯ ಜೊತೆಗೆ ಸಂಘವೂ ಬೆಳೆದಿದ್ದು ವಿಶೇಷವಾಗಿದೆ. ಸಹಕಾರಿ ಕ್ಷೇತ್ರದ ಇಂತಹ ವಿಶೇಷ ಅಂಶಗಳನ್ನು ಯೋಜನೆ ರೂಪಿಸುವವರು ಗಮನಿಸಬೇಕು ಎಂದರು. ಎಲ್ಲ ಗ್ರಾಮೀಣ ಭಾಗದ ಪ್ರಾಥಮಿಕ ಪತ್ತಿನ ಸಹಕಾರಿ ಸಂಘಗಳಿಗೆ
2 ಎಕರೆ ಜಾಗ ಇಡಬೇಕು ಎಂದು ಸರ್ಕಾರದಲ್ಲಿ ಪ್ರಸ್ತಾವ ನೀಡಲಾಗಿದ್ದು, ಈಗಿನ ಸರ್ಕಾರ ಯಾವ ನಿರ್ಧಾರ ಕೈಗೊಳ್ಳುತ್ತದೆ ನೋಡಬೇಕೆಂದರು.
ಕಾರ್ಯಕ್ರಮವನ್ನು ಸಹಕಾರ ಭಾರತಿ ರಾಷ್ಟ್ರೀಯ ಉಪಾಧ್ಯಕ್ಷ ಕೊಂಕೋಡಿ ಪದ್ಮನಾಭ ಉದ್ಘಾಟಿಸಿದರು. ಸಂಘದ ಅಧ್ಯಕ್ಷ ಎಂ.ಆರ್‌.ಹೆಗಡೆ ಕಾರ್ಯಕ್ರಮದ ಅಧ್ಯಕ್ಷತೆ ವಹಿಸದ್ದರು. ಸಹಕಾರಿ ಧುರೀಣ ಎನ್‌.ಪಿ.ಗಾಂವಕರ, ಎಂ.ಇ.ಎಸ್‌.ಕಾರ್ಯದರ್ಶಿ ಎಸ್‌.ಪಿ.ಶೆಟ್ಟಿ, ಸಹಕಾರಿ ಸಂಘಗಳ ಉಪನಿಬಂಧಕ ಜಿ.ಎಸ್‌.ಜಯಪ್ರಕಾಶ, ಸಂಘದ ಉಪಾಧ್ಯಕ್ಷ ಆರ್‌.ಎಂ.ಹೆಗಡೆ, ಮುಖ್ಯಕಾರ್ಯನಿರ್ವಾಹಕ ಜಿ.ಎಂ.ಹೆಗಡೆ ಮಾತ್ನಳ್ಳಿ ಇದ್ದರು. ಸಂಘದ ನಿರ್ದೇಶಕ ಜಿ.ಎಂ.ಹೆಗಡೆ ಹುಳಗೋಳ ಸ್ವಾಗತಿಸಿ, ಪ್ರಾಸ್ತಾವಿಕ ಮಾತನಾಡಿದರು. ಅನಂತ ಭಟ್ಟ ನಿರೂಪಿಸಿದರು.

loading...