ಸಿಎಂ ಕುಮಾರಸ್ವಾಮಿಗೆ ಸವತಿ ಕಾಟ ಜಾಸ್ತಿಯಾಗಿದೆ:ಕತ್ತಿ

0
286
loading...

ಸಿಎಂ ಕುಮಾರಸ್ವಾಮಿಗೆ ಸವತಿ ಕಾಟ ಜಾಸ್ತಿಯಾಗಿದೆ:ಕತ್ತಿ

ಕನ್ನಡಮ್ಮ ಸುದ್ದಿ-ಹುಕ್ಕೇರಿ : ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಅವರಿಗೆ ಮಗ್ಗಲಲ್ಲಿರುವ ಸವತಿ ಕಾಟ ಜಾಸ್ತಿಯಾಗಿ ಕಣ್ಣೀರು ಹಾಕುತ್ತಿದ್ದಾರೆ ಎಂದು ಪರೋಕ್ಷವಾಗಿ ಕಾಂಗ್ರೆಸ್‍ನ್ನು ಛೇಡಿಸಿದರು.
ಪಟ್ಟಣದಲ್ಲಿ ಸೋಮವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಾಜ್ಯದ ಕಾಂಗ್ರೆಸ್-ಜೆಡಿಎಸ್ ಸಮ್ಮೀಶ್ರ ಸರ್ಕಾರದ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದರು.
ಈ ಹಿಂದೆ ಕಾಂಗ್ರೆಸ್‍ನೊಂದಿಗೆ ಜೆಡಿಎಸ್ ಸರ್ಕಾರ ರಚಿಸಿದ ವೇಳೆ ಜೆಡಿಎಸ್‍ಗೆ ಸಾಕಷ್ಟು ತೊಂದರೆಯಾದ ಅನುಭವವಿದೆ. ಆದರೂ, ಇದೀಗ ಮತ್ತೇ ಅದೇ ಕಾಂಗ್ರೆಸ್ ಜತೆ ಸಮ್ಮೀಶ್ರ ಸರ್ಕಾರ ರಚಿಸುವ ಮೂಲಕ ಕುಮಾರಸ್ವಾಮಿ ಹಳ್ಳಕ್ಕೆ ಬಿದ್ದಿದ್ದಾರೆ. ಸವತಿ ಕಾಟ ತಾಳದೇ ಸಾರ್ವಜನಿಕ ಸಮಾರಂಭಗಳಲ್ಲಿ ಸಿಎಂ ಕುಮಾರಸ್ವಾಮಿ ಕಣ್ಣೀರು ಹಾಕುತ್ತಿರುವುದು ಸಮಂಜವಲ್ಲ ಎಂದು ಅವರು ವ್ಯಂಗ್ಯವಾಡಿದರು.
ಸಿಎಂ ಕುಮಾರಸ್ವಾಮಿ ಕಣ್ಣೀರು ಹಾಕುವುದನ್ನು ಬಿಟ್ಟು ಅಭಿವೃದ್ದಿ ಕೆಲಸಗಳಿಗೆ ಆದ್ಯತೆ ನೀಡಬೇಕು. ರಾಜ್ಯದ ಜನರಿಗೆ ಕಣ್ಣೀರಿನ ಅವಶ್ಯಕತೆಯಿಲ್ಲ. ಈ ಹಿಂದೆ ರಾಜ್ಯದ ಯಾವುದೇ ಸಿಎಂಗಳು ಕಣ್ಣೀರು ಹಾಕಿರುವ ಉದಾಹರಣೆಯಿಲ್ಲ. ಸಮರ್ಪಕವಾಗಿ ಸರ್ಕಾರ ನಡೆಸಬೇಕು. ಇಲ್ಲದಿದ್ದರೆ ಸಿಎಂ ಸ್ಥಾನಕ್ಕೆ ಪದತ್ಯಾಗ ಮಾಡಿ ಮನೆಯಲ್ಲಿರಬೇಕು ಎಂದು ಅವರು ಸಲಹೆ ಮಾಡಿದರು.
ಬಜೆಟ್‍ನಲ್ಲಿ ಘೋಷಿಸಿದ ಸಾಲ ಮನ್ನಾ ಗೊಂದಲದಿಂದ ಕೂಡಿದೆ. ಇದರಲ್ಲಿ ಯಾವುದೇ ಸ್ಪಷ್ಟತೆ ಇಲ್ಲ. ಹಾಗಾಗಿ ರೈತರು ಈ ಸರ್ಕಾರವನ್ನು ನಂಬಬಾರದು. ರೈತರು ಕೃಷಿ ಚಟುವಟಿಕೆಗಳಿಗೆ ಸರ್ಕಾರದ ಮೇಲಿನ ಭರವಸೆಯನ್ನು ಬಿಟ್ಟು ತಮ್ಮ ಜೀವನವನ್ನು ತಾವೇ ರೂಪಿಸಿಕೊಳ್ಳಬೇಕು ಎಂದು ಅವರು ಕಿವಿಮಾತು ಹೇಳಿದರು.
ಕಳೆದ ಎರಡು ತಿಂಗಳ ಹಿಂದೆ ಅಧಿಕಾರಕ್ಕೆ ಬಂದಿರುವ ಕಾಂಗ್ರೆಸ್-ಜೆಡಿಎಸ್ ಸಮ್ಮೀಶ್ರ ಸರ್ಕಾರ ಇನ್ನೂ ಟೇಕಾಫ್ ಹಂತದಲ್ಲಿದೆ. ಜೆಡಿಎಸ್ ಪ್ರಣಾಳಿಕೆಯಂತೆ ಸಂಪೂರ್ಣ ಸಾಲ ಮನ್ನಾ ಆಗಿಲ್ಲ. ಈ ಮೂಲಕ ಸಿಎಂ ಕುಮಾರಸ್ವಾಮಿ ರೈತರಿಗೆ ಮೋಸ ಮಾಡಿದ್ದಾರೆ ಎಂದು ಅವರು ಆರೋಪಿಸಿದರು.

