1099 ನೇ ದಿನಕ್ಕೆ ಕಾಲಿಟ್ಟ ರೈತರ ಧರಣಿ: ಶ್ರೀಗಳ ಬೆಂಬಲ

0
26
loading...

ಕನ್ನಡಮ್ಮ ಸುದ್ದಿ-ನರಗುಂದ: ನೀರಿಗಾಗಿ ಇಷ್ಟೊಂದು ದಿನಗಳ ಕಾಲ ಹೊರಾಟ ಮಾಡುವ ಈ ನಾಡಿನ ರೈತರಿಗೆ ರಾಜಕಾರಣಿಗಳು ಯಾವ ಪರಿಹಾರ ನೀಡಿದ್ದಾರೆ. ರಾಜಕೀಯ ಬೇಳೆ ಬೆಯಿಸಿಕೊಳ್ಳಲು ರೈತರು ರಾಜಕಾರಣಿಗಳಿಗೆ ಬೇಕು. ಆದರೆ ಅವರ ಕಷ್ಟಗಳನ್ನು ಅರಿಯಲು ಇಂದಿಗೂ ರಾಜಕಾರಣಿಗಳು ಸಿದ್ಧವಿಲ್ಲವೆಂದಾದರೆ ರಾಜೀನಾಮೆ ನೀಡಿ ಮನೆಯಲ್ಲಿ ವಿಶ್ರಾಂತಿ ಪಡೆಯುವುದು ಉತ್ತಮವೆಂದು ಶಿರಕೋಳ ಹಿರೇಮಠದ ಗುರುಸಿದ್ದೇಶ್ವರ ಸ್ವಾಮೀಜಿ ಹೇಳಿದರು.
ಮಹದಾಯಿ ಮಲಪ್ರಭೆ ನದಿ ಜೋಡಣೆಗೆ ಆಗ್ರಹಿಸಿ ನರಗುಂದದಲ್ಲಿ ನಡೆದ ರೈತರ ಧರಣಿ ಬುಧವಾರಕ್ಕೆ 1099 ನೇ ದಿನ ತಲುಪಿದ್ದು, ಧರಣಿಯಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ರೈತರು ತಮ್ಮ ಬೇಡಿಕೆಗಳಿಗಾಗಿ ಆಗ್ರಹಿಸಿ ಧರಣಿ ನಡೆಸಿದ್ದರಲ್ಲಿ ತಪ್ಪೇನಿಲ್ಲ. ಆದರೆ ರಾಜಕೀಯ ದಾಳಗಳನ್ನು ಹಿಡಿತದಲ್ಲಿಟ್ಟುಕೊಂಡ ರಾಜಕೀಯದವರು ರೈತರ ಕಷ್ಟಗಳ ಕುರಿತು ಆತ್ಮಾವಲೋಕನ ಮಾಡಿಕೊಳ್ಳಬೇಕು. ರಾಷ್ಟ್ರಪತಿಗಳಲ್ಲಿ ಮಹದಾಯಿ ನೀರು ನೀಡಿ ಅಥವಾ ನಮಗೆ ದಯಾಮರಣ ದಯಪಾಲಿಸಿ ಎಂದು ರೈತರು ಬೇಡಿಕೊಳ್ಳುವುದರಲ್ಲಿ ತಪ್ಪೇನಿಲ್ಲ. ಈ ಧರಣಿಗೆ ನಾವು ಸಂಪೂರ್ಣ ಬೆಂಬಲ ನೀಡಿದ್ದೇವೆ. ರಾಷ್ಟ್ರಪತಿಗಳಿಗೆ ದಯಾಮರಣ ದಯಪಾಲಿಸಿ ಎಂದು ತಾವು ಸಹ ಅರ್ಜಿ ಹಾಕಿಕೊಂಡಿರುವುದಾಗಿ ತಿಳಿಸಿದರು.
ಬ್ರಿಟಿಷರ ದಾಸ್ಯಸಂಕೋಲೆಯಿಂದ ಭಾರತೀಯರನ್ನು ಮುಕ್ತಗೊಳಿಸಲು ಶಾಂತಿ ಮತ್ತು ಕೆಚ್ಚೆದೆಯ ಹೋರಾಟ ಮುಂದುವರೆಸಿ ಗಾಂಧಿಜಿ ದೇಶಕ್ಕೆ ಸ್ವಾತಂತ್ರ್ಯ ತಂದು ಕೊಟ್ಟರು. ಆದರೆ ಮುಂದೆ ನಮ್ಮನ್ನು ಆಳುವವರೇ ನಮ್ಮನ್ನು