ಹಣ ಮರುಪಾವತಿಗೆ ಕ್ರಮ ಜರುಗಿಸಲು ಸೂಚನೆ

0
10
loading...

ಕನ್ನಡಮ್ಮ ಸುದ್ದಿ-ಗದಗ: ಎಲ್ಲರಿಗೂ ಮನೆ ಯೋಜನೆಯಡಿ 1425 ಕೋಟಿ ರೂ.ಗಳನ್ನು 2018ರ ಮಾರ್ಚ ತಿಂಗಳಲ್ಲಿ ಕೇಂದ್ರ ಸರ್ಕಾರ ರಾಜ್ಯ ಸರ್ಕಾರಕ್ಕೆ ಬಿಡುಗಡೆ ಮಾಡಿತ್ತು. ಜಿಲ್ಲೆಯ ಅರ್ಹ ಫಲಾನುಭವಿಗಳಿಗೆ ಈ ಹಣ ಬಿಡುಗಡೆ ಆಗದಿರುವ ದೂರು ಇದ್ದು ತಕ್ಷಣ ಸಂಬಂಧಿತ ಇಲಾಖೆ ಸಚಿವರಿಗೆ ಕ್ರಮ ಜರುಗಿಸಲು ಪತ್ರವನ್ನು ಬರೆಯಲು ಸಂಸದ ಶಿವಕುಮಾರ ಉದಾಸಿ ಸೂಚನೆ ನೀಡಿದರು.
ಗದಗ ಜಿಲ್ಲಾ ಪಂಚಾಯತಿ ಸಭಾಂಗಣದಲ್ಲಿ ಮಂಗಳವಾರ ಜರುಗಿದ ಗದಗ ಜಿಲ್ಲಾ ಅಭಿವೃದ್ಧಿ ಸಮನ್ವಯ ಮತ್ತು ಉಸ್ತುವಾರಿ(ದಿಶಾ) ಸಮಿತಿಯ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಜಿಲ್ಲಾಧಿಕಾರಿ ಮನೋಜ್‌ ಜೈನ್‌ ಅವರು ಮಾತನಾಡಿ, ಜಿಲ್ಲೆಯ ನಗರ, ಪುರ ಹಾಗೂ ಪ.ಪಂಗಳ ಅಯುಕ್ತ, ಮುಖ್ಯಾಧಿಕಾರಿಗಳ ಸಭೆಯನ್ನು ತಕ್ಷಣ ಕರೆದು ಎಲ್ಲರಿಗೂ ಮನೆ ಯೋಜನೆ ಸೇರಿದಂತೆ ಎಲ್ಲ ವಿಷಯಗಳನ್ನು ಕುಲಂಕೂಷವಾಗಿ ಪರಿಶೀಲಿಸಿ ಅರ್ಹ ಫಲಾನುಭವಿಗಳಿಗೆ ದೊರೆಯಬೇಕಾದ ಸಹಾಯಧನ ಸೌಲಭ್ಯ, ವಿವಿಧ ಯೋಜನೆಗಳಡಿ ಬ್ಯಾಂಕ್‌ಗಳಿಂದ ಸಾಲ ನೀಡಿಕೆ, ಲಿಂಕೇಜ್‌, ಫಲಾನುಭವಿಗಳಿಗೆ ಎರಡು ಬಾರಿ ಸೌಲಭ್ಯ ಮುಂತಾದ ಸಮಸ್ಯೆ, ವಿಷಯಗಳ ಕುರಿತು ಅಗತ್ಯದ ಕ್ರಮ ಜರುಗಿಸಿ ವರದಿ ನೀಡಲು ನಗರಾಭಿವೃದ್ಧಿ ಕೋಶದ ಯೋಜನಾ ನಿರ್ದೇಶಕ ರುದ್ರೇಶ ಅವರಿಗೆ ಸೂಚನೆ ನೀಡಿದರು.
ಜಿಲ್ಲೆಯ ಗ್ರಾಮೀಣ ಪ್ರದೇಶದಲ್ಲಿ ಪ್ರಧಾನ ಮಂತ್ರಿ ಆವಾಸ್‌ ಯೋಜನೆಯಡಿ 26,997 ಮನೆ ರಹಿತ, 10,864 ನಿವೇಶನ ರಹಿತ ಸೇರಿದಂತೆ ಒಟ್ಟು 37,861 ಫಲಾನುಭವಿಗಳನ್ನು ಸಮೀಕ್ಷೆ ಮೂಲಕ ಗುರುತಿಸಲಾಗಿದೆ. ಗದಗ ಗ್ರಾಮೀಣದಲ್ಲಿ 8,657, ಮುಂಡರಗಿ 5704, ನರಗುಂದ 2058, ರೋಣ 13,559 ಹಾಗೂ ಶಿರಹಟ್ಟಿ ಗ್ರಾಮೀಣ ಪ್ರದೇಶಗದಲ್ಲಿ 7,883 ಮನೆ, ನಿವೇಶನ ರಹಿತರನ್ನು ಗುರುತಿಸಲಾಗಿದೆ ಎಂದು ಜಿಲ್ಲಾ ಪಂಚಾಯತಿ ಉಪ ಕಾರ್ಯದರ್ಶಿ ಎಸ್‌.ಸಿ.ಮಹೇಶ ಮಾಹಿತಿ ನೀಡಿದರು.
