ಅಕ್ರಮ ಕಸಾಯಿಖಾನೆ ಪತ್ತೆ, ಎಗ್ಗಿಲ್ಲದೆ ನಡೆದಿದೆ ಮಾಂಸ ಮಾರಾಟ

0
7
loading...

ಮಾಗಡಿ- ಕುದೂರು ಸಮೀಪದ ಕೋಡಿಪಾಳ್ಯದಲ್ಲಿ ಅಕ್ರಮ ಕಸಾಯಿಖಾನೆ ಪತ್ತೆಯಾಗಿದ್ದು , ಇಲ್ಲಿ ಪ್ರತಿ ನಿತ್ಯ ದನ-ಕರುಗಳ ಮಾರಣ ಹೋಮ ನಡೆಸಿ ನೂರಾರು ಕೆಜಿ ಮಾಂಸವನ್ನು ಮಾರಾಟ ಮಾಡುತ್ತಿದ್ದ ಅಂಶ ಬೆಳಕಿಗೆ ಬಂದಿದೆ. ಅಕ್ರಮ ಕಸಾಯಿ ಖಾನೆ ಮೇಲೆ ದಾಳಿ ನಡೆಸಿರುವ ಕುದೂರು ಪೊಲೀಸರು 7 ಮಂದಿಯನ್ನು ಬಂಧಿಸಿ 71 ದನ-ಕರುಗಳನ್ನು ರಕ್ಷಿಸಿದ್ದಾರೆ. ಸ್ಥಳದಲ್ಲಿ ಜಾನುವಾರುಗಳ ಅವಶೇಷ ಪತ್ತೆಯಾಗಿದ್ದು , ಕಸಾಯಿಖಾನೆಯಲ್ಲಿ ಕಳೆದ ಹಲವಾರು ವರ್ಷಗಳಿಂದ ಅಕ್ರಮವಾಗಿ ದನದ ಮಾಂಸ ಮಾರಾಟ ಮಾಡಲಾಗುತ್ತಿತ್ತು ಎನ್ನಲಾಗಿದೆ.
ಘಟನೆಯ ವಿವರ:
ಕುದೂರು ಠಾಣಾ ವ್ಯಾಪ್ತಿಯ ಕೋಡಿಪಾಳ್ಯದ ಸಮೀಪವಿರುವ ದೊಡ್ಡಲಾಯ ಮತ್ತು ಚಿಕ್ಕ ಲಾಯ ಗ್ರಾಮಗಳ ನಡುವೆ ಅಕ್ರಮ ಕಸಾಯಿಖಾನೆ ನಡೆಸಲಾಗುತ್ತಿದೆ. ಇಲ್ಲಿ ಪ್ರತಿ ನಿತ್ಯ ನೂರಾರು ದನ-ಕರುಗಳನ್ನು ವಧೆ ಮಾಡಲಾಗುತ್ತಿದೆ ಎಂಬ ಮಾಹಿತಿ ಪಡೆದ ಬೆಂಗಳೂರಿನ ಅನಿಮಲ್ ವೆಲ್ಫೇರ್ ಬೋರ್ಡ್ ಆಫ್ ಇಂಡಿಯಾದ ಪದಾಧಿಕಾರಿಗಳು ಕುದೂರು ಪೊಲೀಸರ ಸಹಾಯ ಪಡೆದು ದಾಳಿ ನಡೆಸಿದರು. ಆದರೆ ಸ್ಥಳದಲ್ಲಿ ಯಾವುದೇ ದನ-ಕರುಗಳು ಪತ್ತೆಯಾಗಲಿಲ್ಲ. ಆದರೆ ಪ್ರಾಣಿ ದಯಾ ಸಂಘದ ಪದಾಧಿಕಾರಿಗಳು ನಿನ್ನೆ ಇದೇ ಪ್ರದೇಶದಲ್ಲಿ ನೂರಾರು ದನಕರುಗಳಿದ್ದವು. ಆದರೆ ಈಗ ಯಾವುದೇ ಪ್ರಾಣಿಗಳಿಲ್ಲದಿರುವ ಬಗ್ಗೆ ಅನುಮಾನ ವ್ಯಕ್ತಪಡಿಸಿದರು.
