ಸಮಸ್ಯೆಗಳ ಪರಿಹಾರಕ್ಕೆ ಕಾಲಾವಕಾಶ ಕೋರಿದ ಪುರಸಭೆ

0
8
loading...

ಕನ್ನಡಮ್ಮ ಸುದ್ದಿ-ಹಳಿಯಾಳ: ಪುರಸಭೆ ವ್ಯಾಪ್ತಿಯ ಕೆಲವು ಸಮಸ್ಯೆಗಳನ್ನು ಪರಿಹರಿಸಲು ಪುರಸಭೆಯವರು ಕಾಲಾವಕಾಶ ಕೋರಿದ ಹಿನ್ನೆಲೆಯಲ್ಲಿ ಬಿಜೆಪಿ ವತಿಯಿಂದ ಹಮ್ಮಿಕೊಳ್ಳಲಾಗಿದ್ದ ಪ್ರತಿಭಟನೆಯನ್ನು ಹಿಂಪಡೆಯಲಾಗಿದೆ ಎಂದು ಮಾಜಿ ಶಾಸಕ, ಬಿಜೆಪಿ ಮುಖಂಡ ಸುನೀಲ ಹೆಗಡೆ ತಿಳಿಸಿದ್ದಾರೆ.
ಶನಿವಾರ ಏರ್ಪಡಿಸಿದ್ದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಹಳಿಯಾಳ ಪಟ್ಟಣದಲ್ಲಿ ಎಲ್ಲಿ ನೋಡಿದರಲ್ಲಿ ಅವ್ಯವಸ್ಥಿತವಾಗಿ ಕಾರ್ಯನಿರ್ವಹಿಸುತ್ತಿರುವ ಚಿಕನ್‌ ಅಂಗಡಿಗಳ ಸಮಸ್ಯೆಯನ್ನು ಬಗೆಹರಿಸುವುದಾಗಿ ಪುರಸಭೆ ಮುಖ್ಯಾಧಿಕಾರಿ ತಿಳಿಸಿದ್ದು, ಪ್ರಸಕ್ತ ಮೀನು ಮಾರುಕಟ್ಟೆ ಕಟ್ಟಡದ ಮೇಲಂತಸ್ತಿನಲ್ಲಿ ನೂತನ ಚಿಕನ್‌ ಮಾರುಕಟ್ಟೆ ಕಾಮಗಾರಿ ಪ್ರಗತಿಯಲ್ಲಿದ್ದು 15 ದಿನಗಳಲ್ಲಿ ಕಾಮಗಾರಿ ಮುಗಿಯುವ ಸಾಧ್ಯತೆ ಇದೆ. ಅದು ಸಿದ್ಧವಾದ ತಕ್ಷಣ ಕೋಳಿಮಾಂಸ ವ್ಯಾಪಾರ ಮಾಡುವವರನ್ನು ಜನವಸತಿ ಸ್ಥಳದಿಂದ ಸಂಪೂರ್ಣವಾಗಿ ನೂತನ ಚಿಕನ್‌ ಮಾರುಕಟ್ಟೆಗೆ ಸ್ಥಳಾಂತರ ಗೊಳಿಸಲಾಗುವುದು. ಅಲ್ಲಿಯವರೆಗೆ ಸಧ್ಯ ಕಾರ್ಯ ನಿರ್ವಹಿಸುತ್ತಿರುವ ಚಿಕನ್‌ ಅಂಗಡಿಗಳಲ್ಲಿ ಸ್ವಚ್ಛತೆ ಕಾಪಾಡಿಕೊಳ್ಳುವಂತೆ ತನ್ಮೂಲಕ ಸಾರ್ವಜನಿಕರಿಗೆ ತೊಂದರೆ ಉಂಟು ಮಾಡದಂತೆ ಕ್ರಮ ವಹಿಸಲಾಗುವುದು ಎಂದರು.
