ಅಭ್ಯರ್ಥಿಗಳ ಹಣೆಬರಹ ಮತಪೆಟ್ಟಿಗೆಯಲ್ಲಿ ಭದ್ರ

0
0
sdr
loading...

ಕನ್ನಡಮ್ಮ ಸುದ್ದಿ-ಸವಣೂರ: ಸ್ಥಳೀಯ ಸಂಸ್ಥೆಗಳ ಚುನಾವಣೆ ಪ್ರಾರಂಭವಾಗಿ ಮತದಾನ ಪ್ರಕ್ರಿಯೆಗೆ ಶುಕ್ರವಾರ ತೆರೆಬಿದ್ದಿದ್ದು, ಮತದಾರರು ಯಾರಿಗೆ ಆಶಿರ್ವದಿಸಿದ್ದಾರೆ ಎಂಬುದನ್ನು ಸೆ. 3ರಂದು ಕಾಯ್ದುನೋಡಬೇಕಾಗಿದೆ.
ಪುರಸಭೆ ವ್ಯಾಪ್ತಿಯ 27 ವಾರ್ಡಗಳ ಚುನಾವಣೆಗೆ ಅಂತಿಮವಾಗಿ 79 ಅಭ್ಯರ್ಥಿಗಳು ಕಣದಲ್ಲಿ ಉಳಿದು ಚುನಾವಣೆಯನ್ನು ಎದುರಿಸಿದ್ದಾರೆ. ಆಗಸ್ಟ್‌ 24 ರಿಂದ ಭಾರಿ ಬಿರಿಸಿನಿಂದ ಪ್ರಾರಂಭವಾಗಿದ್ದ ಪ್ರಚಾರ ಅಭ್ಯರ್ಥಿಗಳ ಪರ ವಿವಿಧ ಪಕ್ಷಗಳ ನಾಯಕರ, ಕಾರ್ಯಕರ್ತರ ಜೈಕಾರಗಳು ನಿತ್ಯ ನಿಬ್ಬಣವಾಗಿದ್ದವು. ಜನಸಂದಣಿಯ ಸ್ಥಳಗಳಲ್ಲಿ ನಡೆಯುತ್ತಿದ್ದ ರಾಜಕೀಯ ಲೆಕ್ಕಾಚಾರಗಳಿಗೆ ತೆರೆ ಬಿದ್ದು ಜೋರಾಗಿ ಮಳೆಬಂದು ನಿಂತಂತೆ ಊರು ಶಾಂತವಾಗಿದೆ.
ಪುರಸಭೆ ವ್ಯಾಪ್ತಿಯ ವಾರ್ಡಗಳಲ್ಲಿ ಸುಮಾರು 31558 ಮತದಾರರಿದ್ದು ಅದರಲ್ಲಿ 16221 ಪುರುಷ ಹಾಗೂ 15335 ಮಹಿಳಾ ಮತದಾರರಿದ್ದಾರೆ. ಬೆಳಗ್ಗೆ 7 ಗಂಟೆಯಿಂದ ಮತದಾನ ಪ್ರಕ್ರೀಯೆ ಪ್ರಾರಂಭವಾಗಿ ಸಾಯಂಕಾಲ 5 ಗಂಟೆಯವರೆಗೆ ಮತದಾನ ನಡೆಯಿತು.
ಬಹುತೇಕ ಎಲ್ಲ 27 ವಾರ್ಡ್‌ಗಳ ಪೈಕಿ 34 ಮತಗಟ್ಟೆಗಳಲ್ಲಿ ಶಾಂತಿಯುತ ಮತದಾನವಾಗಿದ್ದು, ಸಾಕಷ್ಟು ಪೋಲಿಸ್‌ ಬಂದೋಬಸ್ತ ಕೈಗೊಳ್ಳಲಾಗಿತ್ತು.
ಯಾವುದೇ ಗದ್ದಲಗಳು ನಡೆಯಬಹುದು ಎಂಬ ಮುನ್ಸೂಚನೆಯಿಂದ ಪೋಲಿಸ್‌ ಇಲಾಖೆ ಬಂದೋಬಸ್ತಗಾಗಿ ಸಾಕಷ್ಟು ಪೋಲಿಸ್‌ ಸಿಬ್ಬಂದಿಗಳನ್ನು ನಿಯೋಜನೆ ಮಾಡಲಾಗಿತ್ತು. ಚುನಾವಣಾ ಕಣದಲ್ಲಿದ್ದ 79 ಅಭ್ಯರ್ಥಿಗಳಲ್ಲಿ ಅಧಿಕಾರ ಭಾಗ್ಯ ಮತ ಪೆಟ್ಟಿಗೆಗಳಲ್ಲಿ ನಿಗೂಢವಾಗಿದೆ. ಪಟ್ಟಣದಾದ್ಯಂತ ಮತದಾನ ಯಾವುದೇ ತೊಂದರೆಯನ್ನು ಅನುಭವಿಸದಂತೆ ಶಾಂತಿಯುತವಾಗಿ ನಡೆದಿದ್ದು, ಯಾರ ಹಣೆಬರಹದಲ್ಲಿ ಅಧಿಕಾರ ಅನುಭವಿಸುವ ಅದೃಷ್ಟವಿದೆ ಎಂಬುದನ್ನು ಸೆಪ್ಟೆಂಬರ 03ರ ವರೆಗೆ ಕಾದು ನೋಡಬೇಕಿದೆ.

loading...