ತಕ್ಷಣ ಕಾರ್ಯ ಪ್ರವೃತ್ತರಾದ ಪೊಲೀಸರು ಸುತ್ತಮುತ್ತ ಹುಡುಕಾಟ ನಡೆಸಿದಾಗ ಕಸಾಯಿಖಾನೆ ನಡೆಸುತ್ತಿದ್ದವನ ಮನೆಯ ಹಿಂಭಾಗದ ಕಾಡಿನಲ್ಲಿ ಕರುಗಳನ್ನು ಕಟ್ಟಿ ಹಾಕಲಾಗಿತ್ತು. ದನ-ಕರುಗಳು ಕೂಗಲು ಆಗದಂತೆ ಎಲ್ಲಾ ಕರುಗಳಿಗೂ ಬಾಯಿಗೆ ಹಗ್ಗ ಬಿಗಿದು ಕಾಲುಗಳನ್ನು ಕಟ್ಟಿ ಹಾಕಲಾಗಿತ್ತು. ತಕ್ಷಣ ಎಲ್ಲಾ ದನ-ಕರುಗಳನ್ನು ಬಂಧಮುಕ್ತಗೊಳಿಸಿ ಕೂಡಲೇ ಗುಬ್ಬಿ ಸಮೀಪವಿರುವ ಗೋ ಶಾಲೆಗೆ ರವಾನಿಸಲಾಗಿದೆ. ಕಸಾಯಿ ಖಾನೆ ಮಾಲೀಕ ಸೇರಿದಂತೆ 7 ಮಂದಿಯನ್ನು ಬಂಧಿಸಿರುವ ಕುದೂರು ಪೊಲೀಸರು ಪ್ರಕರಣ ದಾಖಲಿಸಿಕೊಂಡು ಮುಂದಿನ ತನಿಖೆ ನಡೆಸುತ್ತಿದ್ದಾರೆ.
ಹಲ್ಲೆ:
ಅನಿಮಲ್ ವೆಲ್ಫೇರ್ ಬೋರ್ಡ್ ಆಫ್ ಇಂಡಿಯಾದ ಸದಸ್ಯರು ಕಸಾಯಿಖಾನೆ ಮೇಲೆ ದಾಳಿ ನಡೆಸುವ ಸಂದರ್ಭದಲ್ಲಿ ತಮ್ಮ ಜತೆಗೆ ಕರೆದೊಯ್ದಿದ್ದ ಖಾಸಗಿ ಸುದ್ದಿ ವಾಹಿನಿ ವರದಿಗಾರ ಮತ್ತು ಛಾಯಾಗ್ರಾಹಕನ ಮೇಲೆ ಹಲ್ಲೆ ನಡೆಸಲಾಗಿದೆ. ಪೊಲೀಸರಿದ್ದರೂ ಪ್ರಾಣಿ ದಯಾ ಸಂಘದವರ ಮೇಲೂ ಕಸಾಯಿಖಾನೆಯಲ್ಲಿದ್ದವರು ಹಲ್ಲೆ ನಡೆಸಲು ಮುಂದಾದರು ಎನ್ನಲಾಗಿದೆ.
ಎಲ್ಲಿಗೆ ಸರಬರಾಜು:
ಕುದೂರು ಕಾಡಿನ ಅಕ್ರಮ ಕಸಾಯಿಖಾನೆಯಿಂದ ಹೊರ ಬರುತ್ತಿದ್ದ ದನದ ಮಾಂಸ ಎಲ್ಲಿಗೆ ಸರಬರಾಜಾಗುತ್ತಿತ್ತು ಎನ್ನುವುದು ನಿಗೂಢವಾಗಿದೆ. ನಾಯಿ ಕೊಡೆಗಳಂತೆ ತಲೆ ಎತ್ತುತ್ತಿರುವ ಬಿರಿಯಾನಿ ಸೆಂಟರ್ಗಳಿಗೆ ದನದ ಮಾಂಸ ಸರಬರಾಜಾಗುತ್ತಿತ್ತೇ ಎನ್ನುವ ಬಗ್ಗೆ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

loading...