1084 ನೇ ದಿನಕ್ಕೆ ಕಾಲಿಟ್ಟ ರೈತರ ಧರಣಿ

0
10
loading...

ಕನ್ನಡಮ್ಮ ಸುದ್ದಿ-ನರಗುಂದ: ಮಹದಾಯಿ ಮಲಪ್ರಭೆ ನದಿ ಜೋಡಣೆ ಮತ್ತು ರೈತರ ಸಾಲಮನ್ನಾ ಹಾಗೂ ಇತರ ಬೇಡಿಕೆಗಳಿಗಾಗಿ ಆಗ್ರಹಿಸಿ ಜು. 2 ರಂದು ಮುಖ್ಯಮಂತ್ರಿಗಳನ್ನು ಬೆಂಗಳೂರಿನಲ್ಲಿ ಭೇಟಿಯಾಗಿ ಮನವಿ ಮಾಡಿಕೊಂಡ ಹಿನ್ನೆಲೆಯಲ್ಲಿ ಮುಖ್ಯಮಂತ್ರಿಗಳು ನಮ್ಮ ಎಲ್ಲ ಬೇಡಿಕೆ ಈಡೇರಿಸುವುದಾಗಿ ತಿಳಿಸಿದ್ದಾರೆ. ಈ ಭರವಸೆ ಹುಸಿಗೊಂಡರೆ ಈ ಧರಣಿ ಇನ್ನಷ್ಟು ಪರಿಣಾಮಕಾರಿಯಾಗಿ ಮುಂದುವರೆಯಲಿದೆ ಎಂದು ರೈತಸೇನಾ ಕರ್ನಾಟಕ ರಾಜ್ಯಾಧ್ಯಕ್ಷ ವಿರೇಶಸ್ವಾಮಿ ಸೊಬರದಮಠ ತಿಳಿಸಿದರು.
ಮಹದಾಯಿ ಮಲಪ್ರಭೆ ನದಿ ಜೋಡಣೆಗಾಗಿ ಆಗ್ರಹಿಸಿ ನರಗುಂದದಲ್ಲಿ ರೈತರು ನಡೆಸಿದ ಧರಣಿ ಮಂಗಳವಾರ 1084 ನೇ ದಿನಕ್ಕೆ ಕಾಲಿಟ್ಟಿದೆ. ಧರಣಿಯಲ್ಲಿ ಸಭೆ ನಡೆಸಿ ಅವರು ಮಾತನಾಡಿದರು.
ಮುಖ್ಯಮಂತ್ರಿ ಕುಮಾರಸ್ವಾಮಿಯವರನ್ನು ಜು. 2 ರಂದು ಭೇಟಿಯಾದ ಸಂದರ್ಭದಲ್ಲಿ ರೈತರ ಸಾಲ ಮನ್ನಾ ಮತ್ತು ಮಹದಾಯಿಗಾಗಿ ನಡೆದ ಇದುವರೆಗಿನ ಧರಣಿಯಲ್ಲಿ 11 ರೈತರು ಸಾವನ್ನಪ್ಪಿದ್ದು ಕೇವಲ ನಾಲ್ವರ ಕುಟುಂಬಗಳಿಗೆ ಮಾತ್ರ ಪರಿಹಾರ ದೊರೆತಿದೆ. ಇನ್ನುಳಿದ ರೈತರ ಕುಟುಂಬಗಳಿಗೆ ಪರಿಹಾರ ನೀಡಬೇಕೆಂದು ಹೇಳಿದರು.
ಮಹದಾಯಿ ನದಿ ನೀರಿನ ವಿವಾದದ ತೀರ್ಪು ಅಗಷ್ಟ ಒಳಗಾಗಿ ಬರಲಿದೆ. ಆದೇಶ ಬಂದ ನಂತರ ಕಾಮಗಾರಿ ವಿಳಂಬಗೊಳಿಸದೇ ಯೋಜನೆ ಕಾಮಗಾರಿ ಆರಂಭಗೊಳಿಸಬೇಕೆಂದು ಮುಖ್ಯಮಂತ್ರಿಗಳಿಗೆ ಮನವಿ ಮಾಡಲಾಯಿತು.
