ಸಚಿವ ಹೆಗಡೆ ಟೀಕಿಸುವ ಹಕ್ಕು ಅಸ್ನೋಟಿಕರ್‌ಗೆ ಇಲ್ಲ: ಶಾಸಕ ದಿನಕರ

0
7
loading...

ಕುಮಟಾ: ಆನಂದ ಅಸ್ನೋಟಿಕರ್‌ ಅವರು ಸಚಿವ ಅನಂತಕುಮಾರ ಹೆಗಡೆ ಅವರ ಬಗ್ಗೆ ಅವಹೇಳನಕಾರಿಯಾಗಿ ಮಾತನಾಡಿದ್ದಾರೆ. ನಮ್ಮ ಪಕ್ಷದ ಸಚಿವರನ್ನು ಅವಹೇಳನಕಾರಿಯಾಗಿ ಟೀಕಿಸುವ ಹಕ್ಕು ಮಾಜಿ ಸಚಿವ ಆನಂದ ಅಸ್ನೋಟಿಕರ್‌ಗೆ ಇಲ್ಲ. ಅವರ ಈ ಹೇಳಿಕೆಗಳು ಬಿಜೆಪಿ ಪಕ್ಷ ಖಂಡಿಸುತ್ತದೆ ಎಂದು ಶಾಸಕ ದಿನಕರ ಶೆಟ್ಟಿ ಹೇಳಿದರು.
ಅವರು ಶನಿವಾರ ಬಿಜೆಪಿ ಕಛೇರಿಯಲ್ಲಿ ಪತ್ರಕರ್ತರೊಂದಿಗೆ ಮಾತನಾಡಿ, ಮಾಜಿ ಸಚಿವ ಆನಂದ ಅಸ್ನೋಟಿಕರ್‌ ಅವರು ಕೇಂದ್ರ ಸಚಿವ ಅನಂತಕುಮಾರ ಹೆಗಡೆ ವಿರುದ್ದ ಶನಿವಾರ ಕಾರವಾರದಲ್ಲಿ ಅವಹೇಳನಕಾರಿ ಹೇಳಿಕೆಯನ್ನು ನೀಡಿರುವುದು ಖಂಡನೀಯ. ಆನಂದ ಅಸ್ನೋಟಿಕರ್‌ ಅವರು ಬಿಜೆಪಿಯಲ್ಲಿ ಶಾಸಕರಾಗಿದಲ್ಲದೇ ಸಚಿವರಾಗಿ ಕೆಲಸ ಮಾಡಿ, ಪಕ್ಷಕ್ಕೇ ಮೋಸಮಾಡಿದವರು. ಅವರ ಈ ವರ್ತನೆ ಅವರು ತಮ್ಮ ಮಾನಸಿಕ ಸೀಮಿತವನ್ನೇ ಕಳೆದುಕೊಂತಿದೆ ಎಂಬುದನ್ನು ಸೂಚಿಸುತ್ತದೆ. ಅವರು ಈ ಹಿಂದೆ ಚುನಾವಣೆಯಲ್ಲಿ ಸೋತು ಕ್ಷೇತ್ರದಿಂದ ಮಾಯವಾಗಿದ್ದರು ಎಂಬುದನ್ನು ಅವರು ಮೊದಲು ಜನತೆಗೆ ತಿಳಿಸಬೇಕು. ಅಲ್ಲದೇ ಅವರು ಏನು ಎಂಬುದನ್ನು ಎಲ್ಲಾ ಪಕ್ಷದವರಿಗೂ ತಿಳಿದಿದೆ. ಆನಂದ ಅಸ್ನೋಟಿಕರ್‌ ಅವರು ಇಂಥಹ ಮಾತುಗಳನ್ನು ಇಲ್ಲಿಗೆ ನಿಲ್ಲಿಸಬೇಕು. ಇಲ್ಲವಾದರೆ ಜಿಲ್ಲೆಯಾದ್ಯಂತ ಪ್ರತಿಭಟನೆ ಕೈಗೊಳ್ಳಲಾಗುವುದು ಎಂದು ಎಚ್ಚರಿಕೆ ನೀಡಿದರು.
ಜಿಲ್ಲಾ ಯುವಮೊರ್ಚಾ ಅಧ್ಯಕ್ಷ ಮಂಜುನಾಥ ಜನ್ನು ಮಾತನಾಡಿ, ಮಾಜಿ ಸಚಿವ ಆನಂದ ಅಸ್ನೋಟಿಕರ್‌ ಅವರು ಸಚಿವ ಅನಂತಕುಮಾರ ಹೆಗಡೆ ಅವರ ಬಗ್ಗೆ ಅವಹೇಳನಕಾರಿಯಾಗಿ ಆಡಿದ ಮಾತುಗಳು ಅವರಿಗೇ ಹೆಚ್ಚು ಸೂಕ್ತವಾಗಿದೆ. ಕ್ಷೇತ್ರದಲ್ಲಿ ಅವರ ಮೇಲೆ ಸಾಕಷ್ಟು ವೈಯಕ್ತಿಕ ಆಪಾದನೆಗಳು ಇರುವುದು ಎಲ್ಲರಿಗೂ ತಿಳಿದ ವಿಷಯ. ಅವರು ಅನಂತಕುಮಾರ ಹೆಗಡೆ ಅವರ ಬಗ್ಗೆ ಮಾತನಾಡಿ ತಮ್ಮ ವ್ಯಕ್ತಿತ್ವವನ್ನು ಮತ್ತೊಮ್ಮೆ ಸಾಬೀತುಪಡಿಸಿದ್ದಾರೆ. ಮತ್ತೊಮ್ಮೆ ಪಕ್ಷದ ಯಾವುದೇ ನಾಯಕರ ಮೇಲೆ ಅವಹೇಳನಕಾರಿ ಶಬ್ದಗಳನ್ನು ಬಳಸಿದಲ್ಲಿ ಜಿಲ್ಲೆಯಾದ್ಯಂತ ಉಗ್ರ ಪ್ರತಿಭಟನೆ ನಡೆಸಲಾಗುವುದು ಎಂದರು.
ಸುದ್ಧಿಗೋಷ್ಠಿಯಲ್ಲಿ ಜಿ ಪಂ ಸದಸ್ಯ ಗಜಾನನ ಪೈ, ಬಿಜೆಪಿ ಪ್ರಮುಖರಾದ ಎಂ ಜಿ ಭಟ್ಟ್‌, ಹೇಮಂತಕುಮಾರ ಗಾಂವ್ಕರ್‌, ಗಣೇಶ್‌ ಅಂಬಿಗ, ವಿಶ್ವನಾಥ ನಾಯ್ಕ, ಜಗದೀಶ್‌ ಭಟ್ಟ್‌, ವಿಷ್ಣು ಗೌಡ, ಸುದರ್ಶನ ಹೆಗಡೆ ಹಾಗೂ ಇತರರು ಉಪಸ್ಥಿತರಿದ್ದರು.

loading...