ಅಡಕೆ ಗಿಡಕ್ಕೆ ಕೊಳೆ ರೋಗ ಅಪಾರ ಹಾನಿ

0
6
loading...

ಕನ್ನಡಮ್ಮ ಸುದ್ದಿ-ಶಿರಸಿ: ಅಡಕೆ ತೋಟದಲ್ಲಿ ಎಲ್ಲಿ ನೋಡಿದರಲ್ಲಿ ಉದುರಿದ ಎಳೆ ಅಡಕೆ ರಾಶಿ, ಎಲ್ಲ ರೈತರ ಮೊಗದಲ್ಲಿ ಭವಿಷ್ಯದ ಆತಂಕದ ಛಾಯೆ. `ಈ ಬಾರಿ ಅತೀ ವೃಷ್ಟಿಯಿಂದ ಇರುವ ಅಡಕೆ ಕೂಡ ನೆಲದ ಪಾಲಾಗಿದೆ. ಮುಂದಿನ ಜೀವನ ಹೇಗೆಂಬ ಪ್ರಶ್ನೆ ಕಾಡುತ್ತಿದೆ’ ಇದು ಉತ್ತರ ಕನ್ನಡ ಜಿಲ್ಲೆಯ ಬಹುತೇಕ ಅಡಕೆ ಕೃಷಿಕರ ನೋವಿನ ನುಡಿಯಾಗಿದೆ.
ಜಿಲ್ಲೆಯಲ್ಲಿ ಅಡಕೆ ಫಸಲನ್ನೇ ನಂಬಿಕೊಂಡಿರುವ 20 ಸಾವಿರಕ್ಕೂ ಹೆಚ್ಚಿನ ಕುಟುಂಬಳಿವೆ. ಕಳೆದ ವರ್ಷಕ್ಕೆ ಹೋಲಿಕೆ ಮಾಡಿದರೆ ಈ ಸಲ ಫಸಲು ಚೆನ್ನಾಗಿತ್ತು. ಆದರೆ ಒಂದೇ ಸಮನೆ ಸುರಿದ ಮಳೆಯಿಂದ ಗಿಡಗಳಿಗೆ ರೋಗ ಬಾಧಿಸಿದ್ದು ಅಪಾರ ಪ್ರಮಾಣದಲ್ಲಿ ಅಡಕೆ ನೆಲಕ್ಕುರುಳಿ ಹಾನಿಯಾಗಿವೆ. ರೋಗ ನಿಯಂತ್ರಣಕ್ಕೆ ಸಾವಿರಾರು ರೂಪಾಯಿ ವ್ಯಯಿಸಿ ಔಷಧಿ ಸಿಂಪರಣೆ ಮಾಡುತ್ತಿದ್ದರೂ ಪ್ರಯೋಜನ ಆಗುತ್ತಿಲ್ಲ. ಕೆಲವೇ ದಿನಗಳಲ್ಲಿ ಅಕ್ಕಪಕ್ಕದ ತೋಟಗಳಿಗೂ ಕೊಳೆ ರೋಗ ವ್ಯಾಪಿಸುತ್ತಿದ್ದು ರೋಗ ನಿಯಂತ್ರಿಸಲಾಗದೇ ಬೆಳೆಗಾರರು ಕೈಚೆಲ್ಲಿ ಕುಳಿತು ಕೊಳ್ಳುವಂತಾಗಿದೆ. ಜಿಲ್ಲೆಯಲ್ಲಿ 10ರಿಂದ 12 ಸಾವಿರ ಹೆ. ಪ್ರದೇಶದಲ್ಲಿ ಅಡಕೆ ಬೆಳೆಯಲಾಗುತ್ತಿದ್ದು, ಶೇ.30ರಷ್ಟು ಬೆಳೆ ಕೊಳೆರೋಗಕ್ಕೆ ತುತ್ತಾಗಿದೆ. ಜಿಲ್ಲೆಯಲ್ಲಿ ಸುಮಾರು 2 ಸಾವಿರ ಹೆಕ್ಟೇರ್‍ನಷ್ಟು ಪ್ರದೇಶದಲ್ಲಿ ಅತಿವಷ್ಟಿ ಹಾಗೂ ಕೊಳೆ ರೋಗದಿಂದ ಅಡಕೆ ಕಾಯಿಗಳು ಉದುರಿ ಹೆಚ್ಚಿನ ಹಾನಿಯಾದಾ ಬಗ್ಗೆ ಅಂದಾಜಿಸಲಾಗಿದೆ.

