ಸರಕಾರ ಕೈಗೊಂಡ ಕ್ರಮ ಜನರ ಪಾಲಿಗೆ ನುಂಗಲಾರದ ತುತ್ತಾಗಿದೆ

0
12
loading...

ಕನ್ನಡಮ್ಮ ಸುದ್ದಿ-ಕುಮಟಾ: ಕರ್ನಾಟಕ ಸರಕಾರ ಬಿಪಿಎಲ್‌ ಕಾರ್ಡುದಾರರಿಗೆ ಉಚಿತ ಅಕ್ಕಿ ಜೊತೆ ರಿಯಾಯಿತಿ ದರದಲ್ಲಿ ಸಕ್ಕರೆ ಎಣ್ಣೆ ತೊಗರಿಬೇಳೆಯನ್ನು ನೀಡುತ್ತಿದೆ. ಇದು ಬಡ ಜನತೆಯ ಜೀವನಕ್ಕೆ ಆಧಾರ ಸ್ತಂಭ ವಾಗಿದೆ. ಆದರೆ ನ್ಯಾಯ ಬೆಲೆ ಅಂಗಡಿಯ ಹಾಗೂ ವ್ಯವಸಾಯ ಸೇವಾ ಸಹಕಾರಿ ಸಂಘಗಳ ಮೂಲಕ ವಿತರಿಸುವ ಪಡಿತರ ವ್ಯವಸ್ಥೆಯಲ್ಲಿ ಪಾರದರ್ಶಕತೆಯ ತರಲು ಸರಕಾರ ಕೈಗೊಂಡ ಬಿಗುವಿನ ಕ್ರಮ ಜನರ ಪಾಲಿಗೆ ನುಂಗಲಾರದ ತುತ್ತಾಗಿ ಪರಿಣಮಿಸಿದೆ.
ಖಂಡಗಾರ, ನಾಗೂರ ಕುಗ್ರಾಮ ಎತ್ತಿನಬೈಲ್‌ ಖೈರೆ ಗುತ್ತಲು ಗ್ರಾಮದಿಂದ ಪಡಿತರ ಪಡೆಯಲು ಬರುವರ ಗೋಳು ಹೆಳತೀರದು ಖಂಡಗಾರ ನಾಗೂರು ದಟ್ಟ ಕಾನನದ ನಟ್ಟ ನಡುವೆ ಇರುವ ಗುತ್ತಲ ಗ್ರಾಮವಾಗಿದೆ. ಈ ಊರಿನಿಂದ ಕನಿಷ್ಟ 15 ಕಿಮೀ ಕ್ರಮಿಸಿ ಪಡಿತರ ಪಡೆಯಲು ಮಿರ್ಜಾನ ಸೊಸೈಟಿಗೆ ಬರಬೇಕಿದೆ. ಈ ಭಾಗಕ್ಕೆ ಇಡೀ ದಿನ ಇರುವ ಬಸ್‌ ವ್ಯವಸ್ಥೆ 3 ಬಾರಿ ಮಾತ್ರ. ಮುಂಜಾನೆ 8 ಗಂಟೆಗೆ ಬಸ್‌ ಹತ್ತಿದರೆ ಮಿರ್ಜಾನಿಗೆ ತಲುಪಲು 9 ಗಂಟೆ ಸಮಯ ತಲುಪುತದೆ. ನಂತರ ಸರತಿಯಲ್ಲಿ ಪಡಿತರ ಚೀಟಿ ಇಟ್ಟು ಪಾಳಿ ಬಂದಾಗ ರೇಶನ್‌ ಪಡೆಯಬೇಕಾಗಿದೆ. ಪರಿಸ್ಥಿತಿ ಹೀಗಿರುವಾಗ ತಮ್ಮ ಪಾಳಿ ಬರುವವರೆಗೆ ಕಾಯುತ್ತಾ ಕುಳಿತ ಹಳ್ಳಿಗರಿಗೆ ಒಮ್ಮೆ ವಿದ್ಯುತ್‌ ಸಮಸ್ಯೆ ಇನ್ನೊಮ್ಮೆ ಸರ್ವರ ಸಮಸ್ಯೆ ಎದುರಾಗುತ್ತದೆ. ವಿದ್ಯುತ್‌ ಬಂದಾಗ ಸರ್ವರ ಸರಿಯಾಗ ಬಹುದೆಂದು ಕಾಯುತ್ತಾ ಕುಳಿತರೆ ಇವೆರಡು ಕೊನೆಯವರೆಗೆ ಕೈಕೊಟ್ಟು ಊಟವಿಲ್ಲದೆ ಉಪವಾಸವೇ ಸಂಜೆ ಸಮಯದ ಕೊನೆಯ ಬಸ್ಸಿಗೆ ಹತ್ತಿ ಊರು ತಲುಪಬೇಕಾದ ಪರಿಸ್ಥಿತಿ ಎದುರಾಗಿದೆ.
