ಸಾಲ ಸಿಗದೇ ರೈತರ ಪರದಾಟ: ಸಹಕಾರಿ ಸಂಘಗಳು ಸಂಕಷ್ಟದಲ್ಲಿ

0
23
loading...

ಕನ್ನಡಮ್ಮ ಸುದ್ದಿ-ಹಾನಗಲ್ಲ: ರೈತರ ಸಾಲಮನ್ನಾಕ್ಕಾಗಿ ಭಾರೀ ಜಟಾಪಟಿ ನಡೆಯುತ್ತಿದೆ. ಆದರೆ, ಇನ್ನೊಂದೆಡೆ ಕಳೆದ ಸಾಲಿನ ಸಾಲಮನ್ನಾದ ಮೊತ್ತವನ್ನು ಸರ್ಕಾರ ಬಿಡುಗಡೆ ಮಾಡದೆ ಇರುವುದರಿಂದ ಈ ಬಾರಿಯ ಸಾಲ ಸಿಗದೆ ರೈತರು ಪರದಾಡುವಂತಾಗಿದೆ.
ತಾಲೂಕಿನಲ್ಲಿ ಒಟ್ಟು 36 ಸಹಕಾರಿ ಸಂಘಗಳಿದ್ದು, 2017-18ನೇ ಸಾಲಿನಲ್ಲಿ ತಾಲೂಕಿನ 34 ಸಹಕಾರಿ ಸಂಘಗಳ ಮೂಲಕ ರೈತರು ಪಡೆದಿದ್ದ ಸಾಲಮನ್ನಾ ಹಣ ರಾಜ್ಯ ಸರ್ಕಾರದಿಂದ ಇದುವರೆಗೂ ಜಮಾ ಆಗಿಲ್ಲ. ಬರೋಬ್ಬರಿ 2ಕೋಟಿ 40 ಲಕ್ಷ ರೂ. ಹಣ ಬಿಡುಗಡೆಯಾಗಬೇಕಿದೆ. ಈ ಹಣ ಬಿಡುಗಡೆಯಾಗದ ಹೊರತು ರೈತರಿಗೆ 2018-19ನೇ ಸಾಲಿನ ಸಾಲ ಕೈಗೆ ಸಿಗದು. ಹೊಸ ಸಾಲಕ್ಕಾಗಿ ರೈತರು ಸಹಕಾರಿ ಸಂಘಗಳಿಗೆ ಅಲೆಯುವ ಪರಿಸ್ಥಿತಿ ನಿರ್ಮಾಣವಾಗಿದೆ.
ಸರ್ಕಾರ ಹಣ ಬಿಡುಗಡೆ ಮಾಡದೆ ಇರುವುದರಿಂದ ರೈತರ ಜತೆ ಸಹಕಾರಿ ಸಂಘಗಳೂ ಸಂಕಷ್ಟದಲ್ಲಿ ಸಿಲುಕಿವೆ. ಬಹುತೇಕ ಸಣ್ಣ ಪತ್ತಿನ ಸಹಕಾರಿ ಸಂಘಗಳು ಪ್ರಸಕ್ತ ವರ್ಷದ ಸಾಲ ನೀಡಲು ಹಣವಿಲ್ಲದೇ ತೊಂದರೆಯಲ್ಲಿ ಸಿಲುಕಿವೆ. ತಾಲೂಕಿನಲ್ಲಿ ಈಗಾಗಲೇ ಬೆಳೆಸಾಲ ನೀಡಬೇಕಿತ್ತು. ಆದರೆ, ಸಂಘಗಳಲ್ಲಿ ಹಣವಿಲ್ಲದೇ ಇದುವರೆಗೂ ಸಾಲ ನೀಡಿಲ್ಲ. ಕಳೆದ ಅವಧಿಯಲ್ಲಿ ತಾಲೂಕಿನಲ್ಲಿ ಒಟ್ಟು 4510 ರೈತರಿಗೆ 12 ಕೋಟಿ ಸಾಲ ವಿತರಿಸಲಾಗಿತ್ತು. ಹಿಂದಿನ ಕಾಂಗ್ರೆಸ್‌ ಸರ್ಕಾರ 50 ಸಾವಿರ ರೂ. ಸಾಲಮನ್ನಾ ಮಾಡಿತ್ತು. ಈ ಬಗ್ಗೆ ಸರ್ಕಾರಕ್ಕೆ ವರದಿ ಕೂಡಾ ಕಳುಹಿಸಲಾಗಿದೆ. ಅದರಲ್ಲಿ ಇದೀಗ 3728 ರೈತರ 9.60 ಕೋಟಿ ರೂ ಸಾಲಮನ್ನಾ ಹಣ ಬಿಡುಗಡೆಯಾಗಿದ್ದು, ಇನ್ನೂಳಿದ 782 ರೈತರ 2.40 ಕೋಟಿ ರೂ. ಬಾಕಿಯಿದೆ.
