ಸ್ವಸ್ಥ ಸಮಾಜ ನಿರ್ಮಾಣದ ಧರ್ಮಸ್ಥಳ ಸಂಸ್ಥೆಯ ಕಾರ್ಯ ಶ್ಲಾಘನೀಯ: ಪ್ರಕಾಶ ಶೆಟ್ಟಿ

0
9
loading...

ಕನ್ನಡಮ್ಮ ಸುದ್ದಿ-ದಾಂಡೇಲಿ: ಸ್ವಸ್ಥ ಸಮಾಜ ನಿರ್ಮಾಣದಲ್ಲಿ ಶ್ರೀ ಕ್ಷೇತ್ರ ಧರ್ಮಸ್ಥಳದ ಗ್ರಾಮಾಭಿವೃದ್ಧಿ ಯೋಜನೆಯ ಸೇವಾ ಕೈಂಕರ್ಯ ಶ್ಲಾಘನೀಯ. ಸ್ವಸಹಾಯ ಸಂಘಗಳ ಮೂಲಕ ಆರ್ಥಿಕ, ಸಾಮಾಜಿಕ ಹಾಗೂ ಶೈಕ್ಷಣಿಕ ಕ್ಷೇತ್ರಕ್ಕೆ ಅಮೂಲಾಗ್ರ ಕೊಡುಗೆ ನೀಡುತ್ತಿರುವ ಶ್ರೀ ಕ್ಷೇತ್ರ ಧರ್ಮಸ್ಥಳವು ತನ್ನ ಗ್ರಾಮಾಭಿವೃದ್ಧಿ ಸಂಸ್ಥೆಯ ಮೂಲಕ ಸಂಸಾರಕ್ಕೆ ಹಾಗೂ ಸಮಾಜದ ಆರ್ಥಿಕ ವ್ಯವಸ್ಥೆಗೆ ಮಾರಕವಾಗಿರುವ ಮದ್ಯಪಾನವನ್ನು ಹೊಡೆದುರುಳಿಸಲು ಕೈಗೊಂಡ ಮದ್ಯವರ್ಜನ ಶಿಬಿರ ದುಶ್ಚಟದಿಂದ ಬಸವಳಿದ ಸಂಸಾರದ ಕಣ್ಣೀರೊರೆಸುವ ಶ್ರೇಷ್ಟ ಕಾರ್ಯಕ್ರಮ ಎಂದು ಉದ್ಯಮಿ ಹಾಗೂ ನಗರದ ರೋಟರಿ ಕ್ಲಬ್‌ ಅಧ್ಯಕ್ಷ ಎಸ್‌.ಪ್ರಕಾಶ ಶೆಟ್ಟಿ ಹೇಳಿದರು.
ಅವರು ಶನಿವಾರ ನಗರದ ವೀರಭದ್ರೇಶ್ವರ ದೇವಸ್ಥಾನದ ಸಭಾಭವನದಲ್ಲಿ ಕ್ಷೇತ್ರ ಧ.ಗ್ರಾ.ಯೋಜನೆ, ಜನಜಾಗೃತಿ ವೇದಿಕೆ, ಮಧ್ಯವರ್ಜನ ವ್ಯವಸ್ಥಾಪನ ಸಮಿತಿ, ಬಸವ ವಿವಿದೊದ್ದೇಶಗಳ ಸಹಕಾರಿ ಸಂಘ, ರೋಟರಿ ಕ್ಲಬ್‌, ಸಹೇಲಿ ಟ್ರಸ್ಟ್‌, ಹೃದಯ ಸಂಗಮ ವೇದಿಕೆ, ವೀರಭದ್ರೇಶ್ವರ ದೇವಸ್ಥಾನ ಟ್ರಸ್ಟ್‌ ಕಮೀಟಿ, ಪ್ರಗತಿ ಬಂಧು ಒಕ್ಕೂಟ ಹಾಗೂ ವಿವಿಧ ಸಂಘ ಸಂಸ್ಥೆಗಳ ಸಂÀಯುಕ್ತಾಶ್ರಯದಲ್ಲಿ ನಡೆದ 1233 ನೇ ಮದ್ಯವರ್ಜನ ಶಿಬಿರವನ್ನು ಉದ್ಘಾಟಿಸಿ ಮಾತನಾಡುತ್ತಿದ್ದರು.