ಸರ್ವರ ಕೇವಲ ಒಂದು ದಿನದ ಸಮಸ್ಯೆಯಲ್ಲ ಪ್ರತಿ ತಿಂಗಳೂ ಪ್ರತಿ ದಿನವೂ ಇದರ ಕಾಟ ತಪ್ಪಿದಲ್ಲ ಪಡಿತರ ಪಡೆಯಲು ಪ್ರತಿದಿನದ ಕೆಲಸ ಕಾರ್ಯ ಬದಿಗೊತ್ತಿ ಮುಂಜಾನೆಯಿಂದ ಸಂಜೆಯವರೆಗೂ ಸೊಸೈಟಿಯಲ್ಲಿ ಕಾಯ್ದು ಸುಸ್ತಾದ ಮಹಿಳೆಯರು ಮನೆಯಲ್ಲಿ ಅಡುಗೆಯ್ನನು ಮಾಡದೇ ಸಣ್ಣ ಮಕ್ಕಳನ್ನು ಕರೆದು ತಂದು ತಮ್ಮ ಅಳಲು ತೋಡಿಕೊಳ್ಳುತ್ತಿದ್ದಾರೆ. ನಾವು ನಿತ್ಯ 50 ರೂ ವೆಚ್ಚ ಮಾಡಿ ಪಡಿತರ ಸಿಗದೆ ವಾಪಸ್ಸಾಗ ಬೇಕಿದೆ. ಸರಕಾರ ಥಂಬ್‌ ಪಡೆದು ಪಡಿತರ ಪಡೆಯುವ ಪದ್ದತಿ ಆರಂಭಿಸಿದ ಮೇಲೆ ಹೆಬ್ಬರಳು ಹೊಂದಿಯಾಗದೇ ಬಹಳಷ್ಟು ಸಂಕಷ್ಟ ಪಟ್ಟಿದೇವೆ ಹಾಗಾಗಿ ಈ ಸಂಕಷ್ಟದಿಂದ ಪಾರು ಮಾಡುವಂತೆ ಎತ್ತಿನಬೈಲ ಗ್ರಾಮದ ಸಂತೊಷ ಗಾವ್ಕರ, ಖಂಡಗಾರ ಭಗಿರತ ನಾರಾಯಣ ನಾಯ್ಕ ನಾಗೂರಿ ರಮಾನಂದ ಕೃಷ್ಣ ನಾಯ್ಕ ದತ್ತಾತ್ರೆಯ ನಾರಾಯಣ ಗೌಡ, ಗುಲ್ಸನ್‌ ಅಬ್ದುಲ ನಯಾಜ್‌, ತಿಮ್ಮ ತಿಮ್ಮಿ ಮುಕ್ರಿ ಮಹ್ಮದ ಶಪಿ, ಶಾಂತಯ್ಯ ಚಂದ್ರು ಪಟಗಾರ ತಿಮ್ಮ ಮರಾಠಿ ಮುಂದಾದ ಅನೇಕರು ಮನವಿ ಮಾಡಿಕೊಂಡಿದ್ದಾರೆ.
ಒಟ್ಟಾರೆ ಬಿಪಿಎಲ್‌ ಕಾರ್ಡುದಾರರು ನಮಗೆ ನೀಡುವ ಪಡಿತರವನ್ನು ಈ ಹಿಂದಿನ ಪದ್ಧತಿಯಂತೆ ನೀಡಿ ತಮ್ಮ ಸಂಕಷ್ಟಕ್ಕೆ ಸ್ಪಂದಿಸುವಂತೆ ಮನವಿ ಮಾಡಿಕೊಂಡಿದ್ದಾರೆ. ಜನರ ಸಮಸ್ಯೆ ನೀಗಿಸಲು ಜನ ಪ್ರತಿನಿಧಿಗಳು ಸರಕಾರದ ಮೇಲೆ ಒತ್ತಾಯ ಹೇರಿ ಸಮಸ್ಯೆ ಪರಿಹರಿಸಲು ಮುಂದಾಗಬೇಕಿದೆ.

loading...