ನಮ್ಮ ಮನವಿಗೆ ಸ್ಪಂಧಿಸಿದ ಮುಖ್ಯಮಂತ್ರಿಗಳು ಮಹದಾಯಿಗಾಗಿ ಇಷ್ಟು ದಿನಗಳವರೆಗೆ ತಾವು ಧರಣಿ ಮುಂದುವರೆಸಿರುವುದು ರೈತರ ಜಾಗೃತಿಗೆ ಸಾಕ್ಷಿಯಾಗಿದೆ. ಅಗಷ್ಟದಲ್ಲಿ ಮಹದಾಯಿ ವಿವಾದ ತೀರ್ಪು ಬರಲಿದ್ದು ಕರ್ನಾಟಕದ ಪರ ತೀರ್ಪು ಬಂದಲ್ಲಿ ತಡಮಾಡದೇ ಯೋಜನೆಯನ್ನು ತ್ವರಿತಗತಿಯಲ್ಲಿ ಆರಂಭಿಸಲಾಗುವುದು. ತೀರ್ಪು ಒಂದುವೇಳೆ ಕರ್ನಾಟಕಕ್ಕೆ ವ್ಯತರಿಕ್ತವಾದರೆ ಸುಪ್ರೀಂ ಕೋರ್ಟ್‌ಗೆ ಪುನಹ ತೀರ್ಪು ಪರಿಶೀಲನೆಗಾಗಿ ಅರ್ಜಿ ಹಾಕಲಾಗುವುದು. ಬೆಂಬಲ ಬೆಲೆಯಲ್ಲಿ ರೈತರ ಉತ್ಪನ್ನಗಳನ್ನು ಖರೀದಿಸಲು ಎಲ್ಲ ಅವಕಾಶ ನೀಡಲಾಗುವುದು. ರೈತರು ಮಕ್ಕಳ ಉನ್ನತ ಶಿಕ್ಷಣಕ್ಕಾಗಿ ಮಾಡಿದ ಸಾಲವನ್ನು ಸಹ ಮನ್ನಾಮಾಡುವ ಆಲೋಚನೆ ಇದೆ. ಇದನ್ನು ಪರಿಶೀಲಿಸಿ ಕ್ರಮಕೈಗೊಳ್ಳಲಾಗುವುದು ಎಂದು ತಿಳಿಸಿದ್ದಾರೆ.
ಈ ಎಲ್ಲ ಬೇಡಿಕೆಗಳಿಗೆ ನೀಡಿದ ಭರವಸೆಯನ್ನು ಮುಖ್ಯಮಂತ್ರಿ ಈಡೇರಿಸಬೇಕೆಂದು ಸೊಬರದಮಠ ಸಭೆಯಲ್ಲಿ ಆಗ್ರಹಿಸಿದರು.
ಎಸ್‌.ಬಿ. ಜೋಗಣ್ಣವರ, ಮಹದಾಯಿ ಮಲಪ್ರಭೆ ಹೊರಾಟ ಸಮಿತಿಯ ತಾಲೂಕು ಘಟಕದ ಅಧ್ಯಕ್ಷ ಈರಬಸಪ್ಪ ಹೂಗಾರ, ಎ.ಪಿ. ಪಾಟೀಲ, ರಿಯಾಜ್‌ ಪಠಾಣ, ರೈತ ಸೇನಾ ಕರ್ನಾಟಕ ತಾಲೂಕು ಘಟಕದ ಅದ್ಯಕ್ಷ ಪರಶುರಾಮ ಜಂಬಗಿ, ಬಾಬು ಕುಂಬಾರ, ಚನಬಸಯ್ಯ ಕಗದಾಳ, ರಾಯವ್ವ ಕಟಗಿ, ಕಾಶವ್ವ ಉಳ್ಳಾಗಡ್ಡಿ, ಬಸವ್ವ ಕುಂಬಾರ, ಜೀಜಾಬಾಯಿ ಸಾಳುಂಕೆ, ಬಸವ್ವ ಮಾನೆ, ಅರ್ಜುನ ಮಾನೆ ಅನೇಕ ರೈತ ಮುಖಂಡರು ಉಪಸ್ಥಿತರಿದ್ದರು.

loading...