ಸಭೆಗೆ ಗೈರಾದ ಅಧಿಕಾರಿಗಳ ವಿರುದ್ಧ ಕ್ರಮ: ಶಾಸಕ ಪಾಟೀಲ

0
5
loading...

ಕನ್ನಡಮ್ಮ ಸುದ್ದಿ-ನರಗುಂದ: ವಿವಿಧ ಇಲಾಖೆಯ ಅಧಿಕಾರಿಗಳು ಸಭೆಗೆ ಹಾಜರಾಗಿರಲಿಲ್ಲ. ಅಂತಹವರ ಪಟ್ಟಿಮಾಡಿ ನೀಡಿ ಮುಂದಿನ ಕ್ರಮ ಕೈಗೊಳ್ಳಲಾಗುವುದೆಂದು ಶಾಸಕ ಸಿ.ಸಿ. ಪಾಟೀಲ ಸಭೆಯಲ್ಲಿ ಆಕ್ರೋಶ ವ್ಯಕ್ತಪಡಿಸಿದರು. ಶನಿವಾರ ಪೂರ್ವಭಾವಿ ಸಭೆ ಜು. 7 ರಂದು ಹಮ್ಮಿಕೊಳ್ಳಲಾಗಿತ್ತು. ಸಭೆಗೆ ಹೆಚ್ಚಿನ ಅಧಿಕಾರಿಗಳು ಗೈರಾಗಿದ್ದರಿಂದ ಅವರು ಅಸಮಾಧಾನ ವ್ಯಕ್ತಪಡಿಸಿದರು.
ಕನ್ನಡ ಸಾಹಿತ್ಯ ಸಮ್ಮೇಳನ ನಡೆಸುವ ಕುರಿತಂತೆ ಜು. 7 ರಂದು ತಾಪಂ ಸಭಾಭವನದಲ್ಲಿ ನಡೆದ ಪೂರ್ವಭಾವಿ ಸಭೆಯಲ್ಲಿ ಮಾತನಾಡಿದ ಅವರು, ಕನ್ನಡದ ಸಾಹಿತ್ಯ ಸಮ್ಮೇಳನ ಅಗತ್ಯವಾಗಿದ್ದು, ನಾಡಿನ ಅನೇಕ ಮಹಿನೀಯರನ್ನು ಸ್ಮರಿಸಿ ಸಾಹಿತ್ಯದ ಕೃಷಿಯನ್ನು ಮೇಲು ಪರ್ವತಕ್ಕೆ ತೆಗೆದುಕೊಂಡು ಹೋಗುವ ಅಭಿಮಾನ ನಮ್ಮೆಲ್ಲರಲ್ಲಿ ಇರಬೇಕು. ಅಧಿಕಾರಿಗಳು ಮುತುವರ್ಜಿಯಿಂದ ಸಭೆಯಲ್ಲಿ ಪಾಲ್ಗೊಳ್ಳಬೇಕು. ಇದಾಗದಿದ್ದರೆ ಮುಂದಿನ ಕ್ರಮ ಕೈಗೊಳ್ಳಲಾಗುವುದು ಎಂದು ಶಾಸಕ ಸಿ.ಸಿ. ಪಾಟೀಲ ಪುನರುಚ್ಚರಿಸಿದರು.