`ಎಳೆ ಅಡಕೆ ಬೀಳುತ್ತಿರುವುದರಿಂದ ಏನು ಮಾಡಲೂ ಸಾಧ್ಯವಾಗುತ್ತಿಲ್ಲ. ಪ್ರತಿ ದಿನ ಬುಟ್ಟಿ ಬುಟ್ಟಿ ಅಡಕೆ ಹಳ್ಳಕ್ಕೆ ಹಾಕಿ ತೋಟ ಸ್ವಚ್ಛವಾಗಿಡುವುದೇ ಸಮಸ್ಯೆಯಾಗಿದೆ. ಮಳೆಯ ಕಾರಣ ಸಿಂಪಡಿಸಿದ ಔಷಧಿಯ ಪ್ರಭಾವ ಸಾಕಾಗುವುದಿಲ್ಲ. ಇದರ ಜೊತೆಗೆ, ಅಡಕೆ ಗಿಡಗಳ ಒಳ ತಿರುಳುಗಳಿಗೂ ರೋಗದ ಸೋಂಕು ಹತ್ತುವ ಲಕ್ಷಣಗಳು ಈಗಿನ ಸ್ಥಿತಿಯಲ್ಲಿ ಕಂಡುಬರುತ್ತಿವೆ. ಮುಂದಿನ ದಿನಗಳಲ್ಲಿ ಮಲೆನಾಡಿನ ಅಡಕೆ ಬೆಳೆಗಾರರ ಜೀವನ ಕಷ್ಟಕರವಾಗಲಿದೆ. ಕೊಳೆ ರೋಗದಿಂದಾಗಿ ಅಪಾರ ಪ್ರಮಾಣದಲ್ಲಿ ಫಸಲು ನೆಲಕ್ಕುರುಳುತ್ತಿದ್ದು ಬೆಳೆಗಾರರು ಆರ್ಥಿಕವಾಗಿ ಸಂಕಷ್ಟಕ್ಕೀಡಾಗಿ, ಸರ್ಕಾರದ ಪರಿಹಾರದ ನಿರೀಕ್ಷೆಯಲ್ಲಿದ್ದಾರೆ’ ಎನ್ನುತ್ತಾರೆ ಅಡಕೆ ಬೆಳೆಗಾರ ಮಂಜುನಾಥ ನಾಯ್ಕ.
`ವೈಜ್ಞಾನಿಕ ಬಸಿಗಾಲುವೆ ನಿರ್ವಹಣೆ ಮಾಡಿದ್ದೇವೆ ಮತ್ತು ಮಳೆಗಾಲದ ಪ್ರಾರಂಭದಲ್ಲಿ ಮದ್ದು ಸಿಂಪರಣೆ ಮಾಡಿದ್ದೇವೆ. ಆದರೂ ನಿರಂತರ ಮಳೆಯಿಂದಾಗಿ ರೋಗ ನಿರ್ವಹಣೆ ಸಾಧ್ಯವಾಗದೆ ನಷ್ಟ ಸಂಭವಿಸಿದೆ. ಕೃಷಿ ನಿರ್ವಹಣೆಯ ಖರ್ಚನ್ನು ಸರಿದೂಗಿಸುವದೂ ಈ ಬಾರಿ ಸಾಧ್ಯವಿಲ್ಲ’ ಎನ್ನುತ್ತಾರೆ ಆಡಳ್ಳಿಯ ಕೃಷಿಕ ವೆಂಕಟ್ರಮಣ ಹೆಗಡೆ.

`ಕೊಳೆರೋಗದ ಪ್ರಮಾಣ ನೋಡಿದರೆ ಬೆಳೆಯಷ್ಟೆ ಅಲ್ಲ ಮರವನ್ನು ಉಳಿಸಿಕೊಳ್ಳುವದೇ ಕಷ್ಟ ಎಂಬ ಪರಿಸ್ಥಿತಿ ಇದೆ. ಸಾಲಮಾಡಿದ ರೈತರ ಬದುಕು ದುಸ್ಥರವಾಗಿದೆ. ಬೆಳೆಸಾಲದ ಕಂತು ತುಂಬುವ ಚಿಂತೆ ಕಾಡುತ್ತಿದೆ. ನಾನು ಕಳೆದ 35 ವರ್ಷದ ಈಚೆಗೆ ಈ ರೀತಿ ಕೊಳೆಬಂದಿದ್ದನ್ನು ನೋಡಿಲ್ಲ’ ಎನ್ನುವುದು ನೊಂದ ರೈತ ಶಿವರಾಮ ಹೆಗಡೆ ಆಡಳ್ಳಿ ಮಾತಾಗಿದೆ.
ಅಡಕೆಯನ್ನೇ ನಂಬಿ ಜೀವನ ಸಾಗಿಸುತ್ತಿರುವ ಇಲ್ಲಿನ ರೈತರು ಜೀವನ ನಿರ್ವಹಣೆಗಾಗಿ ಸರ್ಕಾರದ ಪರಿಹಾರವನ್ನು ಎದುರು ನೋಡುತ್ತಿದ್ದಾರೆ. ಕಂದಾಯ ಮತ್ತು ತೋಟಗಾರಿಕಾ ಇಲಾಖೆಯ ಅಧಿಕಾರಿಗಳು ಸ್ಥಳಕ್ಕೆ ಆಗಮಿಸಿ ಸೂಕ್ತ ಕ್ರಮ ಕೈಗೊಳ್ಳಲು ಗ್ರಾಮಸ್ಥರು ಆಗ್ರಹಿಸಿದ್ದಾರೆ.

loading...