ಇಂಡೋನೆಷ್ಯಾದಲ್ಲಿ ಭಾರಿ ಭೂಕಂಪ, 86 ಬಲಿ

0
22
loading...

ಮಟರಮ್- ಇಂಡೋನೆಷ್ಯಾದಲ್ಲಿ ಭಾರಿ ಭೂಕಂಪ ಸಂಭವಿಸಿದ್ದು ಸತ್ತವರ ಸಂಖ್ಯೆ 86ಕ್ಕೇರಿದೆ. ಈ ದುರಂತದಲ್ಲಿ ನೂರಾರು ಮಂದಿ ಗಾಯಗೊಂಡಿದ್ದು, ಸಾವಿನ ಸಂಖ್ಯೆ ಮತ್ತಷ್ಟು ಹೆಚ್ಚಾಗುವ ಸಾಧ್ಯತೆ ಇದೆ. ಕಳೆದ ವಾರವಷ್ಟೇ ಮತ್ತೊಂದು ಪ್ರಬಲ ಭೂಕಂಪದಿಂದ ನಲುಗಿದ್ದ ಇಂಡೋನೆಷ್ಯಾದ ಪ್ರಮುಖ ಕರಾವಳಿ ದ್ವೀಪದ ಮೇಲೆ ಬಂದೆರಗಿದ ಭೂಕಂಪದಿಂದ ಆ ಪ್ರದೇಶ ಅಲ್ಲೋಲ್ಲಕಲ್ಲೋಲವಾಗಿದೆ. ನಿನ್ನೆ ಸಂಭವಿಸಿದ ಭಾರೀ ಭೂಕಂಪದಲ್ಲಿ ಈವರೆಗೆ 86 ಮಂದಿ ಮೃತಪಟ್ಟಿದ್ದಾರೆ. ನೂರಾರು ಕಟ್ಟಡಗಳು ಧ್ವಂಸಗೊಂಡಿವೆ ಎಂದು ರಾಷ್ಟ್ರೀಯ ವಿಪತ್ತು ನಿರ್ವಹಣಾ ಸಂಸ್ಥೆ ಉನ್ನತಾಧಿಕಾರಿಯೊಬ್ಬರು ಹೇಳಿದ್ದಾರೆ.
ಭಗ್ನಾವಶೇಷಗೊಂಡ ಕಟ್ಟಡಗಳು, ಶಾಲೆಗಳು, ಮಸೀದಿಗಳಲ್ಲಿ ಬದುಕುಳಿದಿರಬಹುದಾದವರ ಪತ್ತೆ ಮತ್ತು ರಕ್ಷಣೆ ಕಾರ್ಯ ಮುಂದುವರಿದಿದೆ. ಕೆಲವರನ್ನು ರಕ್ಷಿಸಲಾಗಿದೆ ಎಂದು ಸಂಸ್ಥೆಯ ವಕ್ತಾರ ಸುಟುಪೊಪುರ್ವೊ ನುಗ್ರೊಹೋ ಹೇಳಿದ್ದಾರೆ. ರಿಕ್ಟರ್ ಮಾಪಕದಲ್ಲಿ 6.9ರ ತೀವ್ರತೆಯ ಭೂಕಂಪವು ಲೊಮ್ಬೊಕ್ ದ್ವೀಪದ ನಿವಾಸಿಗಳು ಮತ್ತು ಪ್ರವಾಸಿಗರನ್ನು ಬಲಿ ತೆಗೆದುಕೊಂಡಿದೆ. ಮಟರಮ್ ನಗರದಲ್ಲಿ ಹೆಚ್ಚಿನ ಸಾವು-ನೋವು ಸಂಭವಿಸಿದೆ.
ಭೂಕಂಪದ ನಂತರ ಸುನಾಮಿ ಅಲೆ ಅಪ್ಪಳಿಸುವ ಸಾಧ್ಯತೆ ಬಗ್ಗೆ ಎಚ್ಚರಿಕೆ ನೀಡಲಾಗಿತ್ತಾದರೂ ನಂತರ ಆ ಹೇಳಿಕೆಯನ್ನು ಅಧಿಕಾರಿಗಳು ಹಿಂದಕ್ಕೆ ಪಡೆದರು.
ಇಂಡೋನೆಷ್ಯಾದ ಸುಮತ್ರಾ ದ್ವೀಪದಲ್ಲಿ 2004ರಲ್ಲಿ ಸಾಗರಗರ್ಭದಲ್ಲಿ ಸಂಭವಿಸಿದ 9.3ರ ತೀವ್ರತೆಯ ಭೂಕಂಪ ಮತ್ತು ನಂತರ ಅಪ್ಪಳಿಸಿದ ಸುನಾಮಿಯಿಂದಾಗಿ 1.68,000 ಜನರು ದುರಂತ ಸಾವಿಗೀಡಾಗಿದ್ದರು.

loading...