ಸುಳ್ಳು ಆರೋಪಗಳ ಮೂಲಕ ಜನರ ದಾರಿ ತಪ್ಪಿಸುತ್ತಿದ್ದಾರೆ: ನಿಂಗೋಜಿ

0
7
loading...

ಕನ್ನಡಮ್ಮ ಸುದ್ದಿ-ಹಾನಗಲ್ಲ: ವಿಧಾನ ಪರಿಷತ್‌ ಸದಸ್ಯ ಶ್ರೀನಿವಾಸ ಮಾನೆ ಹಾನಗಲ್ಲ ಪುರಸಭೆ ವ್ಯಾಪ್ತಿಯಲ್ಲಿ ನಡೆಯುತ್ತಿರುವ ಕಾಮಗಾರಿಗಳು ಹಾಗೂ ಪಟ್ಟಣದ ಸ್ವಚ್ಛತೆ ಪರಿಶೀಲಿಸುತ್ತಿರುವುದು ಹಾಲಿ ಪುರಸಭಾ ಅಧ್ಯಕ್ಷರು, ಉಪಾಧ್ಯಕ್ಷರಿಗೆ ಇರಿಸು ಮುರುಸು ತಂದಿದೆ ಎಂದು ಕಾಂಗ್ರೆಸ್‌ನ ಪುರಸಭಾ ಚುನಾವಣಾ ಸಂಚಾಲಕ ಅನಂತವಿಕಾಸ ನಿಂಗೋಜಿ ಲೇವಡಿ ಮಾಡಿದರು.
ಹಾನಗಲ್ಲಿನಲ್ಲಿ ಶುಕ್ರವಾರ ಸುದ್ದಿಗೋಷ್ಠಿ ನಡೆಸಿ ಅವರು ಮಾತನಾಡಿ, ಹಾನಗಲ್ಲ ಪುರಸಭೆ ಅಧ್ಯಕ್ಷ, ಉಪಾಧ್ಯಕ್ಷರು ಯಾರು ಎಂಬುದೇ ಇಲ್ಲಿನ ನಾಗರಿಕರಿಗೆ ಗೊತ್ತಿಲ್ಲ. ಈಗ ಚುನಾವಣೆ ಮುಂದಿಟ್ಟುಕೊಂಡು ಸುಳ್ಳು ಆರೋಪಗಳ ಮೂಲಕ ಜನರನ್ನು ದಾರಿ ತಪ್ಪಿಸುತ್ತಿರುವುದು ಹಾಸ್ಯಾಸ್ಪದ ಸಂಗತಿ ಎಂದು ಹೇಳಿದರು.
ಪುರಸಭೆ ಚುನಾವಣೆ ಮುಂದಿಟ್ಟುಕೊಂಡು ಸುಳ್ಳು ಆರೋಪಗಳ ಮೂಲಕ ಕಾಣಿಸಿಕೊಳ್ಳುತ್ತಿರುವ ಅಧ್ಯಕ್ಷ, ಉಪಾಧ್ಯಕ್ಷರಿಗೆ ಪುರಸಭೆ ಅಭಿವೃದ್ಧಿ ಬೇಕಾಗಿಲ್ಲ. ಕೇವಲ ಚುನಾವಣೆಗಾಗಿ ಪ್ರಚಾರ ಪಡೆಯುವುದು ಬೇಕಾಗಿದೆ. ಒಮ್ಮೆ ಕಾಮಗಾರಿಗೆ ಚಾಲನೆ ನೀಡಿದ ಸಂದರ್ಭದಲ್ಲಿ ಅಧ್ಯಕ್ಷ ಉಪಾಧ್ಯಕ್ಷರು ಸ್ವತಃ ಪಾಲ್ಗೊಂಡಿದ್ದು ಮತ್ತೊಮ್ಮೆ ಈಗ ಚಾಲನೆ ಮಾಡುತ್ತಿರುವುದು ಚುನಾವಣಾ ಪ್ರಚಾರದ ಚಾಲನೆ ಹೊರತು ಅಭಿವೃದ್ಧಿ ಚಾಲನೆಯಲ್ಲ ಎಂದು ಕಿಡಿಕಾರಿದರು.