ಶ್ರೀ. ಕ್ಷೇತ್ರ ಧರ್ಮಸ್ಥಳದ ಧರ್ಮಾಧಿಕಾರಿಗಳು ಹಾಗೂ ನಡೆದಾಡುವ ಮಂಜುನಾಥರೆಂದೆ ಜನಖ್ಯಾತಿಯನ್ನು ಹೊಂದಿರುವ ಪೂಜ್ಯ ಡಾ: ವೀರೇಂದ್ರ ಹೆಗ್ಗಡೆೆಯವರು ತಮ್ಮ ಅನುಪಮವಾದ ಗ್ರಾಮಾಭಿವೃದ್ಧಿ ಯೋಜನೆಯ ಮೂಲಕ ಜನಜಾಗೃತಿ ಮೂಡಿಸುವ ಪರಿಣಾಮಕಾರಿ ಕೆಲಸ ಮಾಡುತ್ತಿರುವುದು ಈ ಭವ್ಯ ಸಮಾಜದ ಪರಮೋಚ್ಚ ಭಾಗ್ಯ. ಮದ್ಯಪಾನದಂತಹ ದುಶ್ಚಟಗಳ ನಿವಾರಣೆಗೆ ಇಂತಹ ಶಿಬಿರಗಳು ಪರಿಣಾಮಕಾರಿಯಾದ ಪಾತ್ರವನ್ನು ನಿರ್ವಹಿಸಬಲ್ಲುದು. ದುಶ್ಚಟದಿಂದ ದೂರವಾದಾಗ ಉತ್ತಮ ಸಮಾಜ ನಿರ್ಮಾಣ ಸಾಧ್ಯ. ಈ ನಿಟ್ಟಿನಲ್ಲಿ ಪರಿಶುದ್ದ ಮತ್ತು ಸುಸಂಸ್ಕೃತ ಸಮಾಜ ನಿರ್ಮಾಣದ ಗುರಿಯನ್ನಿಟ್ಟು ಸಮಾಜ ಸುಧಾರಣೆಗೆ ತನ್ನನ್ನು ತಾನು ಸಮರ್ಪಿಸಿಕೊಂಡ ಧರ್ಮಸ್ಥಳ ಸಂಸ್ಥೆಯ ಸಮಾಜಮುಖಿ ಕಾರ್ಯವನ್ನು ಬಿಚ್ಚು ಮನಸ್ಸಿನಿಂದ ಬೆಂಬಲಿಸಬೇಕು. ಶಿಬಿರದಲ್ಲಿ ಭಾಗವಹಿಸಿ ನವಜೀವನ ನಡೆಸಲು ಮುಂದಡಿಯಿಟ್ಟ ಶಿಬಿರಾರ್ಥಿಗಳು, ಆಗಿರುವುದೆಲ್ಲವನ್ನೂ ಮರೆತು ನವಜೀವನದೆಡೆಗೆ ಹೊಸ ದೃಷ್ಟಿಕೋನದೊಂದಿಗೆ ಹೊಸ ಹೆಜ್ಜೆಯಿಡಬೇಕೆಂದು ಕರೆ ನೀಡಿದರು. ಮುಖ್ಯ ಅತಿಥಿಗಳಾಗಿ ಭಾಗವಹಿಸಿ ಮಾತನಾಡಿದ ನಗರದ ಸಹೇಲಿ ಟ್ರಸ್ಟಿನ ಅಧ್ಯಕ್ಷೆ ಮೀನಾಕ್ಷಿ ಕನ್ಯಾಡಿಯವರು ಶ್ರೀ.ಕ್ಷೇತ್ರ ಧ.ಗ್ರಾ ಯೋಜನೆಯ ಮದ್ಯವರ್ಜನ ಶಿಬಿರಗಳು ಸಮಾಜದಲ್ಲಿ ಪರಿಣಾಮಕಾರಿಯಾಗಿ ಪಾತ್ರವನ್ನು ವಹಿಸಿದೆ. ಇಂತಹ ಶಿಬಿರಗಳು ಸಹಸ್ರಾರು ಕಟುಂಬಗಳ ಪಾಲಿಗೆ ಬೆಳಕಾಗಿವೆ. ದುಶ್ವಟಕ್ಕೆ ತಾನು ಬಲಿಯಾಗುವುದರ ಜೊತೆಗೆ ಸಂಸಾರದ ಸುಖವನ್ನು ಕಸಿದುಕೊಳ್ಳುವ ಇಂತಹ ದುಶ್ಚಟಗಳ ವಿರುದ್ದ ಮಾನವೀಯ ನೆಲೆಯಲ್ಲಿ ಜಾಗೃತಿ ಮೂಡಿಸುವ ಸ್ಮರಣೀಯವಾದ ಈ ಶಿಬಿರದ ಯಶಸ್ಸಿಗೆ ಎಲ್ಲರೂ ಕೈ ಜೋಡಿಸುವ ಅಗತ್ಯತೆ ಇದೆ ಎಂದರು. ಪಿಎಸೈ ಪುಟ್ಟೇಗೌಡ ಅವರು ಸಮಾಜದಲ್ಲಿ ಶಾಂತಿ ಸೌಹಾರ್ಧತೆ ಕಾಪಾಡುವಲ್ಲಿ ಇಂತಹ ಶಿಬಿರಗಳು ಪರಿಣಾಮಕಾರಿಯಾಗಲಿದೆ ಎಂದರು.