ಚಿಕನ್‌ ಅಂಗಡಿಯವರು ಚರಂಡಿ ಮೇಲೆ ಇರಿಸಲಾಗಿರುವ ಸಾಮಗ್ರಿಗಳನ್ನು ತೆರವುಗೊಳಿಸುವಂತೆ ಸಂಬಂಧಿಸಿದ 24 ಅಂಗಡಿಯವರೆಗೆ ನೋಟಿಸ್‌ ಕಳುಹಿಸಲಾಗಿದ್ದು, ಇದಕ್ಕೆ ತಪ್ಪಿದರೆ ಸೂಕ್ತ ಕ್ರಮ ಕೈಗೊಳ್ಳಲಾಗುವುದು ಎಂದು ಭರವಸೆ ನೀಡಿದ್ದಾರೆ. ದಲಾಯತಗಲ್ಲಿಯಲ್ಲಿ ಸ್ವಚ್ಛತಾ ಕಾರ್ಯಕ್ರಮ ಕೈಗೊಳ್ಳಲಾಗಿದೆ. ಗೋ ವಧಾಲಯ ವಿಷಯದ ಬಗ್ಗೆ ಪುರಸಭೆಯ ಸಾಮಾನ್ಯ ಸಭೆಯಲ್ಲಿ ಚರ್ಚಿಸಿ ಮುಂದಿನ ಕ್ರಮ ಕೈಗೊಳ್ಳಲಾಗುವುದು ಎಂದು ಪುರಸಭೆ ಮುಖ್ಯಾಧಿಕಾರಿ ನೀಡಿದ ಪತ್ರದಲ್ಲಿ ಹೇಳಿದ್ದಾರೆ.
ಬಿಜೆಪಿ ಗಮನಸೆಳೆದ ವಿಷಯಕ್ಕೆ ಪುರಸಭೆಯವರು ಸ್ಪಂದಿಸಿರುವ ಕಾರಣ ಜುಲೈ 9 ರಂದು ಪುರಸಭೆ ಕಾರ್ಯಾಲಯದ ಎದುರು ಹಮ್ಮಿಕೊಳ್ಳಲಾಗಿದ್ದ ಪ್ರತಿಭಟನೆ ಹಿಂಪಡೆಯಲಾಗಿದೆ. ಆದರೆ ಪುರಸಭೆಯವರು ತಿಳಿಸಿದ ಕಾಲಮಿತಿಯೊಳಗೆ ಅವರು ನೀಡಿದ ಭರವಸೆಯನ್ನು ಈಡೇರಿಸದಿದ್ದರೆ ಪ್ರತಿಭಟನೆ ಮಾಡುವುದು ಖಚಿತ ಎಂದು ಸುನೀಲ ಹೆಗಡೆ ಹೇಳಿದರು.
ಕೇಂದ್ರ ಸರ್ಕಾರವು 14 ಫಸಲುಗಳಿಗೆ ಬೆಂಬಲ ಬೆಲೆ ಘೋಷಿಸಿರುವುದನ್ನು ಶ್ಲಾಘಿಸಿದ ಸುನೀಲ ಹೆಗಡೆ ಅವರು, ರಾಜ್ಯ ಸರ್ಕಾರವು ಸಹ ಈ ನಿಟ್ಟಿನಲ್ಲಿ ಕಾರ್ಯ ಮಾಡಬೇಕು. ಗೋವಿನಜೋಳ ಖರೀದಿ ಕೇಂದ್ರವನ್ನು ಸೂಕ್ತ ಸಮಯದಲ್ಲಿ ಆರಂಭಿಸಲು ಜಿಲ್ಲಾಧಿಕಾರಿಗಳು ತಹಸೀಲ್ದಾರರಿಗೆ ಅಧಿಕಾರ ನೀಡಬೇಕು ಎಂದರು.