ಈ ಕನ್ನಡ ನಾಡು ಸಾಹಿತ್ಯದ ಬೀಡು. ಇದನ್ನು ಕನ್ನಡಿಗರಾದ ನಾವೆಲ್ಲ ಅಳಿಸದಂತೆ ಉಳಿಸಬೇಕಾಗಿರುವುದು ನಮ್ಮೆಲ್ಲರ ಧರ್ಮ. ಅಧಿಕಾರಿಗಳು ಇದನ್ನು ಅರ್ಥಮಾಡಿಕೊಳ್ಳಬೇಕು. ಸಾಹಿತ್ಯದ ಸಾಧನೆ ಮೈಲುಗಲ್ಲು ಬಹಳಷ್ಟು ವಿಸ್ತಾರವಾಗಿದೆ. ಇದರಲ್ಲಿ ರಾಜಕೀಯ ಎನ್ನುವುದು ತರದೇ ಒಟ್ಟಾಗಿ ಈ ಸಾಹಿತ್ಯ ಸಮ್ಮೆಳನವನ್ನು ಅಚ್ಚುಕಟ್ಟಾಗಿ ನೆರವೇರಿಸೋಣ ಎಂದರು. ಈ ನಾಡಿನ ನಾಡಗೀತೆ ಬಹುದೊಡ್ಡ ಅಭಿಮಾನದ ಸಂಕೇತವೆಂದೇ ನಾವೆಲ್ಲ ಪರಿಗಣಿಸಲ್ಪಟ್ಟಿದ್ದೇವೆ. ಹೀಗಾಗಿ ಯಶಸ್ಸಿನ ಹಾದಿಯಲ್ಲಿ ಈ ಸಮ್ಮೇಳನ ನಡೆಯಲಿದೆ. ಕವಿಪುಂಗವರು ಈ ನಾಡಿನ ಮಹಾನ್‌ ಶಕ್ತಿಯಾಗಿದ್ದಾರೆ. ಅವರ ನೆನಪುಗಳನ್ನು ನಾವೆಲ್ಲ ಮೆಲಕು ಹಾಕುವ ಸಮಯ. ಇದಕ್ಕಾಗಿ ನಾವೆಲ್ಲ ಉಗ್ಗೂಡಿ ಕೆಲಸ ಮಾಡೋಣ ಎಂದರು.
ಸಾಹಿತ್ಯ ಸಮ್ಮೇಳನದ ಸಂದರ್ಭದಲ್ಲಿ ಊಟದ ವ್ಯವಸ್ಥೆಯ ಎಲ್ಲ ಜವಾಬ್ದಾರಿಯನ್ನು ನಾನು ತೆಗೆದುಕೊಂಡಿದ್ದು ಅದರ ಖರ್ಚನ್ನು ನಾನು ನೋಡಿಕೊಳ್ಳುತ್ತೇನೆ ಎಂದು ಶಾಸಕರು ತಿಳಿಸಿದರು.
ಸಮ್ಮೇಳನದ ಅಧ್ಯಕ್ಷರನ್ನಾಗಿ ಮಾಡಲು ನಿವೃತ್ತ ಪ್ರಾಚಾರ್ಯ ಸಿ.ಎಸ್‌. ಸಾಲೂಟಗಿಮಠ, ಡಾ. ಬಿ.ಎಂ. ಜಾಬಣ್ಣವರ, ನಿವೃತ್ತ ಶಿಕ್ಷಕ ಬಸನಗೌಡ ಹಿರೇಗೌಡ್ರ, ಬಂಡಾಯ ಸಾಹಿತಿ ಮಾರುತಿ ಭೋಸಲೆ, ಹಾಗೂ ಬಸವರಾಜ ಬೂಸರಡ್ಡಿ ಅವರ ಹೆಸರು ಪ್ರಸ್ತಾಪವಾಗಿದ್ದು ಇವರಲ್ಲಿ ಸಮ್ಮೇಳನದ ಅಧ್ಯಕ್ಷರನ್ನಾಗಿ ಯಾರನ್ನು ಆಯ್ಕೆಮಾಡಬೇಕೆಂಬುದರ ಕುರಿತು ಇದಕ್ಕಾಗಿ ಮೂವರನ್ನೊಳಗೊಂಡ ಸಮಿತಿ ಮಾಡಲಾಗಿದೆ. ಅವರ ತೀರ್ಮಾನದಂತೆ ಸಮ್ಮೇಳನಾಧ್ಯಕ್ಷರ ಹೆಸರು ಆಯ್ಕೆಮಾಡಲು ಸಭೆಯಲ್ಲಿ ನಿರ್ಣಯಿಸಲಾಯಿತು.
ಸ್ಥಳೀಯ ಬಸವೇಶ್ವರ ಸಮುದಾಯ ಭವನದಲ್ಲಿ ಜು. 28 ರಂದು ಸಾಹಿತ್ಯ ಸಮ್ಮೇಳನ ಜರುಗಲಿದ್ದು ಅಂದು ಬೆಳಗ್ಗೆ ರಾಷ್ಟ್ರಧ್ವಜ, ಸಾಹಿತ್ಯ ಪರಿಷತ್‌ ಧ್ವಜ ಮತ್ತು ಕನ್ನಡ ಧ್ವಜಾರೋಹಣ ನೆರವೇರಿಸಲು ಸಭೆಯಲ್ಲಿ ನಿರ್ಣಯಿಸಲಾಯಿತು.