ಬಾಕ್ಸ್——
ಪಾಪುಗೆ ಇದೀಗ ಬುದ್ದಿ ಬಂದಿದೆ
ಉತ್ತರ ಕರ್ನಾಟಕಕ್ಕೆ ಕಳೆದ 10 ವರ್ಷಗಳಿಂದ ಪ್ರಾದೇಶಿಕ ಅಸಮತೋಲನವಾಗಿ ಅನ್ಯಾಯವಾಗುತ್ತಿದೆ. ಹಾಗಾಗಿ ಉತ್ತರ ಕರ್ನಾಟಕವನ್ನು ಪ್ರತ್ಯೇಕ ರಾಜ್ಯ ಮಾಡಬೇಕೆಂದು ಈ ಹಿಂದೆ ಧ್ವನಿ ಎತ್ತಿದೆ. ಈ ಕೂಗಿಗೆ ಇದೀಗ ಹಿರಿಯ ಹೋರಾಟಗಾರ ಪಾಟೀಲ ಪುಟ್ಟಪ್ಪ ಬೆಂಬಲ ವ್ಯಕ್ತಪಡಿಸಿರುವುದು ಸ್ವಾಗತಾರ್ಹ. ಆದರೆ, ಉಕ ಬಗ್ಗೆ ಪಾಪುಗೆ ಇದೀಗ ದೇವರು ಒಳ್ಳೆಯ ಬುದ್ದಿ ಕೊಟ್ಟಿದ್ದಾನೆ ಎಂದು ಶಾಸಕ ಉಮೇಶ ಕತ್ತಿ ಕುಟುಕಿದರು. ಉತ್ತರ ಕರ್ನಾಟಕಕ್ಕೆ ಪ್ರತ್ಯೇಕ ರಾಜ್ಯ ಬೇಕೆನ್ನುವುದರಲ್ಲಿ ನನ್ನ ಯಾವುದೇ ವೈಯಕ್ತಿಕ ಹಿತಾಸಕ್ತಿ ಇಲ್ಲ. ಈ ಭಾಗದ ಜನರು ಹೋರಾಟಕ್ಕೆ ಮುಂದಾದಲ್ಲಿ ತಾವು ಕೂಡ ಮುಂಚೂಣಿಯಲ್ಲಿ ನಿಲ್ಲುತ್ತೇನೆ ಎಂದು ಅವರು ಹೇಳಿದರು.

loading...