ವಿಧಾನ ಪರಿಷತ್‌ ಸದಸ್ಯ ಶ್ರೀನಿವಾಸ ಮಾನೆ ಹಾನಗಲ್ಲ ಮತ ಕ್ಷೇತ್ರದಿಂದ ವಿಧಾನಸಭೆಗೆ ಸ್ಪರ್ಧಿಸಿ 74 ಸಾವಿರ ಮತ ಗಳಿಸಿದ್ದಾರೆ. ಅವರು ಹಾನಗಲ್ಲ ಕ್ಷೇತ್ರದಲ್ಲಿ ಅಭಿವೃದ್ಧಿ ಮಾಡುವ ಸದುದ್ದೇಶದಿಂದಲೇ ತಾಲೂಕು ಪಂಚಾಯತ ಸಭಾಭವನದಲ್ಲಿ ಜನಸಂಪರ್ಕ ಕಚೇರಿಯನ್ನು ಆರಂಭಿಸಿದ್ದು, ಇಡೀ ತಾಲೂಕಿನ ಅಭಿವೃದ್ಧಿಯ ಕನಸು ನನಸು ಮಾಡಲು ಮುಂದಾಗಿದ್ದಾರೆ. ತಾವು ಈ ಕ್ಷೇತ್ರದಿಂದ ಓಡಿ ಹೋಗುವುದಿಲ್ಲ ಎಂದು ಪ್ರತಿಪಕ್ಷಗಳಿಗೆ ತಿಳಿಸಿದಂತೆ ಇಲ್ಲಿಯೇ ಇದ್ದು ಸಾರ್ವಜನಿಕರ ಸೇವೆ ಮಾಡುತ್ತಾರೆ. ಇಂತಹ ವಿಧಾನ ಪರಿಷತ್‌ ಸದಸ್ಯರನ್ನು ಕಡೆಗಣಿಸಿ ಪುರಸಭೆ ಅಧ್ಯಕ್ಷೆ ಉಪಾಧ್ಯಕ್ಷರು ತಮ್ಮ ರಾಜಕೀಯ ಸ್ವಾರ್ಥಕ್ಕಾಗಿ ಸುಳ್ಳು ಹೇಳಿಕೆಗಳನ್ನು ನೀಡಿ ಜನರನ್ನು ದಾರಿ ತಪ್ಪಿಸುವುದು ಸರಿಯಲ್ಲ ಎಂದು ಹೇಳಿದರು.
ಸುದ್ದಿಗೋಷ್ಠಿಯಲ್ಲಿ ಪುರಸಭೆ ಮಾಜಿ ಅಧ್ಯಕ್ಷ ಯಲ್ಲಪ್ಪ ಕಿತ್ತೂರ, ಹಾಲಿ ಪುರಸಭೆ ಸದಸ್ಯರಾದ ಅಶೋಕ ಆರೇಗೊಪ್ಪ, ಮಖಬುಲ್‌ಅಹ್ಮದ ಸರ್ವಿಕೇರಿ, ಸಂತೋಷ ಸುಣಗಾರ, ಶಕೀಲಅಹ್ಮದ ಬಾಳೂರ, ಘನಶ್ಯಾಮ ದೇಶಪಾಂಡೆ, ನಗರಾಧ್ಯಕ್ಷ ಎಂ.ಕೆ.ಹುಬ್ಬಳ್ಳಿ, ಕಾರ್ಯದರ್ಶಿ ವಿದ್ಯಾಶಂಕರ ದೇಶಪಾಂಡೆ, ಬಸವರಾಜ ಹಾದಿಮನಿ, ರವಿ ಚಿಕ್ಕೇರಿ, ರವಿ ದೇಶಪಾಂಡೆ, ರಾಜೂ ಗುಡಿ, ಮಹೇಶ ಪವಾಡಿ, ದೀಪಕ ಕಲಾಲ ಇದ್ದರು. ಹಾನಗಲ್ಲ ಪಟ್ಟಣದಲ್ಲಿ ವಿಧಾನಸಭೆ ಚುನಾವಣೆ ಮೊದಲು ನಡೆದ ಕಾಮಗಾರಿಗಳ ಅಡಿಗಲ್ಲನ್ನು ಹಾಲಿ ಪುರಸಭೆ ಅಧ್ಯಕ್ಷ, ಉಪಾಧ್ಯಕ್ಷರು ಚುನಾವಣೆ ನಂತರ ಶಾಸಕ ಸಿ.ಎಂ.ಉದಾಸಿ ಆವರನ್ನು ಮುಂದಿಟ್ಟುಕೊಂಡು ಮರು ಚಾಲನೆ ನೀಡುತ್ತಿದ್ದಾರೆ. ಇದು ಯಾವ ಪುರುಷಾರ್ಥಕ್ಕಾಗಿ.
-ಅನಂತವಿಕಾಸ ನಿಂಗೋಜಿ, ಕಾಂಗ್ರೆಸ್‌ನ ಪುರಸಭಾ ಚುನಾವಣಾ ಸಂಚಾಲಕ.

loading...