ರಾಜ್ಯ ಸರ್ಕಾರ ಬಜೆಟ್‌ನಲ್ಲಿ ರೈತರ ಸಾಲಮನ್ನಾ ಮಾಡಿರುವುದು ಸ್ವಾಗತಾರ್ಹ. ಆದರೆ ಇದು ಕಣ್ಣೊರೆಸುವ ತಂತ್ರವಾಗಿದೆ. ಜಿಲ್ಲೆಯ ಕೇವಲ 549 ರೈತರಿಗೆ, ಹಳಿಯಾಳ ತಾಲೂಕಿನ 10 ರಿಂದ 15 ರೈತರಿಗೆ ಮಾತ್ರ ಇದರ ಹೆಚ್ಚಿನ ಪ್ರಯೋಜನ ದೊರೆಯುತ್ತದೆ. ಕಳೆದ ಸರ್ಕಾರದ ಮುಖ್ಯಮಂತ್ರಿ ಸಿದ್ದರಾಮಯ್ಯನವರು ಮಾಡಿದ ಬಜೆಟ್‌ ಅನ್ನು ಟೀಕಿಸಿದ್ದ ಮುಖ್ಯಮಂತ್ರಿ ಕುಮಾರಸ್ವಾಮಿ ಹಿಂದಿನ ಮಾದರಿಯ ಬಜೆಟ್‌ನ್ನು ಮಂಡಿಸಿರುವುದು ಖೇದಕರ. ಮುಖ್ಯಮಂತ್ರಿ ಕುಮಾರಸ್ವಾಮಿ ಚುನಾವಣಾ ಪೂರ್ವದಲ್ಲಿ ನೀಡಿದ ಭರವಸೆಗಳನ್ನು ಈಡೇರಿಸಬೇಕು ಎಂದು ಆಗ್ರಹಿಸಿದರು.
ಕಾಂಗ್ರೆಸ್‌ ಆಡಳಿತದಲ್ಲಿರುವ ಹಳಿಯಾಳ ಪುರಸಭೆ ಭ್ರಷ್ಟಾಚಾರದ ಬಗ್ಗೆ ಚುನಾವಣೆ ಸಂದರ್ಭದಲ್ಲಿ ಮತದಾರ ನ್ಯಾಯಾಲಯಕ್ಕೆ ಹೋಗುತ್ತೇವೆ. ಇವರ ಭ್ರಷ್ಟಾಚಾರದ ಬಗ್ಗೆ ಭ್ರಷ್ಟಾಚಾರ ನಿಗ್ರಹ ದಳ (ಎಸಿಬಿ)ಗೆ ದೂರು ನೀಡಿದರೆ ಅದು ಇವರ ಕಾಂಗ್ರೆಸ್‌ ಸರ್ಕಾರದ ಅಧೀನದಲ್ಲಿದೆ. ಇನ್ನೊಂದೆಡೆ ಲೋಕಾಯುಕ್ತಕ್ಕೆ ದೂರು ನೀಡಬೇಕೆಂದರೆ ಅದನ್ನು ಸಹ ದುರ್ಬಲಗೊಳಿಸಿದ್ದಾರೆ. ಹೀಗಾಗಿ ಎಸಿಬಿಗಾಗಲಿ, ಲೋಕಾಯುಕ್ತಕ್ಕಾಗಲಿ ದೂರು ನೀಡುವುದಿಲ್ಲಾ ಎಂದು ತಿಳಿಸಿದರು.
ಪಕ್ಷದ ಅಧ್ಯಕ್ಷ ಶಿವಾಜಿ ನರಸಾನಿ, ವಿ.ಎಂ. ಪಾಟೀಲ, ಎಸ್‌.ಎ. ಶೆಟವಣ್ಣವರ, ಸಿದ್ದಪ್ಪಾ ದಲಾಲ, ಅನಿಲ ಮುತ್ನಾಳೆ, ಸಂತಾನ ಸಾವಂತ, ಯಲ್ಲಾರಿ ಬೊಬಾಟಿ, ಪ್ರದೀಪ ಹಿರೇಕರ, ಸಂತೋಷ ಘಟಕಾಂಬ್ಳೆ, ವಿಜಯ ಬೋಬಾಟಿ ಮೊದಲಾದವರಿದ್ದರು.

loading...