3 ವರ್ಷ ಪೂರೈಸಿದ ರೈತರ ಧರಣಿ

0
11
loading...

ಕನ್ನಡಮ್ಮ ಸುದ್ದಿ-ನರಗುಂದ: ಮಹದಾಯಿ ಮಲಪ್ರಭೆ ನದಿ ಜೋಡಣೆಗೆ ಆಗ್ರಹಿಸಿ ರೈತರು ನಡೆಸಿದ ಧರಣಿ ಸೋಮವಾರಕ್ಕೆ ಬರೋಬ್ಬರಿ ಮೂರು ವರ್ಷ ಕಳೆದಿವೆ. ಆದರೆ ಬೇಡಿಕೆಯ ಪರಿಹಾರ ಮಾತ್ರ ಇನ್ನು ಯಾವುದೇ ಹಂತ ತಲುಪದಿರುವುದರಿಂದ ಉತ್ತರ ಕರ್ನಾಟಕದ ಈ ಭಾಗದ ರೈತರಿಗೆ ವರದಾನವಾಗಬೇಕಿರುವ ಮಹದಾಯಿ ಮಾತ್ರ ತನ್ನ ಕೃಪಾಕಟಾಕ್ಷ ಇನ್ನೂ ಬಿರದಿರುವುದರಿಂದ ರೈತರು ಸೋತು ಸುಣ್ಣವಾಗಿದ್ದಾರೆ.
ಆದರೂ ಗೆಲ್ಲಬೇಕೆಂಬ ಛಲ ಇಲ್ಲಿಯ ರೈತರಲ್ಲಿ ಇದೆ. ಮೂರು ವರ್ಷದ ಅವಧಿಯಲ್ಲಿ ಕೇಂದ್ರ ಮತ್ತು ರಾಜ್ಯ ಸರ್ಕಾರದ ಜೊತೆ ಮಾತನಾಡಿದ್ದು, ಅಯ್ತು. ಇದಕ್ಕಾಗಿ ಸರ್ವಪಕ್ಷಗಳ ಸಭೆಗೆ ಹೋಗಿ ಬಂದದ್ದಾಯಿತು. ಇಷ್ಟೆಲ್ಲ ಛಲದೊಂದಿಗೆ ಇಳಿದ ರೈತರ ಇಲ್ಲಿಯ ಧರಣಿ ಮಾತ್ರ ಯಥಾ ಪ್ರಕಾರ ಮುನ್ನಡೆದು ಐತಿಹಾಸಿಕ ದಾಖಲೆ ನಿರ್ಮಿಸಿದೆ.
ಧರಣಿಗೆ ಮೂರು ವರ್ಷಗಳು ಸೋಮವಾರಕ್ಕೆ ಪೂರ್ಣಗೊಂಡ ಪರಿಣಾಮ ಹೆಚ್ಚಿನ ಸಂಖ್ಯೆಯಲ್ಲಿ ಈ ಧರಣಿಗೆ ರೈತರು ಪಾಲ್ಗೊಳುವ ನೀರಿಕ್ಷೆ ಇಡಲಾಗಿತ್ತು. ಆದರೆ ಧರಣಿಯಲ್ಲಿ ಸುಮಾರು 200 ರೈತರು, ಮಹಿಳಾ ರೈತರು ಕಂಡು ಬಂದರು. ಮದ್ಯಾಹ್ನದ ಹೊತ್ತಿಗೆ ಪಂಚಗ್ರಹ ಗುಡ್ಡದ ಸಿದ್ದಲಿಂಗ ಶಿವಾಚಾರ್ಯರು, ಪತ್ರಿವನಮಠದ ಗುರುಸಿದ್ದಶಿವಯೋಗಿ ಶಿವಾಚಾರ್ಯರು ಹಾಗೂ ವಿರಕ್ತಮಠದ ಶಿವಕುಮಾರ ಸ್ವಾಮಿಗಳು ಆಗಮಿಸಿದರು. ಇದಕ್ಕೂ ಮೊದಲೇ ಬ್ಯಾಹಟ್ಟಿ ಹಿರೇಮಠದ ಮರಳು ಸಿದ್ದೇಶ್ವರ ಶಿವಾಚಾರ್ಯ ಸ್ವಾಮಿಗಳು ಸಭೆಯಲ್ಲಿ ಪಾಲ್ಗೊಂಡಿದ್ದರು. ಧರಣಿಯಲ್ಲಿ ಭಾಗಿಯಾಗಿದ್ದ ರೈತರು ಮಹದಾಯಿಗಾಗಿ ನೀಡಿದ್ದ ಮನವಿಯ ಕುರಿತು ರಾಷ್ಟ್ರಪತಿಗಳು ಮೀನಮೇಷಮಾಡುತ್ತಿರುವುದರಿಂದ ನಮ್ಮ ಬೇಡಿಕೆಯಾದ ದಯಾಮರಣವನ್ನಾದರೂ ದಯಪಾಲಿಸಿ ಎಂದು ಒತ್ತಾಯಿಸಿ ಅಂಚೆ ಮನವಿಯನ್ನು ರಾಷ್ಟ್ರಪತಿಗಳಿಗೆ ಬರೆದು ಅಂಚೆ ಬಾಕ್ಸಿಗೆ ಹಾಕುವ ಕಾರ್ಯ ನಡೆಸಿದರು.
ವೈದ್ಯರ ಸಂಘದ ರಾಜ್ಯಾಧ್ಯಕ್ಷ ಡಾ ರವೀಂದ್ರ ಎಚ್‌.ಎನ್‌. ಮಾತನಾಡಿ, ಚುನಾವಣೆ ಸಂದರ್ಭದಲ್ಲಿ ರೈತರು ರಾಜಕಾರಣಿಗಳಿಗೆ ಅತೀ ಪ್ರಮುಖವಾಗುತ್ತಾರೆ. ಆದರೆ ಚುನಾವಣೆ ನಂತರ ಅವರನ್ನು ಮಾತನಾಡಿಸಲು ಹಿಂಜರಿಯುವ ರಾಜಕಾರಣಿಗಳ ವರ್ತನೆ ಅಣುಕು ಮಾಡುವಂತಹುದ್ದಾಗಿದೆ. ಅಣಕು ಪ್ರಜಾಪ್ರಭುತ್ವವೆಂದೇ ಇದನ್ನು ನಾವೆಲ್ಲ ಕರೆಯಬೇಕಾಗಿದೆ. ಪ್ರಧಾನಿಗಳು ಒಕ್ಕೂಟದ ಅದ್ಯಕ್ಷರಾಗಿದ್ದರೂ ಕೂಡಾ ಮಹದಾಯಿ ಸಮಸ್ಯೆ ಪರಿಹರಿಸಲು ಇಂದಿಗೂ ಅವರಿಂದಾಗಿಲ್ಲ. ಅವರು ಮನಸ್ಸು ಮಾಡಿ ಮೂರು ರಾಜ್ಯದ ಮುಖ್ಯಮಂತ್ರಿಗಳನ್ನು ಕರೆಯಿಸಿ ಮಾತುಕತೆಯ ಮೂಲಕ ಈ ಸಮಸ್ಯೆಯನ್ನು ಐದು ನಿಮಿಷದಲ್ಲಿ ಪರಿಹರಿಸಬೇಕಾಗಬಹುದಾಗಿತ್ತು. ಆದರೆ ರಾಜಕೀಯ ದಾಳದಲ್ಲಿ ಮಹದಾಯಿ ವಿವಾದ ಸೃಷ್ಟಿಮಾಡಿ ಎಲ್ಲ ರಾಜಕೀಯ ಪಕ್ಷಗಳು ರೈತರ ಜೊತೆ ಚೆಲ್ಲಾಟವಾಡುವುದು ಈ ನಾಡಿನ ದುರ್ದೈವವೆಂದು ಅವರು ಅಸಮಾಧಾನ ವ್ಯಕ್ತಪಡಿಸಿದರು.
