ಸಾರ್ವಜನಿಕರ ಸಮಸ್ಯೆ ಪರಿಹಾರಕ್ಕೆ ಆದ್ಯತೆ: ಡಿಸಿ ಜೈನ್‌

0
29

ಕನ್ನಡಮ್ಮ ಸುದ್ದಿ-ಗದಗ: ಸ್ಥಳೀಯ ಹಂತದಲ್ಲಿ ಜನರ ಸಮಸ್ಯೆಗಳಿಗೆ ಪರಿಹಾರ ದೊರೆಯಬೇಕು ಎನ್ನುವ ಮುಖ್ಯಮಂತ್ರಿಗಳ ಆಶಯ ಹಾಗೂ ರಾಜ್ಯದ ಮುಖ್ಯಕಾರ್ಯದರ್ಶಿಗಳ ನಿರ್ದೇಶನದನ್ವಯ ತಾಲೂಕು ಮಟ್ಟದಲ್ಲಿ ಸಾರ್ವಜನಿಕ ಕುಂದುಕೊರತೆ ಅಹವಾಲು ಸ್ವೀಕರಿಸಿ ಪರಿಹಾರ ಒದಗಿಸಲು ಗದಗ ಜಿಲ್ಲಾಡಳಿತ ಮುಂದಾಗಿದೆ ಎಂದು ಗದಗ ಜಿಲ್ಲಾಧಿಕಾರಿ ಮನೋಜ್‌ ಜೈನ್‌ ಹೇಳಿದರು.
ಶಿರಹಟ್ಟಿ ತಹಸೀಲ್ದಾರ್‌ ಕಚೇರಿಯಲ್ಲಿ ಸಾರ್ವಜನಿಕ ಸಮಸ್ಯೆ ಅಹವಾಲು ಸ್ವೀಕಾರದ ನಂತರ ಮಾಧ್ಯಮ ಪ್ರತಿನಿಧಿಗಳೊಂದಿಗೆ ಅವರು ಮಾತನಾಡಿದರು. ಜನರ ಸಮಸ್ಯೆ, ಅಭಿವೃದ್ಧಿ ಕಾರ್ಯಕ್ರಮ ಜನರಿಗೆ ತಲುಪಲು ಕಂದಾಯ ಇಲಾಖೆ ಜೊತೆ ಇತರ ಇಲಾಖೆಗಳ ಸಮನ್ವಯತೆಯ ಪರಿಶೀಲನೆಗೂ ಇದರಿಂದ ಸಾಧ್ಯವಾಗುತ್ತದೆ. ಇದರಿಂದ ಆಡಳಿತ ಕಾರ್ಯ ಚುರುಕಾಗಲು ನೆರವಾಗುತ್ತದೆ. ತಾಲೂಕಾ ಗ್ರಾಮ ಮಟ್ಟದಲ್ಲೇ ಸ್ಥಳೀಯ ಸಮಸ್ಯೆಗಳು ಪರಿಹಾರ ಕಾಣಬೇಕು ಎಂಬುದನ್ನು ಜಿಲ್ಲಾಡಳಿತ ಗಂಭೀರವಾಗಿ ಪರಿಗಣಿಸಿದ್ದು, ಎಲ್ಲ ಇಲಾಖೆಗಳ ಅಧಿಕಾರಿ ಸಿಬ್ಬಂದಿ ಈ ಕುರಿತು ತಮ್ಮ ಕರ್ತವ್ಯ ನಿರ್ವಹಣೆಯನ್ನು ಸಮರ್ಪಕ ಹಾಗೂ ನ್ಯಾಯ ಸಮ್ಮತವಾಗಿ ಮಾಡಬೇಕು. ಜನರ ಸಮಸ್ಯೆಗಳಿಗೆ ಅಗತ್ಯದ ತಕ್ಷಣ ಹಾಗೂ ನಿಗದಿತ ಪರಿಹಾರ ದೊರಕಿಸಲು ಆದ್ಯತೆ ನೀಡಬೇಕು ಎಂದರು.
ಗದಗ ಜಿಲ್ಲೆಯ ಎಲ್ಲ ಏಳೂ ತಾಲೂಕು ಕೇಂದ್ರಗಳಲ್ಲಿ ಈಗ ನಿಗದಿತ ದಿನಾಂಕಗಳಂದು ಸಾರ್ವಜನಿಕ ಅಹವಾಲು ಸ್ವೀಕಾರ ಪರಿಹಾರ ಒದಗಿಸುವ ಕಾರ್ಯಕ್ರಮ ಹಾಕಿಕೊಳ್ಳಲಾಗಿದ್ದು, ಮುಂದೆ ಪ್ರತಿ ವಾರ ಒಂದು ತಾಲೂಕು ಕೇಂದ್ರದಲ್ಲಿ ಜನಸ್ಪಂದನೆ ಕಾರ್ಯಕ್ರಮ ನಡೆಯಲಿದೆ. ಕಾರ್ಯಕ್ರಮದಲ್ಲಿ ಉಪವಿಭಾಗಾಧಿಕಾರಿಗಳು, ಕೃಷಿ, ತೋಟಗಾರಿಕೆ, ಭೂ ದಾಖಲೆ, ಲೋಕೋಪಯೋಗಿ, ಸಾರ್ವಜನಿಕ ಮತ್ತು ಪಿ.ಯು. ಶಿಕ್ಷಣ, ಪಶು ಸಂಗೋಪನೆ, ಸಣ್ಣ ನೀರಾವರಿ ಜಿಲ್ಲಾ ಹಾಗೂ ತಾಲೂಕು ಮಟ್ಟದ ಅಧಿಕಾರಿಗಳು ಭಾಗವಹಿಸುತ್ತಿದ್ದು ಸಾಧ್ಯವಾದಷ್ಟು ಸ್ಥಳದಲ್ಲೇ ಪರಿಹಾರ ನೀಡುವಿಕೆಗೆ ಆದ್ಯತೆ ನೀಡಲಾಗುತ್ತಿದೆ ಎಂದರು. ಉಪವಿಭಾಗಾಧಿಕಾರಿ ಪಿ.ಎಸ್‌.ಮಂಜುನಾಥ, ಶಿರಹಟ್ಟಿ ತಹಶೀಲ್ದಾರ ಅಮರಾವದಗಿ, ಕೃಷಿ ಜಂಟಿ ನಿರ್ದೇಶಕ ಸಿ.ಬಿ. ಬಾಲರೆಡ್ಡಿ, ಸಾರ್ವಜನಿಕ ಶಿಕ್ಷಣ ಇಲಾಖೆಯ ಉಪನಿರ್ದೇಶಕ ಜಿ. ರುದ್ರಪ್ಪ, ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ಉಪನಿರ್ದೇಶಕ ಕಲ್ಲೇಶ, ಭೂ ದಾಖಲೆಗಳ ಉಪ ನಿರ್ದೇಶಕ ರವಿಕುಮಾರ, ಶಿರಹಟ್ಟಿ ಪಟ್ಟಣ ಪಂಚಾಯತಿ ಮುಖ್ಯಾಧಿಕಾರಿ ಶ್ರೀಮತಿ ಶೋಭಾ ಬೆಳ್ಳಿಕೊಪ್ಪ, ಸೇರಿದಂತೆ ವಿವಿಧ ಇಲಾಖೆಗಳ ಜಿಲ್ಲಾ ಮಟ್ಟದ ಹಾಗೂ ತಾಲೂಕು ಮಟ್ಟದ ಅಧಿಕಾರಿಗಳು ಉಪಸ್ಥಿತರಿದ್ದರು.

loading...