ಜಿಲ್ಲೆಯ ನಗರ ಪ್ರದೇಶದಲ್ಲಿ ಹೌಸಿಂಗ್‌ ಫಾರ ಆಲ್‌ ಯೋಜನೆಯಡಿ ಗದಗ-ಬೆಟಗೇರಿ ನಗರ ಸಭೆ ವ್ಯಾಪ್ತಿಯಲ್ಲಿ 11,419, ಗಜೇಂದ್ರಗಡ 1,442, ಲಕ್ಷ್ಮೇಶ್ವರ 5,771, ಮುಂಡರಗಿ 3,926,ನರಗುಂದ 3,566, ರೋಣ 2045, ಮುಳಗುಂದ 1063, ನರೇಗಲ್ಲ 1085 ಹಾಗೂ ಶಿರಹಟ್ಟಿ ಪ.ಪಂಚಾಯತಿ ವ್ಯಾಪ್ತಿಯಲ್ಲಿ 1,279 ಸೇರಿದಂತೆ 31,596 ಫಲಾನುಭವಿಗಳನ್ನು ಗುರುತಿಸಲಾಗಿದೆ ಎಂದು ಸಭೆಗೆ ತಿಳಿಸಲಾಯಿತು.
ಮಹಾತ್ಮಾ ಗಾಂಧಿ ಉದ್ಯೋಗ ಯೋಜನೆಯಡಿ ಸಾಮಾಜಿಕ ಪರಿಶೋಧನೆ ಕಾರ್ಯ ನಿಗದಿತ ಅವಧಿಯಲಿ ಪೂರ್ಣಗೊಳ್ಳದಿದ್ದಲ್ಲಿ ಅನುದಾನ ಬಿಡುಗಡೆಗೆ ಸಮಸ್ಯೆ ಆಗುವದರಿಂದ ಗ್ರಾ.ಪಂ. ಅಥವಾ ಉದ್ಯೋಗ ಖಾತ್ರಿ ಯೋಜನೆ ಅನುದಾನದಡಿ ಯೋಜನೆ ಕೈಕೊಳ್ಳುವ ಅರಣ್ಯ ಇಲಾಖೆಯ ಸಾಮಾಜಿಕ ಅರಣ್ಯ ವಿಭಾಗವು ಸೇರಿದಂತೆ ಸಂಬಂಧಿತ ಇಲಾಖೆಗಳನ್ನು ಕಡ್ಡಾಯವಾಗಿ ಸಾಮಾಜಿಕ ಪರಿಶೋಧನೆಗೆ ಕಡತಗಳನ್ನು ಸಲ್ಲಿಸಲು ಸಂಸದ ಶಿವಕುಮಾರ ಉದಾಸಿ ಕಟ್ಟುನಿಟ್ಟಿನ ಸೂಚನೆ ನೀಡಿದರು.
ಉದ್ಯೋಗ ಖಾತರಿ ಯೋಜನೆಯಡಿ ಯಂತ್ರಗಳ ಬಳಕೆ, ವೇಳೆಗೆ ಸರಿಯಾಗಿ ಕೂಲಿ ಹಣ ಪಾವತಿ ಆಗದ, ಕೆಲವೆಡೆ ಆದ ಕೆಲಸಕ್ಕೆ ಎರಡು ಬಾರಿ ಹಣ ಪಾವತಿ, ಇನ್ನೂ ಕೆಲವೆಡೆ ಆಗದ ಕೆಲಸಕ್ಕೆ ಅನುದಾನ ವೆಚ್ಚವಾಗಿರುವ ದೂರುಗಳಿದ್ದು ಈ ಕುರಿತು ಸೂಕ್ತ ಪರಿಶೀಲನೆ ನಡೆಸಿ ಹಣ ಮರುಪಾವತಿಗೆ ಕ್ರಮ ಜರುಗಿಸಬೇಕು. ಪ್ರತಿಯೊಂದು ಗ್ರಾಮ ಪಂಚಾಯತ ವ್ಯಾಪ್ತಿಯಲ್ಲಿ ಜಾಬ ಕಾರ್ಡ ರಿಜಿಸ್ಟರ ಇಡುವುದಲ್ಲದೇ ಉದ್ಯೋಗ ಒದಗಿಸಿದ ಪ್ರತಿ ಜಾಬ್‌ ಕಾರ್ಡ ಮಾಹಿತಿಯನ್ನು ಕಾಲ ಕಾಲಕ್ಕೆ ಅದರಲ್ಲಿ ನಮೂದಿಸುವುದು ಕಡ್ಡಾಯವಾಗಿದೆ. ಇದು ಜಿಲ್ಲೆಯಲ್ಲಿ ಪಾಲಿಸದಿರುವ ಪ್ರಕರಣಗಳು ಇದ್ದು ಪ್ರತಿ ತಾಲೂಕು ಪಂಚಾಯತ ಕಾರ್ಯ ನಿರ್ವಾಹಕ ಅಧಿಕಾರಿಗಳು ಎಲ್ಲ ಗ್ರಾ.ಪಂ. ಯೋಜನಾಧಿಕಾರಿ ಸಭೆ ಜರುಗಿಸಿ ಕಡ್ಡಾಯವಾಗಿ ದಾಖಲೆ ಇಡಲು ಅವರಿಗೆ ಸೂಚಿಸಬೇಕು ಎಂದು ಸಂಸದರು ತಿಳಿಸಿದರು.
