ಹೆಸ್ಕಾಂ ಗ್ರಾಹಕರ ಕುಂದು-ಕೊರತೆ, ಸಂವಾದ ಸಭೆ

0
12
loading...

ಕನ್ನಡಮ್ಮ ಸುದ್ದಿ-ಹಳಿಯಾಳ: ವಿದ್ಯುತ್‌ ಬಳಕೆದಾರ ಗ್ರಾಹಕರ ಕುಂದು-ಕೊರತೆ ಮತ್ತು ಸಂವಾದ ಸಭೆಯು ಇಲ್ಲಿನ ಹೆಸ್ಕಾಂ ಕಚೇರಿಯಲ್ಲಿ ಶನಿವಾರ ನೆರವೇರಿತು.
ಹೆಸ್ಕಾಂ ಸಹಾಯಕ ಕಾರ್ಯನಿರ್ವಾಹಕ ಇಂಜಿನೀಯರ್‌ ರವೀಂದ್ರ ಮೆಟಗುಡ್ಡ ಅವರು ಸಭೆಯಲ್ಲಿ ಮಾತನಾಡುತ್ತಾ ಇಲಾಖೆಯು ಹಳಿಯಾಳ ಪಟ್ಟಣ ಮತ್ತು ಗ್ರಾಮೀಣ ಭಾಗದಲ್ಲಿ ನಿರಂತರವಾಗಿ ಗುಣಮಟ್ಟದ ವಿದ್ಯುತ್‌ ಸೇವೆ ನೀಡುವಲ್ಲಿ ನಿರಂತರವಾಗಿ ಕಾರ್ಯನಿರ್ವಹಿಸುತ್ತಿದೆ. ಈಗಾಗಲೇ ಅಕ್ರಮ-ಸಕ್ರಮ ಯೋಜನೆಯಡಿ ರೈತರ ಕೃಷಿ ಪಂಪಸೆಟ್‌ಗಳಿಗೆ ವಿದ್ಯುತ್‌ ಸಂಪರ್ಕವನ್ನು ಸಕ್ರಮೀಕರಣಗೊಳಿಸುವುದರಲ್ಲಿ ದಾಖಲೆ ಮಾಡಿದೆ.
ಕೇಂದ್ರ ಮತ್ತು ರಾಜ್ಯ ಸರ್ಕಾರದ ಯೋಜನೆಗಳಡಿ ಜನತೆಗೆ ಸೇವೆ ಸಲ್ಲಿಸಲಾಗುತ್ತಿದೆ. ದೀನದಯಾಳ ಉಪಾಧ್ಯಾಯ ವಿದ್ಯುದ್ದೀಕರಣ ಯೋಜನೆಯಡಿ ಮನೆಗಳಿಗೆ ವಿದ್ಯುತ್‌ ಸಂಪರ್ಕ, ಗಂಗಾಕಲ್ಯಾಣ ಯೋಜನೆಯಡಿ ನೀರಾವರಿ ಪಂಪಸೆಟ್‌ಗೆ ವಿದ್ಯುತ್‌ ವ್ಯವಸ್ಥೆ ಮಾಡಲಾಗಿದೆ. ಸರ್ವ ಸಿಬ್ಬಂದಿಗಳ ಸಕ್ರೀಯ ಕಾರ್ಯದಿಂದಾಗಿ ವಿದ್ಯುತ್‌ ಅಭಾವ ಉಂಟಾಗದಂತೆ ಮಾಡಲಾಗುತ್ತಿದ್ದು ಹಾಗೂ ದೂರುಗಳಿಗೆ ತಕ್ಷಣ ಸ್ಪಂದಿಸಲಾಗುತ್ತಿದೆ.
ಪ್ರಸಕ್ತ ಸಾಲಿನ ಮಳೆಗಾಲದ ಆರಂಭದಲ್ಲಿ ಗಾಳಿ-ಮಳೆ-ಸಿಡಿಲು ಮೊದಲಾದ ಪ್ರಾಕೃತಿಕ ವಿಕೋಪಗಳಿಂದಾಗಿ 75 ವಿದ್ಯುತ್‌ ಪರಿವರ್ತಕಗಳು ಹಾಗೂ 250 ವಿದ್ಯುತ್‌ ಕಂಬಗಳು ಹಾಳಾಗಿದ್ದವು. ಈ ಬಗ್ಗೆ ಸ್ಥಳೀಯ ಶಾಸಕರಾದ ಸಚಿವ ಆರ್‌.ವಿ. ದೇಶಪಾಂಡೆಯವರಿಗೆ ವಿಷಯ ತಿಳಿಸಿದ ಪರಿಣಾಮ ಸಚಿವರ ವಿಶೇಷ ಆಸಕ್ತಿಯ ಕಾರಣ ಕೇವಲ 24 ತಾಸಿನಲ್ಲಿ ಇಲಾಖೆಯಿಂದ 40 ವಿದ್ಯುತ್‌ ಪರಿವರ್ತಕ ಹಾಗೂ 500 ಕಂಬಗಳನ್ನು ಪಡೆಯಲಾಗಿದ್ದು ಹಾಳಾದ ಸ್ಥಳಗಳಲ್ಲಿ ವ್ಯವಸ್ಥೆ ಮಾಡಲಾಗಿದೆ ಎಂದು ತಿಳಿಸಿದರು.
ಇಲಾಖೆಯ ಶಿರಸಿ ವೃತ್ತದ ಅಧಿಕಾರಿಗಳು, ಸ್ಥಳೀಯ ನಾಗರಿಕರು ಈ ಸಂವಾದ ಹಾಗೂ ಕುಂದು-ಕೊರತೆ ಸಭೆಯಲ್ಲಿ ಪಾಲ್ಗೊಂಡಿದ್ದರು.

loading...