ಹೇಯಮಟ್ಟಕ್ಕೆ ಕಾಣುವಂತ ಸ್ಥಿತಿ ನಿರ್ಮಾಣವಾಗಿದೆ. ಬ್ರಿಟಿಷರಿಗಿಂತ ನಮ್ಮನ್ನು ಆಳುವ ಇಲ್ಲಿಯ ರಾಜಕೀಯ ಪ್ರತಿನಿಧಿಗಳು ಹೆಚ್ಚು ಕೆಟ್ಟವರಾಗಿದ್ದಾರೆಂಬುದಕ್ಕೆ ಮಹದಾಯಿಗಾಗಿ ರೈತರು ಇಲ್ಲಿ ನಡೆಸಿದ ಧರಣಿಯೆ ಸಾಕ್ಷಿಯಾಗಿದೆ. ಉತ್ತರ ಕರ್ನಾಟಕಕ್ಕೆ ಬರಬೇಕಾದ ಮಹದಾಯಿ ಪಾಲನ್ನು ಕೊಡಿಸಲು ಇಷ್ಟೊಂದು ರಾಜಕೀಯ ತಂತ್ರಗಾರಿಕೆ ಬೇಕೆ ಎಂದು ಪ್ರಶ್ನಿಸಿದ ಶ್ರೀಗಳು, ಸ್ವಾತಂತ್ರಕ್ಕಾಗಿ ಅಂದು ಬ್ರಿಟಿಷರ ವಿರುದ್ದ ಹೋರಾಟ ನಡೆಯಿತು. ನಮ್ಮ ನೆಲದಲ್ಲಿಯೇ ನಮ್ಮ ಬೇಡಿಕೆ ಈಡೇರಿಲ್ಲವೆಂದು ನಮ್ಮ ರಾಜಕೀಯ ಪ್ರತಿನಿಧಿಗಳ ಮೇಲೆ ರೈತರಿಂದ ನರಗುಂದ ಬಂಡಾಯ ಎಂಬುದು 1980 ರಲ್ಲಿ ನಡೆಯಿತು. ನಮ್ಮ ರೈತರಿಗೆ ಬೇಕಾದ ಸೌಕರ್ಯಗಳು ಒದಗಿಸದೇ ಹೋದಲ್ಲಿ ಮುಂದಿನ ದಿನಗಳಲ್ಲಿ ಇನ್ನೊಂದು ನರಗುಂದ ಬಂಡಾಯವಾಗಲಿದೆ ಎನ್ನುವುದನ್ನು ರಾಜಕಾರಣಿಗಳು ನೆನಪಿನಲ್ಲಿಟ್ಟುಕೊಳ್ಳಬೇಕೆಂದು ಎಚ್ಚರಿಸಿದರು.
ರೈತಸೇನಾ ಕರ್ನಾಟಕ ರಾಜ್ಯಾಧ್ಯಕ್ಷ ವಿರೇಶಸ್ವಾಮಿ ಸೊಬರದಮಠ, ಜಿಲ್ಲಾ ರೈತ ಸಂಘದ ಉಪಾಧ್ಯಕ್ಷ ಮಹದೇವಗೌಡ ಪಾಟೀಲ, ಮುತ್ತನಗೌಡ ಚೌಡರಡ್ಡಿ ಮಾತನಾಡಿದರು.
ಧರಣಿಯಲ್ಲಿ ಮಹದಾಯಿ ಮಲಪ್ರಭಾ ಹೋರಾಟ ಸಮಿತಿ ತಾಲೂಕು ಅಧ್ಯಕ್ಷ ಈರಬಸಪ್ಪ ಹೂಗಾರ, ಅಡಿವೆಪ್ಪ ಕೋರಿ, ಸುಬಾಷ್ ಗಿರಿಯಣ್ಣವರ, ರೈತಸೇನಾ ಕರ್ನಾಟಕ ತಾಲೂಕ ಘಟಕದ ಅದ್ಯಕ್ಷ ಪರಶುರಾಮ ಜಂಬಗಿ, ಎಸ್.ಬಿ. ಜೋಗಣ್ಣವರ, ಜಗನಾಥ ಮುಧೋಳೆ, ಈರಣ್ಣ ಗಡಗಿಶೆಟ್ಟರ, ವೆಂಕಪ್ಪ ಹುಜರತ್ತಿ, ಹನುಮಂತ ಕಿರೇಸೂರ, ಮಾರುತಿ ಯಾದವ, ಬಸವ್ವ ನರಗುಂದ, ಶಾಂತವ್ವ ಬೂಸರಡ್ಡಿ, ಚಿನ್ನವ್ವ ರಡೇರ, ಕಾಳವ್ವ ಛಬ್ಬಿ, ಮಾಬೂಬಿ ಕೆರೂರ, ಶಿದ್ಲಿಂಗವ್ವ ಚೆಲುವಣ್ಣವರ ಅನೇಕರು ಉಪಸ್ಥಿತರಿದ್ದರು.

loading...