ರೈತರ ನೋವುಗಳನ್ನು ಜನಪ್ರತಿನಿಧಿಗಳು ಕಂಡು ಕಾಣದಂತೆ ಇರುವುದು ಘೋರ ಅಪರಾದವಾಗಿದೆ. ಈ ನೋವು ಅವರನ್ನು ಸುಮ್ಮನೇ ಬಿಡುವುದಿಲ್ಲ, ಸರ್ಕಾರ ನಡೆಸುವ ಜನಪ್ರತಿನಿಧಿಗಳು ಚರಂಡಿಯಲ್ಲಿ ಬಿದ್ದು ಸಾವನ್ನಪ್ಪುವ ಘೋರ ಶಾಪಕ್ಕೆ ತುತ್ತಾಗುತ್ತಾರೆ. ರೈತರ ನೀರಿನ ಬೇಡಿಕೆಗಳಿಗಾಗಿ ಎಲ್ಲ ಶಾಸಕರು ಸಂಸದರನ್ನು ಆಗ್ರಹಿಸಿ ಅವರ ಮೇಲೆ ಒತ್ತಡ ಹಾಕುವಂತಹ ಕಾರ್ಯಮಾಡಬೇಕೆಂದು ಆಗ್ರಹಿಸಿದ ಡಾ. ರವೀಂದ್ರ, ರೈತರು ಛಲದಿಂದ ಈ ಧರಣಿ ನಡೆಸಿದ್ದಾರೆ. ರೈತರು ಎಂದಿಗೂ ಕಳೆಗುಂದದೇ ಮತ್ತು ಆತ್ಮಹತ್ಯೆಯಂತಹ ಘೋರ ದುರಂತಕ್ಕೆ ಮುಂದಾಗದೇ ಬೇಡಿಕೆಗಳಿಗೆ ಧರಣಿ ಮುಂದುವರೆಸಿ ಎಂದು ಮನವಿ ಮಾಡಿಕೊಂಡರು. ಸಾರ್ವಜನಿಕ ಹಿತಾಸಕ್ತಿಯ ಅರ್ಜಿಯನ್ನು ಸುಪ್ರೀಂ ಕೋರ್ಟಿಗೆ ಹಾಕಲಾಗಿದೆ. ಮುಂದೆ ಕಾನೂನಾತ್ಮಕ ಹೋರಾಟ ನಡೆಸಿ ನಿಮಗೆ ಇದರಲ್ಲಿ ಯಶಸ್ಸುಕಾಣಲಿದೆ ಎಂದು ರೈತರಲ್ಲಿ ಬಲ ತುಂಬಿದರು.
ರೈತಸೇನಾ ಕರ್ನಾಟಕ ರಾಜ್ಯಧ್ಯಕ್ಷ ವಿರೇಶಸ್ವಾಮಿ ಸೊಬರದಮಠ, ಬ್ಯಾಹಟ್ಟಿಯ ಮರುಳ ಸಿದ್ದಲಿಂಗ ಶಿವಾಚಾರ್ಯರು, ಸಿದ್ದಲಿಂಗ ಶಿಚಾಚಾರ್ಯರು, ಗುರುಸಿದ್ದಶಿವಯೋಗಿ ಶಿವಾಚಾರ್ಯರು ಮಾತನಾಡಿದರು.