ಏಪ್ರೀಲ್‌ 2018ರಲ್ಲಿ 2.40 ಕೋಟಿ ರೂ. ಸಾಲಮನ್ನಾ ಮಾಡಲು ಸರ್ಕಾರಕ್ಕೆ ಪ್ರಸ್ತಾವನೆ ಹೋಗಿತ್ತು. ಆದರೆ, ಈ ಹಣವನ್ನು ಸರ್ಕಾರ ಬಿಡುಗಡೆ ಮಾಡಿಲ್ಲ. ಹೀಗಾಗಿ ಸಹಕಾರಿ ಸಂಘಗಳು ಪರಿತಪಿಸುತ್ತಿವೆ.
ಸಣ್ಣ ಹಾಗೂ ಮಧ್ಯಮ ವರ್ಗದ ರೈತರು ಸಾಲ ಸಿಗದೆ ಆರ್ಥಿಕವಾಗಿ ಸಮಸ್ಯೆ ಎದುರಿಸುತ್ತಿದ್ದಾರೆ. ಸರ್ಕಾರದಿಂದ ಸಹಕಾರಿ ಸಂಘಗಳಿಗೆ ವೇಳೆಗೆ ಸರಿಯಾಗಿ ಹಣ ಬಿಡುಗಡೆ ಆಗಿದ್ದರೆ ಈಗಾಗಲೇ ರೈತರಿಗೆ ಸಾಲ ವಿತರಿಸುವ ಪ್ರಕ್ರಿಯೇ ಪ್ರಾರಂಭವಾಗುತ್ತಿತ್ತು. ಆದರೆ, ಈ ಬಾರಿ ಜುಲೈ ತಿಂಗಳು ಪ್ರಾರಂಭವಾದರೂ ಬಹುತೇಕ ಸಂಘಗಳಲ್ಲಿ ಸಾಲ ವಿತರಣಾ ಪ್ರಕ್ರಿಯೆ ಆರಂಭವಾಗಿಲ್ಲ.
ಕೆಲವು ಸಹಕಾರಿ ಸಂಘಗಳಲ್ಲಿ ಸಾಲ ನೀಡಿದರೂ ರೈತರು ಪಡೆದ ಸಾಲದ ಅರ್ಧ ಹಣ ಅಥವಾ 50 ಸಾವಿರ ರೂ ತಮ್ಮ ಬಳಿ ಉಳಿಸಿಕೊಂಡು ಉಳಿದ ಹಣವನ್ನೂ ನೀಡುತ್ತಿವೆ. ಸರ್ಕಾರದಿಂದ ಕಳೆದ ಸಾಲಿನ ಸಾಲಮನ್ನಾದ ಹಣ ಜಮಾ ಆದ ಬಳಿಕ ನೀಡುವುದಾಗಿ ಹೇಳುತ್ತಿವೆ.
ಸರ್ಕಾರಕ್ಕೆ ಈಗಾಗಲೇ ಸಾಲಮನ್ನಾ ಆಗುವ ಮೊತ್ತದ ಬಗ್ಗೆ ಲಿಖಿತವಾಗಿ ಕಳಿಸಲಾಗಿದೆ. ಇನ್ನೂ ಕೆಲ ದಿನಗಳಲ್ಲಿ ಬರಬೇಕಾದ ಹಣ ಜಮೆ ಆಗಬಹುದು.
ಎಂ.ಸಿ. ಉಪ್ಪಿನ, ಉಪನಿಬಂಧಕರು. ಸವಣೂರು.
ಕಳೆದ ಬಾರಿ ಮನ್ನಾವಾದ ಹಣವನ್ನು ಮುರಿದುಕೊಂಡು ಸಹಕಾರಿ ಸಂಘಗಳು ಸಾಲ ನೀಡುತ್ತಿವೆ. ಇದರಿಂದಾಗಿ ಪೂರ್ಣ ಹಣ ಸಿಗದೆ ಕೃಷಿಕರು ತೊಂದರೆ ಅನುಭವಿಸುತ್ತಿದ್ದಾರೆ. ಕಳೆದ ಬಾರಿ ಮನ್ನಾ ಆಗಿದ್ದ ಹಣವನ್ನ ಆದಷ್ಟು ಶೀಘ್ರದಲ್ಲಿ ಸಹಕಾರಿ ಸಂಘಕ್ಕೆ ಜಮಾ ಮಾಡಬೇಕು. ಆಗ ರೈತರಿಗೆ ಸಾಲದ ಅಷ್ಟು ಮೊತ್ತ ಸಿಗುತ್ತದೆ.
ಜಗದೀಶ ಪಾಟೀಲ, ಕೃಷಿಕರು.

loading...