ವನವಾಸಿ ಕಲ್ಯಾಣ ಸಂಸ್ಥೆಯ ರವಿ ಲಕ್ಷ್ಮೇಶ್ವರ ಅವರು ಸಮಾಜ ಸುಧಾರಣೆಯ ಕೆಲಸವನ್ನು ಧರ್ಮಸ್ಥಳ ಸಂಸ್ಥೆ ಮಾಡುತ್ತಿರುವುದನ್ನು ಶ್ಲಾಘಿಸಿದರು. ಗ್ರಾಮಾಭಿವೃದ್ಧಿ ಯೋಜನೆಯ ಜಿಲ್ಲಾ ನಿರ್ದೇಶಕ ಶಂಕರ ಶೆಟ್ಟಿ ಅವರು ಗ್ರಾಮಾಭಿವೃದ್ಧಿ ಹಾಗೂ ಜನಜಾಗೃತಿ ವೇದಿಕೆಯ ದೂರದೃಷ್ಟಿ ಯೋಜನೆಗಳನ್ನು ವಿವರಿಸಿದರು. ಅಧ್ಯಕ್ಷತೆಯನ್ನು ವಹಿಸಿದ್ದ ನಗರ ಸಭೆಯ ಅಧ್ಯಕ್ಷ ಎನ್‌.ಜಿ.ಸಾಳುಂಕೆ ಅವರು ಧರ್ಮಸ್ಥಳ ಸಂಸ್ಥೆ ಸಮಾಜಮುಖಿ ಹಾಗೂ ಜನಮುಖಿ ಕಾರ್ಯಕ್ರಮಗಳು ನಗರದ ಅಭಿವೃದ್ಧಿಗೆ ಮುನ್ನುಡಿ ಬರೆದಿವೆ. ಆರೋಗ್ಯವಂತ ಸಮಾಜ ನಿರ್ಮಾಣದಲ್ಲಿ ಧರ್ಮಸ್ಥಳ ಸಂಸ್ಥೆಯ ಪಾತ್ರ ಸ್ಮರಣೀಯ ಎಂದು ಶಿಬಿರಕ್ಕೆ ಶುಭ ಕೋರಿದರು.
ವೇದಿಕೆಯಲ್ಲಿ ಗೇರು ಅಭಿವೃದ್ಧಿ ನಿಗಮದ ನಿರ್ದೇಶಕರು ಹಾಗೂ ಸಾಹಿತಿಗಳಾದ ಮಾಸ್ಕೇರಿ.ಎಂ.ಕೆ.ನಾಯಕ, ಮದ್ಯವರ್ಜನಾ ಶಿಬಿರದ ವ್ಯವಸ್ಥಾಪನಾ ಸಮಿತಿಯ ಅಧ್ಯಕ್ಷ ಶಂಕರ ಗಣಾಚಾರಿ, ಜನಜಾಗೃತಿ ವೇದಿಕೆಯ ಜಿಲ್ಲಾ ಸಮಿತಿ ಸದಸ್ಯ ದೇಮಾಣಿ ಶಿರೋಜಿ, ಗುತ್ತಿಗೆದಾರ ಚಂದ್ರು ಕೋಕಣಿ, ಗ್ರಾಮ ಪಂಚಾಯ್ತಿ ಸದಸ್ಯ ವಸಂತ ಗಾವಡೆ, ಹಿರಿಯ ಸಮಾಜ ಸೇವಕಿ ಲೀಲಾವತಿ ಕೋಳಚೆ, ಶ್ರೀ.ವೀರಭದ್ರೇಶ್ವರ ದೇವಸ್ಥಾನದ ಎಸ್‌.ಎಂ.ಪಾಟೀಲ ಮೊದಲಾದವರು ಉಪಸ್ಥಿತರಿದ್ದರು. ಶಿಬಿರಾಧಿಕಾರಿ ಮಾಧವ ಪ್ರಾಸ್ತಾವಿಕ ಮಾತನಾಡಿದರು. ಆದರ್ಶ ಶಾಲೆಯ ವಿದ್ಯಾರ್ಥಿನಿಯರು ಪ್ರಾರ್ಥನೆ ಹಾಡಿದರು. ಶ್ರೀ.ಕ್ಷೇತ್ರ ಧ.ಗ್ರಾ ಯೋಜನೆಯ ಯೋಜನಾಧಿಕಾರಿ ಹರೀಶ ಪಾವಾಸ್ಕರ ಸ್ವಾಗತಿಸಿದ ಕಾರ್ಯಕ್ರಮಕ್ಕೆ ಜಿಲ್ಲಾ ಜನಜಾಗೃತಿ ವೇದಿಕೆಯ ಸದಸ್ಯ ಶಂಕರ ಮುಂಗರವಾಡಿ ವಂದಿಸಿದರು. ಮೇಲ್ವಿಚಾರಕ ಲೋಕೇಶ ಗೌಡ ಕಾರ್ಯಕ್ರಮ ನಿರೂಪಿಸಿದರು. ಕಾರ್ಯಕ್ರಮದ ಯಶಸ್ಸಿಗೆ ಶ್ರೀ.ಕ್ಷೇತ್ರ ಧ.ಗ್ರಾ ಯೋಜನೆಯ ಅಧಿಕಾರಿಗಳು, ಸಿಬ್ಬಂದಿಗಳು ಸಹಕರಿಸಿದರು.

loading...