ಗದಗ ಜಿಲ್ಲೆಯ 122 ಗ್ರಾ.ಪಂ. ಗಳ ಪೈಕಿ 30 ಗ್ರಾ.ಪಂ.ಗಳಲ್ಲಿ 41.76 ಲಕ್ಷ ಹಣ ದುರುಪಯೋಗ ಆದ ಹಾಗೂ 3.82 ಕೋಟಿರೂ. ಆಕ್ಷೇಪಾರ್ಹ ವಿನಿಯೋಗದ ಕುರಿತು ಸೂಕ್ತ ಕ್ರಮ ಜರುಗಿಸಲಾಗುತ್ತಿದೆ. ಜಿಲ್ಲೆಯಲ್ಲಿ 38,635 ಕೌಟುಂಬಿಕ ಜಂಟಿ ಉದ್ಯೋಗ ಚೀಟಿಗಳನ್ನು ವಿಂಗಡಿಸಿ 1.75ಲಕ್ಷ ವೈಯಕ್ತಿಕ ಉದ್ಯೋಗ ಚೀಟಿ ಮಾಡಲಾಗಿದ್ದು. ಆಧಾರ ಆಧರಿಸಿ ಹಣ ಪಾವತಿಗೆ ಕ್ರಮ ಜರುಗಿಸಿದೆ. 2017-18ರ ಸಾಲಿನಲ್ಲಿ 88.31 ಕೋಟಿ ವೆಚ್ಚವಾಗಿದ್ದು 26.75 ಲಕ್ಷ ಮಾನವ ದಿನಗಳನ್ನು ಸರಜಿಸಲಾಗಿದೆ ಎಂದು ಜಿ.ಪಂ. ಉಪಕಾರ್ಯದರ್ಶಿ ಮಹೇಶ ತಿಳಿಸಿದರು.
ಸಭೆಯಲ್ಲಿ ಸಂಜೀವಿನಿ, ಪ್ರಧಾನ ಮಂತ್ರಿ ಫಸಲ ಬೀಮಾ ಕೃಷಿ ಸಿಂಚಾಯಿ, ರಾಷ್ಟ್ರೀಯ ತೋಟಗಾರಿಕೆ ಮಿಶನ್‌ ಮುಂತಾದ ಕೇಂದ್ರ ಪುರಸ್ಕೃತ ಯೋಜನೆಗಳ 2017-18ನೇ ಸಾಲಿನ ಹಾಗೂ 2018-19ನೇ ಸಲಿನ ಜೂನ ಅಂತ್ಯದವರೆಗೆ ಪರಿಶೀಲನೆಯನ್ನು ಸಂಸದ ಶಿವಕುಮಾರ ಉದಾಸಿ ನಡೆಸಿದರು.
ಸಭೆಯಲ್ಲಿ ಜಿಲ್ಲಾ ಪೋಲಿಸ ವರಿಷ್ಠಾಧಿಕಾರಿ ಕೆ.ಸಂತೋಷಬಾಬು, ಅಪರ ಜಿಲ್ಲಾಧಿಕಾರಿ ಶಿವಾನಂದ ಕರಾಳೆ, ಜಿಲ್ಲೆಯ ವಿವಿಧ ನಗರ, ಪುರ ಹಾಗೂ ಪಟ್ಟಣ ಪಂಚಾಯತಗಳ ಅಧ್ಯಕ್ಷರು ಆಯುಕ್ತರು, ಮುಖ್ಯಾಧಿಕಾರಿಗಳು ಇದ್ದರು.

loading...