ಶರ್ಟ,ಪ್ಯಾಂಟ ಮೇಲೆ ಮಹದಾಯಿ ಕುರಿತು ಜಾಗೃತಾ ಬರಹಗಳನ್ನು ಬರೆಸಿಕೊಂಡು ಧರಣಿಯಲ್ಲಿ ಪಾಲ್ಗೊಂಡಿದ್ದ ಕರಕೀಕಟ್ಟಿಯ ಮುತ್ತಣ ತೀರ್ಲಾಪೂರ ಧರಣಿಯಲ್ಲಿ ಅಲ್ಲಲ್ಲಿ ಕುಳಿತುಕೊಂಡ ರೈತರ ಬಳಿ ಲವಲವಿಕೆಯಿಂದ ಬಂದು ಮಹದಾಯಿ ಕುರಿತು ಜಾಗೃತಿ ಮೂಡಿಸುವ ಕಾರ್ಯ ನಡೆಸಿದ್ದು ಬಹು ರೋಚಕವಾಗಿತ್ತು. ಜು. 2015 ರಿಂದ ಇದುವರೆಗೂ ಮಹದಾಯಿಗಾಗಿ ಆಗ್ರಹಿಸಿ ಇಲ್ಲಿ ಧರಣಿ ನಡೆಸಲಾಗಿದ್ದರೂ ಕೂಡಾ ಸರ್ಕಾರಗಳು ಮೀನಮೇಷಮಾಡಿ ರೈತರನ್ನು ತೊಂದರೆಗೆ ಸಿಲುಕಿಸಿವೆ. ಈ ನಿಟ್ಟಿನಲ್ಲಿ ತಮಗೂ ಮಹದಾಯಿ ನೀರು ಕೊಡಿಸಬೇಕೆಂದು ಇದಾಗದಿದ್ದರೆ ದಯಾಮರಣ ನೀಡಿ ಎಂದು ದೆಹಲಿಗೆ ಬಂದು ಮನವಿ ಅರ್ಪಿಸಿದ್ದೇವು. ಆದರೆ ಇದು ಕಾರ್ಯಸಾಧ್ಯವಾಗದ ಕಾರಣದಿಂದ ದಯಾಮರಣ ಪಾಲಿಸಿ ಎಂದು ರಾಷ್ಟ್ರಪತಿಗಳಿಗೆ ಬರೆದ ಸಮಗ್ರ ಅರ್ಜಿಗಳನ್ನು ಸ್ವಾಮಿಗಳ ನೇತ್ರತ್ವದಲ್ಲಿ ಅಂಚೆ ಬಾಕ್ಸಗೆ ಹಾಕಲಾಯಿತು.
ಎಸ್‌.ಬಿ. ಜೋಗಣ್ಣವರ, ಮಹದಾಯಿ ಮಲಪ್ರಭೆ ನದಿ ಜೋಡನಾ ಹೋರಾಟ ಸಮಿತಿಯ ತಾಲೂಕಾ ಅಧ್ಯಕ್ಷ ಈರಬಸಪ್ಪ ಹೂಗಾರ, ರೈತ ಸೇನಾ ಕರ್ನಾಟಕ ತಾಲೂಕಾ ಉಪಾಧ್ಯಕ್ಷ ರಾಮು ಸಾಬಳೆ, ರಾಘವೇಂದ್ರ ಗುಜಮಾಗಡಿ, ಶ್ರೀಶೈಲ ಮೇಟಿ, ಹನುಮಂತ ಸರನಾಯ್ಕರ್‌, ರಮೇಶ ನಾಯ್ಕರ್‌, ವಾಸು ಚವ್ಹಾಣ, ಚನ್ನಮ್ಮ ಕರ್ಜಗಿ, ಅನಸಮ್ಮ ಶಿಂಧೆ, ನಾಗರತ್ನಾ ಸವಳಬಾವಿ, ಲಚ್ಚೆಮ್ಮ ಜ್ಯೋತೆಣ್ಣವರ, ಡಾ. ಭರತ ಬಿಡ್ನಾಳ,ಬಿ.ಎಚ್‌. ಪಠಾಣ. ಹಜರೇಸಾಬ ಮುಲ್ಲಾನವರ, ನಂದೀಶ ಮಠದ, ವೆಂಕಪ್ಪ ಹುಜರತ್ತಿ ಹಾಗೂ ವಿವಿಧ ಗ್ರಾಮಗಳಿಂದ ಆಗಮಿಸಿದ ರೈತರು ಹಾಗೂ ಮಹಿಳಾ ರೈತರು ಪಾಲ್ಗೊಂಡಿದ್ದರು.

loading...