ಸಮ್ಮೇಳನದ ಸಿದ್ಧತೆ ಮತ್ತು ಆಮಂತ್ರಣ ಪತ್ರ, ಕರ ಪತ್ರ, ಹಾಗೂ ಪ್ಲ್ಯಾಕ್ಸ್‌, ಬ್ಯಾನರ್‌ ಹಾಗೂ ಕುಂಭಮೇಳ, ಡೊಳ್ಳು ವೀರಗಾಸೆ ಹಾಗೂ ಮೆರವಣಿಗೆ ಕುರಿತು ಮತ್ತು ಯಾವ ಯಾವ ಇಲಾಖೆ ಸಮ್ಮೇಳನಕ್ಕೆ ಅರ್ಥಿಕ ನೆರವು ನೀಡಬೇಕೆಂಬುದರ ಕುರಿತು ಸಭೆಯಲ್ಲಿ ನಿರ್ಣಯಿಸಿ ಸಂಬಂಧಿಸಿದ ಅಧಿಕಾರಿಗಳಿಗೆ ತಿಳಿಸಲಾಯಿತು.
ಕಸಾಪ ತಾಲೂಕು ಘಟಕದ ಅಧ್ಯಕ್ಷ ಮೋಹನ ಕಲಹಾಳ ಸಮ್ಮೇಳನದ ಸಿದ್ಧತೆ ಮತ್ತು ಸಮ್ಮೇಳನದ ಎಲ್ಲ ಕಾರ್ಯಕ್ರಮಗಳ ಕುರಿತು ಸಭೆಯಲ್ಲಿ ವಿವರ ನೀಡಿದರು. ಅತಿಥಿಗಳಿಗೆ ನೀಡುವ ನೆನಪಿನ ಕಾಣಿಕೆಗಳ ಸಿದ್ದತೆಯ ಖರ್ಚನ್ನು ತಾವು ವಹಿಸಿಕೊಳ್ಳುವುದಾಗಿ ಎಪಿಎಂಸಿ ಅಧ್ಯಕ್ಷ ಎನ್‌.ವ್ಹಿ ಮೇಟಿ ಸಭೆಯಲ್ಲಿ ತಿಳಿಸಿದರು.
ಕಾರ್ಯಕ್ರಮದಲ್ಲಿ ಎ.ಎಂ. ಹುಡೇದ, ಎಂ.ಎಸ್‌, ಪಾಟೀಲ, ತಾಪಂ ಅಧ್ಯಕ್ಷ ಪ್ರಭು ಯಲಿಗಾರ, ತಾಪಂ ಉಪಾಧ್ಯಕ್ಷೆ ದೀಪಾ ನಾಗನೂರ, ಎಪಿಎಂಸಿ ಅಧ್ಯಕ್ಷ ಎನ್‌.ವ್ಹಿ. ಮೇಟಿ, ತಹಸೀಲ್ದಾರ್‌ ಪ್ರಕಾಶ ಹೊಳೆಪ್ಪಗೋಳ, ಬಿ.ಬಿ. ಐನಾಪೂರ, ಉಮೇಶ ಕುಡೇನವರ, ಜಿಪಂ ಸದಸ್ಯೆ ರೇಣುಕಾ ಅವರಾದಿ, ತಾಪಂ ಇಒ ಎಂ.ವ್ಹಿ. ಚಳಗೇರಿ, ಡಿವೈಎಸ್‌ಪಿ ಗುರುಮತ್ತೂರ, ಸಿಪಿಐ ಶ್ರೀನಿವಾಸ ಮೇಟಿ, ಪುರಸಭೆ ಅಧ್ಯಕ್ಷ ಶಿವಾನಂದ ಮುತವಾಡ, ಡಾ. ಬಿ.ಎಂ. ಜಾಬಣ್ಣವರ, ಸಿ.ಎಸ್‌. ಸಾಲೂಟಗಿಮಠ ಉಪಸ್ಥಿತರಿದ್ದರು. ಬಿ.ಆರ್‌. ಪಟ್ಟಣಶೆಟ್ಟಿ, ಎಸ್‌.ಜಿ. ಮಣ್ಣೂರಮಠ, ಎ.ಸಿ. ಹಿರೇನಿಂಗನಗೌಡ್ರ ನಿರ್ವಹಿಸಿದರು.

loading...